Site icon Vistara News

ಸೇನಾಪಡೆಗಳ ಸಮನ್ವಯಕ್ಕೆ ಜಂಟಿ ಥಿಯೇಟರ್ ಕಮಾಂಡ್‌ ಘೋಷಿಸಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್

rajanath singh

ನವ ದೆಹಲಿ: ಸಶಸ್ತ್ರ ಸೇನಾಪಡೆಗಳ ನಡುವೆ ಸಮನ್ವಯಕ್ಕೆ ಜಂಟಿ ಥಿಯೇಟರ್ ಕಮಾಂಡ್‌ ವ್ಯವಸ್ಥೆಯನ್ನು ರಚಿಸಲಾಗುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ತಿಳಿಸಿದ್ದಾರೆ.

ಭಾರತೀಯ ಸಶಸ್ತ್ರಪಡೆಯ ಹುತಾತ್ಮರಿಗೆ ಗೌರವ ಸಲ್ಲಿಸಲು ಜಮ್ಮು ಕಾಶ್ಮೀರ್‌ ಪೀಪಲ್ಸ್‌ ಫೋರಮ್‌ ಆಯೋಜಿಸಿದ್ದ ೨೩ನೇ ಕಾರ್ಗಿಲ್‌ ವಿಜಯ ದಿವಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ವಿಷಯ ತಿಳಿಸಿದರು.

ಕಾರ್ಗಿಲ್‌ನಲ್ಲಿ ನಡೆದ ಆಪರೇಷನ್‌ ವಿಜಯ್‌ ಜಂಟಿ ಕಾರ್ಯಾಚರಣೆಯನ್ನು ಗಮನದಲ್ಲಿಟ್ಟುಕೊಂಡು, ದೇಶದಲ್ಲಿ ಸೇನೆಯ ಮೂರೂ ಪಡೆಗಳನ್ನು ಒಳಗೊಂಡಿರುವ ಜಂಟಿ ಥಿಯೇಟರ್‌ ಕಮಾಂಡ್‌ ಅನ್ನು ರಚಿಸಲಾಗುವುದು. ಇದರಿಂದ ಸೇನಾ ಪಡೆಯ ಮೂರೂ ವಿಭಾಗಗಳಲ್ಲಿ ( ಭೂಸೇನೆ, ವಾಯು ಸೇನೆ, ನೌಕಾ ಪಡೆ) ಸಮನ್ವಯಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಕಳೆದ ವರ್ಷ ಜೂನ್‌ನಲ್ಲಿ ಸರ್ಕಾರ ಜಂಟಿ ಥಿಯೇಟರ್‌ ಕಮಾಂಡ್‌ ರಚನೆಗೆ ಸಂಬಂಧಿಸಿ ರೂಪುರೇಷೆಗಳನ್ನು ಅಂತಿಮಪಡಿಸಲು ೮ ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಿತ್ತು. ಸೇನೆಯ ಮಹತ್ವದ ಸುಧಾರಣೆ ಇದಾಗಲಿದೆ.

ಭಾರತ ಶಸ್ತ್ರಾಸ್ತ್ರಗಳ ಆಮದುದಾರ ರಾಷ್ಟ್ರವಾಗುವುದರ ಬದಲಿಗೆ ರಫ್ತುದಾರ ರಾಷ್ಟ್ರವಾಗಿ ಹೊರಹೊಮ್ಮಲಿದೆ. ೧೩,೦೦೦ ಕೋಟಿ ರೂ.ಗಳ ಶಸ್ತ್ರಾಸ್ತ್ರಗಳನ್ನು ಭಾರತ ರಫ್ತು ಮಾಡಿದೆ. ೨೦೨೫-೨೬ರ ವೇಳೆಗೆ ೩೫-೪೦ ಸಾವಿರ ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ವಿವರಿಸಿದರು.

Exit mobile version