ನವದೆಹಲಿ: ಭಾರತವು ರಕ್ಷಣಾ ಶಸ್ತ್ರಾಸ್ತ್ರಗಳ ಉತ್ಪಾದನೆಯಲ್ಲಿ ದಿನೇದಿನೆ ಸ್ವಾವಲಂಬನೆ ಸಾಧಿಸುತ್ತಿದೆ. ಶಸ್ತ್ರಾಸ್ತ್ರಗಳಿಂದ ಹಿಡಿದು ಯುದ್ಧನೌಕೆಗಳನ್ನು ಕೂಡ ಭಾರತದಲ್ಲಿಯೇ ನಿರ್ಮಿಸಲಾಗುತ್ತಿದೆ. ಮೇಕ್ ಇಂಡಿಯಾ, ಆತ್ಮನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ದೇಶೀಯ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದರ ಜತೆಗೆ ಭಾರತದ ರಕ್ಷಣಾ ರಫ್ತು (Defence Exports) ಕೂಡ ಏರಿಕೆಯಾಗಿದ್ದು, 2022-23ನೇ ಸಾಲಿನಲ್ಲಿ ಶಸ್ತ್ರಾಸ್ತ್ರಗಳ ರಫ್ತು 15,920 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇದು ಸಾರ್ವಕಾಲಿಕ ದಾಖಲೆ ಎಂದೇ ಹೇಳಲಾಗುತ್ತಿದೆ.
ರಕ್ಷಣಾ ರಫ್ತು ಏರಿಕೆ ಕುರಿತು ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. “ಅದ್ಭುತ! ಮೇಕ್ ಇಂಡಿಯಾ ದಿಸೆಯಲ್ಲಿ ಭಾರತದ ಪ್ರತಿಭೆಯ ಅತ್ಯುತ್ಸಾಹದ ಅನಾವರಣವಾಗಿದೆ. ಕಳೆದ ಹಲವು ವರ್ಷಗಳಿಂದ ರಕ್ಷಣಾ ಉತ್ಪಾದನೆಗಳ ರಫ್ತು ಹೆಚ್ಚಾಗುತ್ತಿದೆ. ಸರ್ಕಾರ ಕೂಡ ಮೇಕ್ ಇನ್ ಇಂಡಿಯಾಗೆ ಮುಂದೆಯೂ ಉತ್ತೇಜನ ನೀಡುತ್ತಿದೆ. ರಕ್ಷಣಾ ಉತ್ಪಾದನಾ ಕೇಂದ್ರವಾಗಿ ಭಾರತವನ್ನು ಮಾರ್ಪಾಡು ಮಾಡಲಾಗುತ್ತಿದೆ” ಎಂದು ಟ್ವೀಟ್ ಮಾಡಿದ್ದಾರೆ.
ರಾಜನಾಥ್ ಸಿಂಗ್ ಟ್ವೀಟ್
ರಕ್ಷಣಾ ರಫ್ತು ಏರಿಕೆ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಟ್ವೀಟ್ ಮಾಡಿದ್ದಾರೆ. “ಕಳೆದ ಕೆಲವು ವರ್ಷಗಳಲ್ಲಿ ರಕ್ಷಣಾ ರಫ್ತು ಗಣನೀಯವಾಗಿ ಏರಿಕೆಯಾಗಿದೆ. ಏಳೆಂಟು ವರ್ಷದ ಹಿಂದೆ ರಕ್ಷಣಾ ರಫ್ತು 900 ಕೋಟಿ ರೂಪಾಯಿ ಇತ್ತು. ಈಗ ಅದು 15 ಸಾವಿರ ಕೋಟಿ ರೂಪಾಯಿ ದಾಟಿದೆ. 2026ರ ವೇಳೆಗೆ ರಕ್ಷಣಾ ರಫ್ತನ್ನು 40 ಸಾವಿರ ಕೋಟಿ ರೂಪಾಯಿ ದಾಟಿಸುವ ಗುರಿ ಇದೆ” ಎಂದು ಹೇಳಿದ್ದಾರೆ.
