ಮುಂಬೈ: ಕನ್ನಡದ ಮೂಲದ ಬಾಲಿವುಡ್‌ನ ಖ್ಯಾತ ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ(expecting first child). ದಿ ವೀಕ್ ವರದಿಯ ಪ್ರಕಾರ, ದೀಪಿಕಾ ಅವರೀಗ ತಮ್ಮ ಎರಡನೇ ಟ್ರೈಮೆಸ್ಟರ್‌ನಲ್ಲಿದ್ದಾರೆ. ಆದರೆ, ಈ ಬಗ್ಗೆ ದೀಪಿಕಾ ಆಗಲಿ ಅವರ ಪತಿ ಖ್ಯಾತ ನಟ ರಣವೀರ್ ಸಿಂಗ್ (Ranveer Singh) ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ದಿ ವೈಟ್ ಲೋಟಸ್ ಸೀಸನ್ 3 ರಿಂದ ದೀಪಿಕಾ ಹೊರಗುಳಿದಿದ್ದಾರೆ ಎಂದು ವರದಿಯಾದ ಕೆಲವೇ ದಿನಗಳಲ್ಲಿ ಆಕೆಯು ಗರ್ಭಿಣಿಯಾಗಿರುವ ಸುದ್ದಿ ಹೊರಬಂದಿರುವುದು ಕುತೂಹಲಕಾರಿಯಾಗಿದೆ. ಎಚ್‌ಒಬಿಯ ಅತ್ಯಂತ ಜನಪ್ರಿಯ ಶೋ ಆಗಿರುವ ದಿ ವೈಟ್ ಲೋಟಸ್ ಸೀಸನ್ 3ರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇತ್ತು. ಆದರೆ, ವಾರಾಂತ್ಯದಲ್ಲಿ ದೀಪಿಕಾ ಕಾರ್ಯಕ್ರಮದಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ.
ಏತನ್ಮಧ್ಯೆ, ದೀಪಿಕಾ ಗರ್ಭಿಣಿಯಾಗಿದ್ದಾರೆಂಬ ವದಂತಿಗಳಿಗೆ ಒಳಗಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ತಿಂಗಳು, ‘ಫೈಟರ್’ ಚಿತ್ರದ ಪ್ರಚಾರದ ಫೋಟೋಗಳನ್ನು ದೀಪಿಕಾ ಹಂಚಿಕೊಂಡಾಗ, ಅಭಿಮಾನಿಗಳು ಹೊಟ್ಟೆ ಉಬ್ಬಿರುವುದನ್ನು ಅನ್ನು ಗಮನಿಸಿದ್ದಾರೆ. ಅಲ್ಲದೇ, ಕಾಮೆಂಟ್ ವಿಭಾಗದಲ್ಲಿ ಗರ್ಭಿಣಿಯೇ ಎಂಬ ಪ್ರಶ್ನೆಗಳು ತುಂಬಿದ್ದವು.
ಈ ವರ್ಷದ ಆರಂಭದಲ್ಲಿ ದೀಪಿಕಾ ರಣವೀರ್ ಜೊತೆ ಮಕ್ಕಳನ್ನು ಹೊಂದಲು ಬಯಸುವುದಾಗಿ ಹೇಳಿದ್ದರು. ಪತ್ರಿಕೆಯೊಂದಿಗೆ ಮಾತನಾಡಿದ್ದ ದೀಪಿಕಾ, “ಖಂಡಿತವಾಗಿಯೂ. ರಣವೀರ್ ಮತ್ತು ನಾನು ಮಕ್ಕಳನ್ನು ಪ್ರೀತಿಸುತ್ತೇವೆ. ನಾವು ನಮ್ಮ ಸ್ವಂತ ಕುಟುಂಬವನ್ನು ಪ್ರಾರಂಭಿಸುವ ದಿನಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ” ಎಂದು ಹೇಳಿದ್ದರು.
ಇತ್ತೀಚೆಗೆ ಹೃತಿಕ್ ರೋಷನ್ ಜತೆಗೆ ಫೈಟರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ದೀಪಿಕಾ ಅವರು ಇನ್ನೂ ಕೆಲವು ಚಿತ್ರಗಳು ಬಿಡುಗಡೆಗೆ ಕಾದಿವೆ. ನಟ ಪ್ರಭಾಸ್ ಜತೆಗೆ ಕಲ್ಕಿ 2989 ಸೇರಿದಂತೆ ಇನ್ನೂ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.
ಖ್ಯಾತ ಬ್ಯಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ ಅವರ ಪುತ್ರಿಯಾಗಿರುವ ದೀಪಿಕಾ ಪಡುಕೋಣೆ ಅವರು ಮಾಡಲಿಂಗ್ ಮೂಲಕ ಸಿನಿಮಾ ಜಗತ್ತಿಗೆ ಕಾಲಿಟ್ಟರು. ನಟ ಉಪೇಂದ್ರ ಅವರ ಜತೆಗೆ ಮೊದಲ ಬಾರಿಗೆ ಐಶ್ವರ್ಯ ಎಂಬ ಕನ್ನಡ ಚಿತ್ರದಲ್ಲಿ ಕಾಣಿಸಿಕೊಂಡರು. ನಂತರ ಬಾಲಿವುಡ್‌ಗೆ ಹಾರಿದರು. ಶಾರುಖ್ ಖಾನ್ ಸೇರಿದಂತೆ ಖ್ಯಾತ ನಟರ ಜತೆ ಅಭಿನಯಿಸಿದ್ದಾರೆ. ಸದ್ಯ ಅವರು ಸಮಕಾಲೀನ ನಟಿಯರಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: Deepika Padukone Shimmer Saree Fashion: ಶಿಮ್ಮರ್ ಸೀರೆಯಲ್ಲಿ ನಟಿ ದೀಪಿಕಾ ಪಡುಕೋಣೆಯಂತೆ ಮಿನುಗಬೇಕೆ?! ಹಾಗಾದಲ್ಲಿ ಹೀಗೆ ಸ್ಟೈಲಿಂಗ್ ಮಾಡಿ!