ಲಖನೌ: ದೇಶದಲ್ಲಿ ಗೋಹತ್ಯೆ ನಿಷೇಧ ಹಾಗೂ ಗೋವನ್ನು ರಾಷ್ಟ್ರೀಯ ಸಂರಕ್ಷಿತ ಪ್ರಾಣಿ (Cow As National Animal) ಎಂಬುದಾಗಿ ಕೇಂದ್ರ ಸರ್ಕಾರ ಘೋಷಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ಸೂಚಿಸಿದೆ. ಗೋಹತ್ಯೆ ಹಾಗೂ ಸಾಗಣೆ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ವಿರುದ್ಧ ದಾಖಲಾದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಬೇಕು ಎಂದು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಶಮೀಮ್ ಅಹ್ಮದ್, ಅರ್ಜಿ ರದ್ದುಗೊಳಿಸಿದರು. ಹಾಗೆಯೇ, ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದರು.
“ನಾವು ಜಾತ್ಯತೀತ ರಾಷ್ಟ್ರದಲ್ಲಿ ಬದುಕುತ್ತಿದ್ದೇವೆ. ಹಾಗಾಗಿ, ಎಲ್ಲರೂ ಎಲ್ಲ ಧರ್ಮಗಳನ್ನು ಗೌರವಿಸಬೇಕು. ಹಿಂದು ಧರ್ಮದಲ್ಲಿ ಗೋವುಗಳಿಗೆ ಗೌರವಾನ್ವಿತ ಸ್ಥಾನವಿದೆ. ವೇದಗಳ ಕಾಲದಿಂದಲೂ ಗೋವುಗಳಿಗೆ ಪವಿತ್ರ ಸ್ಥಾನ ನೀಡಲಾಗಿದೆ. ಹಾಲು, ಮೊಸಲು, ಬೆಣ್ಣೆ, ತುಪ್ಪ ಸೇರಿ ಗೋವಿನ ಹಲವು ಉತ್ಪನ್ನಗಳು ಆರ್ಥಿಕತೆಯೊಂದಿಗೆ ಬೆಸೆದುಕೊಂಡಿದೆ” ಎಂದರು.
ಬ್ರಹ್ಮನ ಪುರೋಹಿತರು ಹಾಗೂ ಗೋವುಗಳನ್ನು ಏಕಕಾಲಕ್ಕೆ ಸೃಷ್ಟಿಸಿದ ಎಂದು ಉಲ್ಲೇಖವಿದೆ. ಶಿವನು ಎತ್ತುಗಳನ್ನು ತನ್ನ ವಾಹನವನ್ನಾಗಿ ಮಾಡಿಕೊಂಡ ಎಂಬ ನಂಬಿಕೆಯೂ ಇದೆ. ಹಾಗಾಗಿ, ಹಾಲು ಕೊಡುವ ಹಸುಗಳ ಹತ್ಯೆಯನ್ನು ನಿಷೇಧಿಸಬೇಕು. ಗೋವನ್ನು ರಾಷ್ಟ್ರೀಯ ಸಂರಕ್ಷಿತ ಪ್ರಾಣಿ ಎಂತಲೂ ಘೋಷಿಸಬೇಕು” ಎಂದು ಹೇಳಿದರು. ಗೋವನ್ನು ರಾಷ್ಟ್ರೀಯ ಪ್ರಾಣಿ ಎಂಬುದಾಗಿ ಘೋಷಿಸಬೇಕು ಎಂದು ಹಲವು ವರ್ಷಗಳಿಂದಲೂ ಹಿಂದು ಸಂಘಟನೆಗಳು ಆಗ್ರಹಿಸುತ್ತಲೇ ಇವೆ.
ಇದನ್ನೂ ಓದಿ: ರಾಜ ಮಾರ್ಗ ಅಂಕಣ : ಪುಣ್ಯಕೋಟಿ ಎಂಬ ಗೋವು, ಹುಲಿ ಮತ್ತು ಮುಗ್ಧತೆ! ಆ ಹಸಿದ ಹೆಬ್ಬುಲಿ ಬೆಟ್ಟದಿಂದ ಹಾರಿ ಸತ್ತಿದ್ದು ಸರೀನಾ?