ನವದೆಹಲಿ: 2019ರ ಮಾನಹಾನಿ ಪ್ರಕರಣದಲ್ಲಿ ಕೆಳ ನ್ಯಾಯಾಲಯ ನೀಡಿದ್ದ ಶಿಕ್ಷೆಗೆ ತಡೆ ನೀಡಲು ಸೂರತ್ ಸೆಷನ್ ಕೋರ್ಟ್ ನಿರಾಕರಿಸಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಗುಜರಾತ್ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಸಂಬಂಧ ಅವರು ಮಂಗಳವಾರ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಕರ್ನಾಟಕದ ಪ್ರಚಾರ ರ್ಯಾಲಿಯೊಂದರಲ್ಲಿ ಮೋದಿ ಅಡ್ಡಹೆಸರು ಕುರಿತು ಅವಮಾನಕಾರಿಯಾಗಿ ಮಾತನಾಡಿದ್ದರು ಎಂದು ಆರೋಪಿಸಿ, ಅವರ ವಿರುದ್ಧ ಸೂರತ್ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು. ನ್ಯಾಯಾಲಯವು ಈ ಕುರಿತು ವಿಚಾರಣೆ ನಡೆಸಿ ಕಳೆದು ತಿಂಗಳ ತೀರ್ಪು ಪ್ರಕಟಿಸಿ, 2 ವರ್ಷ ಜೈಲು ಶಿಕ್ಷೆ ಘೋಷಿಸಿತ್ತು ಪರಿಣಾಮ ಅವರ ತಮ್ಮ ಲೋಕಸಭೆ ಸದಸ್ಯತ್ವವನ್ನು ಕಳೆದುಕೊಂಡಿದ್ದರು. ಈ ಶಿಕ್ಷೆಯನ್ನು ಪ್ರಶ್ನಿಸಿ ಅವರು ಸೂರತ್ ಸೆಷನ್ ಕೋರ್ಟ್‌ಗೆ ಮೊರೆ ಹೋಗಿದ್ದರು. ಸೆಷನ್ ಕೋರ್ಟ್ ಕೂಡ ಶಿಕ್ಷೆಗೆ ತಡೆ ನೀಡಲು ನಿರಾಕರಿಸಿತ್ತು. ಹಾಗಾಗಿ ಅವರು ಈಗ ಗುಜರಾತ್ ಹೈಕೋರ್ಟ್ ಮೊರೆ ಹೋಗಿದ್ದಾರೆ. ರಾಹುಲ್ ಗಾಂಧಿ ಅವರು ಕೇರಳ ವಯನಾಡ ಕ್ಷೇತ್ರದರಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.
ಸರಕಾರಿ ಬಂಗಲೆ ತೊರೆದ ರಾಹುಲ್ ಗಾಂಧಿ
2019ರಲ್ಲಿ ಮೋದಿ ಉಪನಾಮಕ್ಕೆ ಮಾಡಿದ ಅಪಮಾನದ ಕೇಸ್ನಲ್ಲಿ ದೋಷಿಯಾಗಿ, ಸಂಸದ ಸ್ಥಾನದಿಂದಲೂ ಅನರ್ಹಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಏಪ್ರಿಲ್ 22, ಶನಿವಾರ ದೆಹಲಿಯಲ್ಲಿರುವ ತಮ್ಮ ಸರ್ಕಾರಿ ಬಂಗಲೆಯನ್ನು ತೊರೆದಿದ್ದಾರೆ.
ಲ್ಯುಟೆನ್ಸ್ ದೆಹಲಿಯಲ್ಲಿರುವ 12 ತುಘಲಕ್ ಲೇನ್ನಲ್ಲಿ ಇರುವ ಸರ್ಕಾರಿ ಬಂಗಲೆಯಲ್ಲಿ ರಾಹುಲ್ ಗಾಂಧಿ 2005ರಿಂದಲೂ ವಾಸವಾಗಿದ್ದರು. ಆದರೆ ಸಂಸದನ ಸ್ಥಾನದಿಂದ ಅನರ್ಹಗೊಂಡ ಬೆನ್ನಲ್ಲೇ ಲೋಕಸಭಾ ವಸತಿ ಕಾರ್ಯಾಲಯ ರಾಹುಲ್ ಗಾಂಧಿಯವರಿಗೆ ನೋಟಿಸ್ ನೀಡಿ, ಏಪ್ರಿಲ್ 22ರೊಳಗೆ ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ಸೂಚಿಸಿತ್ತು. ಅದರಂತೆ ಇಂದು ಅವಧಿ ಮುಗಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಬಂಗಲೆಯನ್ನು ಬಿಟ್ಟಿದ್ದಾರೆ.
ಇದನ್ನೂ ಓದಿ: Rahul Gandhi: ಸತ್ಯ ಹೇಳಿದ್ದಕ್ಕೆ ಮನೆಬಿಡಬೇಕಾಯಿತು ಎಂದ ಕಾಂಗ್ರೆಸ್ ನಾಯಕ!
ಸರ್ಕಾರಿ ಬಂಗಲೆಯನ್ನು ತೊರೆದ ಬೆನ್ನಲ್ಲೇ ಮಾಧ್ಯಮಗಳ ಜತೆ ಮಾತನಾಡಿದ ರಾಹುಲ್ ಗಾಂಧಿ ‘ನಾನು ಸತ್ಯವನ್ನು ಹೇಳಿದ್ದಕ್ಕೆ ಬೆಲೆ ತೆರುತ್ತಿದ್ದೇನೆ. ಅದಕ್ಕಾಗಿಯೇ ಬಂಗಲೆ ಬಿಡಬೇಕಾಗಿ ಬಂತು’ ಎಂದು ಹೇಳಿದ್ದಾರೆ. ಅದಕ್ಕೂ ಮೊದಲು ಏಪ್ರಿಲ್ 11ರಂದು ಮಾತನಾಡಿದ್ದ ರಾಹುಲ್ ಗಾಂಧಿ ‘ನಾನು ಅನರ್ಹತೆಗೆಲ್ಲ ಹೆದರುವುದಿಲ್ಲ. ನನಗೆ ಸರ್ಕಾರಿ ಬಂಗಲೆಯಲ್ಲಿ ವಾಸಿಸಲು ಆಸಕ್ತಿಯೂ ಇಲ್ಲ’ ಎಂದು ಹೇಳಿದ್ದರು. ‘ಸಂಸದ ಸ್ಥಾನ ಎಂಬುದು ಒಂದು ಟ್ಯಾಗ್. ಇದೊಂದು ಸ್ಥಾನ ಮತ್ತು ಹುದ್ದೆ. ಬಿಜೆಪಿ ನನ್ನಿಂದ ಈ ಸಂಸದನ ಸ್ಥಾನ/ಟ್ಯಾಗ್/ಹುದ್ದೆಯನ್ನು ಕಿತ್ತುಕೊಳ್ಳಬಹುದು. ಮನೆಯನ್ನೂ ಕಸಿದುಕೊಂಡು ನನ್ನನ್ನು ಜೈಲಿನಲ್ಲಿ ಇಡಬಹುದು. ಆದರೆ ನಾನು ವಯಾನಾಡ್ನ ಜನರನ್ನು ಪ್ರತಿನಿಧಿಸುವುದರಿಂದ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದಿದ್ದರು.