ಮಿಲಿಟರಿ ಹಾರ್ಡ್‌ವೇರ್‌ಗಳ ರಫ್ತು ಕುರಿತು ಕೇಳಿದ ಪ್ರಶ್ನೆಗೆ ರಾಜ್ಯಸಭೆಯಲ್ಲಿ ರಕ್ಷಣಾ ಖಾತೆ ಸಹಾಯಕ ಸಚಿವ ಅಜಯ್ ಭಟ್ ಇತ್ತೀಚೆಗೆ ಮಾಹಿತಿ ನೀಡಿದ್ದರು. “ದೇಶದಲ್ಲಿಯೇ ಉತ್ಪಾದನೆಯಾಗುವ ಮಿಲಿಟರಿ ಹಾರ್ಡ್‌ವೇರ್‌ಗಳ ರಫ್ತು ಇತ್ತೀಚಿಗೆ ಹೆಚ್ಚಾಗಿದೆ. 2017-18ನೇ ಸಾಲಿನಲ್ಲಿ 4,682 ಕೋಟಿ ರೂ. ಮಿಲಿಟರಿ ಹಾರ್ಡ್‌ವೇರ್‌ಗಳ ರಫ್ತು ಮಾಡಲಾಗಿತ್ತು. ಆದರೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಮಾರ್ಚ್ 11ರ ಅವಧಿಗೆ ಇದು 13,339 ಕೋಟಿ ರೂ.ಗೆ ಏರಿಕೆಯಾಗಿದೆ” ಎಂದು ತಿಳಿಸಿದ್ದರು.
“2021-22ನೇ ಹಣಕಾಸು ವರ್ಷದಲ್ಲಿ ರಫ್ತು ಮೌಲ್ಯ 12,815 ಕೋಟಿ ರೂ. ಇತ್ತು. ರಫ್ತಿನ ಪ್ರಮಾಣ 2020-21ನೇ ಸಾಲಿನಲ್ಲಿ 8,435 ಕೋಟಿ ರೂ. ಇತ್ತು. ವರ್ಷದಿಂದ ವರ್ಷಕ್ಕೆ ರಫ್ತಿನ ಪ್ರಮಾಣವು ಹೆಚ್ಚಾಗುತ್ತಿದೆ. ಕೇಂದ್ರ ಸರ್ಕಾರವು ಆತ್ಮನಿರ್ಭರತೆ ಸಾಧಿಸುವ ದಿಸೆಯಲ್ಲಿ ಹೆಚ್ಚಿನ ಉತ್ತೇಜ ನೀಡುತ್ತಿರುವುದೇ ಇದಕ್ಕೆ ಕಾರಣ” ಎಂದು ಮಾಹಿತಿ ನೀಡಿದ್ದರು. ರಕ್ಷಣಾ ಕ್ಷೇತ್ರದಲ್ಲೂ ಸ್ವಾವಲಂಬನೆ ಸಾಧಿಸಲು ಕೇಂದ್ರ ಸರ್ಕಾರವು ಕಳೆದ ಹಲವು ವರ್ಷಗಳಿಂದ ಉತ್ತೇಜನ ನೀಡುತ್ತಿದೆ. ಬೇರೆ ಬೇರೆ ದೇಶಗಳಿಂದ ಭಾರತದ ಶಸ್ತ್ರಾಸ್ತ್ರಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.
ಇದನ್ನೂ ಓದಿ: Military Hardware Export: ಆತ್ಮನಿರ್ಭರಕ್ಕೆ ಬಲ, 13 ಸಾವಿರ ಕೋಟಿ ರೂ. ಮೌಲ್ಯದ ಮಿಲಿಟರಿ ಹಾರ್ಡ್‌ವೇರ್ ರಫ್ತು