ನವದೆಹಲಿ: ಡೀಪ್‌ಫೇಕ್ ವಿಡಿಯೊ (Deepfake) ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ನಕಲಿ ವಿಡಿಯೊ ವೈರಲ್ ಆದ ಬಳಿಕ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಮಹಿಳೆಯರ ಸುರಕ್ಷತೆ ಬಗ್ಗೆ ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಕೇಂದ್ರ ಸರ್ಕಾರ ಸಾಮಾಜಿಕ ಜಾಲತಾಣಗಳಿಗೆ ಕಾನೂನಿನ ಎಚ್ಚರಿಕೆ ರವಾನಿಸಿದೆ. ಅಸ್ತಿತ್ವದಲ್ಲಿರುವ ಕಾನೂನನ್ನು ಪಾಲಿಸುವಂತೆ ಪುನರುಚ್ಚರಿಸಿದೆ. ಯಾವುದೇ ಸಂವಹನ ಸಾಧನ ಅಥವಾ ಕಂಪ್ಯೂಟರ್ ಮೂಲಕ ವ್ಯಕ್ತಿಗತವಾಗಿ ಮೋಸ ಮಾಡುವವರಿಗೆ 3 ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಬಹುದಾದ ಕಾನೂನನ್ನು ಜ್ಞಾಪಿಸಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ(Ministry of Electronics and Information Technology) ಸಾಮಾಜಿಕ ಮಾಧ್ಯಮಗಳಿಗೆ ಸೂಚನೆಗಳನ್ನು ಬಿಡುಗಡೆ ಮಾಡಿದೆ. ಡೀಪ್‌ಫೇಕ್ ಒಳಗೊಂಡಿರುವ ಕಾನೂನು, ನಿಬಂಧನೆಗಳನ್ನು ಮತ್ತು ಅವುಗಳ ದಂಡಗಳನ್ನು ಇದು ಒತ್ತಿ ಹೇಳಿದೆ.
2000ರ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 ಡಿ ಅನ್ನು ಸರ್ಕಾರ ಉಲ್ಲೇಖಿಸಿದೆ. ‘ಕಂಪ್ಯೂಟರ್ ಸಂಪನ್ಮೂಲವನ್ನು ಬಳಸಿಕೊಂಡು ವ್ಯಕ್ತಿಗತವಾಗಿ ಮೋಸ ಮಾಡುವ ಶಿಕ್ಷೆ’ಗೆ ಸಂಬಂಧಿಸಿದ ಕಾನೂನನ್ನು ಈ ವಿಭಾಗವು ಹೇಳುತ್ತದೆ. “ಯಾವುದೇ ಸಂವಹನ ವಸ್ತು ಅಥವಾ ಕಂಪ್ಯೂಟರ್ ಸಂಪನ್ಮೂಲದ ಮೂಲಕ ವ್ಯಕ್ತಿಗತವಾಗಿ ಮೋಸ ಮಾಡುವವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಲಾಗುತ್ತದೆʼʼ ಎಂಬುದನ್ನು ನೆನಪಿಸಿದೆ.
— Rashmika Mandanna (@iamRashmika) November 6, 2023
ವೈರಲ್ ಆದ ವಿಡಿಯೊದಲ್ಲೇನಿದೆ?
ಆಂಗ್ಲೋ ಇಂಡಿಯನ್ ಯುವತಿ ಝರಾ ಪಟೇಲ್ ಅವರ ಹಾಟ್ ವಿಡಿಯೊಗೆ ರಶ್ಮಿಕಾ ಮಂದಣ್ಣ ಮುಖ ಅಂಟಿಸಿ ವೈರಲ್ ಮಾಡಲಾಗಿತ್ತು. ಅಕ್ಟೋಬರ್ 9ರಂದು ಲಿಫ್ಟ್ ಏರುತ್ತಿರುವ ವಿಡಿಯೊವನ್ನು ಝರಾ ಪೋಸ್ಟ್ ಮಾಡಿದ್ದರು. ಅದಕ್ಕೆ ರಶ್ಮಿಕಾ ಮುಖವನ್ನು ಎಡಿಟ್ ಮಾಡಲಾಗಿತ್ತು. ಈ ಬಗ್ಗೆ ಹಿರಿಯ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಗಮನ ಸೆಳೆದು ಕಾನೂನು ಕ್ರಮ ಕೈಗೊಳ್ಳುವಂತೆ ರಶ್ಮಿಕಾ ಬಳಿ ಸೂಚಿಸಿದ್ದರು.
ಇದನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣ ವಿಡಿಯೊ ವೈರಲ್; ಕಾನೂನು ಕ್ರಮ ಕೈಗೊಳ್ಳಿ ಎಂದ ಅಮಿತಾಭ್!
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿ, ʼʼಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಇಂಟರ್ನೆಟ್ ಬಳಸುವ ಎಲ್ಲ ಡಿಜಿಟಲ್ ನಾಗರಿಕರ ಸುರಕ್ಷತೆ ಮತ್ತು ವಿಶ್ವಾಸವನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ” ಎಂದಿದ್ದರು.
2023ರ ಎಪ್ರಿಲ್‌ನಲ್ಲಿ ಸೂಚಿಸಲಾದ ಐಟಿ ನಿಯಮಗಳನ್ನು ತಿಳಿಸುತ್ತಾ ಅವರು, “ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಗೆ ಕಾನೂನು ಬಾಧ್ಯತೆಯಿದೆ. ಯಾವುದೇ ಬಳಕೆದಾರರು ಯಾವುದೇ ತಪ್ಪು ಮಾಹಿತಿಯನ್ನು ಪೋಸ್ಟ್ ಮಾಡದಂತೆ ಖಚಿತಪಡಿಸಿಕೊಳ್ಳಬೇಕು. ಯಾವುದೇ ಬಳಕೆದಾರರು ಅಥವಾ ಸರ್ಕಾರ ಈ ಬಗ್ಗೆ ವರದಿ ಮಾಡಿದಾಗ 36 ಗಂಟೆಗಳಲ್ಲಿ ತಪ್ಪು ಮಾಹಿತಿಯನ್ನು ತೆಗೆದುಹಾಕಬೇಕು. ಪ್ಲಾಟ್‌ಫಾರ್ಮ್‌ಗಳು ಇದನ್ನು ಅನುಸರಿಸದಿದ್ದರೆ ನಿಯಮ 7ರ ಪ್ರಕಾರ ಮತ್ತು IPCಯ ನಿಬಂಧನೆಗಳ ಅಡಿಯಲ್ಲಿ ಬಾಧಿತ ವ್ಯಕ್ತಿಯು ಆನ್‌ಲೈನ್ ವೇದಿಕೆಗಳನ್ನು ನ್ಯಾಯಾಲಯಕ್ಕೆ ಎಳೆಯಬಹುದು. ಡೀಪ್‌ಫೇಕ್‌ಗಳು ಇತ್ತೀಚಿನ ಹೆಚ್ಚು ಅಪಾಯಕಾರಿ ಮತ್ತು ಹಾನಿಕರವಾದ ತಪ್ಪು ಮಾಹಿತಿ ಮೂಲಗಳಾಗಿವೆ” ಎಂದು ಹೇಳಿದ್ದರು. ಈ ಮಧ್ಯೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರ ಚಿತ್ರವನ್ನೂ ಎಡಿಟ್ ಮಾಡಿ ಹರಿಯಬಿಡಲಾಗಿತ್ತು. ಸದ್ಯ ಅದನ್ನು ಡಿಲೀಟ್ ಮಾಡಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