ನವದೆಹಲಿ: ಭಾರತದ ಇಸ್ರೋ ಕೈಗೊಂಡ ಚಂದ್ರಯಾನ 3 (Chandrayaan 3) ಯಶಸ್ವಿಯಾಗಿದೆ. ಚಂದಿರನ ಅಂಗಳದಲ್ಲಿ ರೋವರ್ ಐತಿಹಾಸಿಕ ಹೆಜ್ಜೆಗಳನ್ನು ಇಡುವ ಜತೆಗೆ ಸಂಶೋಧನೆಯಲ್ಲೂ ತೊಡಗಿದೆ. ಹಾಗಾಗಿ, ಭಾರತದ ವಿಜ್ಞಾನಿಗಳ ಬಗ್ಗೆ ಜಗತ್ತಿನಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ, “ಚಂದ್ರನನ್ನು ಹಿಂದು ರಾಷ್ಟ್ರ ಎಂಬುದಾಗಿ ಘೋಷಿಸಬೇಕು” ಎಂದು ಸ್ವಾಮಿ ಚಕ್ರಪಾಣಿ ಮಹಾರಾಜ್ (Swami Chakrapani Maharaj) ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಅಖಿಲ ಭಾರತ ಹಿಂದು ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಸ್ವಾಮಿ ಚಕ್ರಪಾಣಿ ಮಹಾರಾಜ್ ಅವರು ಈ ಕುರಿತು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (ಮೊದಲು ಟ್ವಿಟರ್) ಅಪ್‌ಲೋಡ್ ಮಾಡಿದ್ದಾರೆ. “ಚಂದ್ರನನ್ನು ಹಿಂದು ರಾಷ್ಟ್ರ ಎಂಬುದಾಗಿ ಘೋಷಿಸಿ ಸಂಸತ್‌ನಲ್ಲಿ ನಿರ್ಣಯ ತೆಗೆದುಕೊಳ್ಳಬೇಕು. ಹಾಗೆಯೇ, ಲ್ಯಾಂಡರ್ ಇಳಿದ ಜಾಗವಾದ ಶಿವಶಕ್ತಿ ಪ್ರದೇಶವನ್ನು ಚಂದ್ರನ ರಾಜಧಾನಿಯನ್ನಾಗಿ ಘೋಷಿಸಬೇಕು. ಹಾಗಾದಾಗ ಮಾತ್ರ ಚಂದ್ರನಲ್ಲಿ ಬೇರೆ ಸಿದ್ಧಾಂತ ಇರುವವರು ಬರುವುದಿಲ್ಲ” ಎಂದು ಹೇಳಿದ್ದಾರೆ. ಇವರ ವಿಡಿಯೊ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸನ್ಯಾಸಿಯ ವೈರಲ್ ವಿಡಿಯೊ
ಒಂದಷ್ಟು ಜನ ಸ್ವಾಮಿ ಚಕ್ರಪಾಣಿ ಮಹಾರಾಜ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರೆ, ಮತ್ತೊಂದಿಷ್ಟು ಜನ ಗೇಲಿ ಮಾಡಿದ್ದಾರೆ. “ಸ್ವಾಮಿ ಚಕ್ರಪಾಣಿ ಮಹಾರಾಜ್ ಅವರನ್ನು ಚಂದ್ರನಲ್ಲಿಗೇ ಕಳುಹಿಸಬೇಕು. ಹಾಗೆಯೇ, ಇವರನ್ನೇ ಚಂದ್ರನ ಮೊದಲ ಪ್ರಧಾನಿ ಎಂಬುದಾಗಿ ಘೋಷಿಸಬೇಕು” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, “ಇವರೆಲ್ಲ ಎಲ್ಲಿಂದ ಬರುತ್ತಾರೆ” ಎಂದು ಕೇಳಿದ್ದಾರೆ. ಹೀಗೆ ಹಲವು ಜನ ವಿವಿಧ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: Chandrayaan 3: ದೇಗುಲ ಭೇಟಿ ಕುರಿತು ಇಸ್ರೋ ಅಧ್ಯಕ್ಷ ಸೋಮನಾಥ್ ಮೊದಲ ಪ್ರತಿಕ್ರಿಯೆ; ಕುಹಕಿಗಳಿಗೆ ಕುಟುಕಿದ್ದು ಹೀಗೆ…
ಇಂತಹ ಹೇಳಿಕೆ ಇದೇ ಮೊದಲಲ್ಲ
ಸ್ವಾಮಿ ಚಕ್ರಪಾಣಿ ಮಹಾರಾಜ್ ಅವರು ಇಂತಹ ಅಚ್ಚರಿಯ ಹೇಳಿಕೆಗಳನ್ನು ನೀಡುವಲ್ಲಿ ನಿಸ್ಸೀಮರಾಗಿದ್ದಾರೆ. 2018ರಲ್ಲಿ ಕೇರಳದಲ್ಲಿ ನೆರೆ ಬಂದಾಗ, “ಕೇರಳದ ಜನ ಗೋಮಾಂಸ ಸೇವಿಸುತ್ತಾರೆ. ಅದಕ್ಕಾಗಿಯೇ ಅಲ್ಲಿ ನೆರೆ ಬಂದಿದೆ” ಎಂದು ಹೇಳಿದ್ದರು. ಇನ್ನು ಕೊರೊನಾ ಮೊದಲ ಅಲೆಯ ವೇಳೆ ಇವರು “ಗೋಮೂತ್ರ ಪಾರ್ಟಿ” ಆಯೋಜಿಸಿ ಅಚ್ಚರಿ ಮೂಡಿಸಿದ್ದರು. ಈಗ ಚಂದ್ರನನ್ನು ಹಿಂದು ರಾಷ್ಟ್ರ ಎಂಬುದಾಗಿ ಘೋಷಿಸಿ ಎಂದು ಹೇಳುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.