ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ಪ್ರಮಾಣವು (Delhi Air Pollution) ದಿನೇದಿನೆ ಜಾಸ್ತಿಯಾಗುತ್ತಿದ್ದು, ಮಕ್ಕಳು, ಹಿರಿಯರು ಸೇರಿ ಜನ ಉಸಿರಾಡಲು ಕೂಡ ಪರದಾಡುವಂತಾಗಿದೆ. ಹಾಗಾಗಿ, ದೆಹಲಿ ಸರ್ಕಾರವು (Delhi Government) ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು 5ನೇ ತರಗತಿವರೆಗಿನ ಶಾಲೆಗಳಿಗೆ ನವೆಂಬರ್ 10ರವರೆಗೆ ರಜೆ ಘೋಷಿಸಿದೆ. ಹಾಗೆಯೇ, 6ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಶಿಕ್ಷಕರು ಆನ್‌ಲೈನ್ ಕ್ಲಾಸ್ ತೆಗೆದುಕೊಳ್ಳಿ ಎಂದು ಕೂಡ ಸರ್ಕಾರ ಸೂಚಿಸಿದೆ.
ವಾಯುಮಾಲಿನ್ಯದ ಹಿನ್ನೆಲೆಯಲ್ಲಿ ನವೆಂಬರ್ 5ರವರೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಆದರೂ, ಮಾಲಿನ್ಯ ಪ್ರಮಾಣವು ಜಾಸ್ತಿಯೇ ಆಗುತ್ತಿರುವುದರಿಂದ ರಜೆಯನ್ನು ವಿಸ್ತರಿಸಲಾಗಿದೆ. “ನಗರದಲ್ಲಿ ವಾಯುಮಾಲಿನ್ಯ ಪ್ರಮಾಣವು ಮತ್ತಷ್ಟು ಜಾಸ್ತಿಯಾಗಿದೆ. ಹಾಗಾಗಿ, ಪ್ರಾಥಮಿಕ ಶಾಲೆಗಳಿಗೆ ನವೆಂಬರ್ 10ರವರೆಗೆ ರಜೆ ಘೋಷಿಸಲಾಗಿದೆ. 6-12ನೇ ತರಗತಿ ಮಕ್ಕಳಿಗೆ ಆನ್‌ಲೈನ್ ಕ್ಲಾಸ್ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ” ಎಂದು ದೆಹಲಿ ಶಿಕ್ಷಣ ಸಚಿವೆ ಆತಿಶಿ ಮಾಹಿತಿ ನೀಡಿದ್ದಾರೆ.
As pollution levels continue to remain high, primary schools in Delhi will stay closed till 10th November.
— Atishi (@AtishiAAP) November 5, 2023
For Grade 6-12, schools are being given the option of shifting to online classes.
ದೆಹಲಿಯಲ್ಲಿ ಸತತ ಆರನೇ ದಿನವೂ ಗಾಳಿಯ ಗುಣಮಟ್ಟವು ತೀರಾ ಹದಗೆಟ್ಟಿದೆ. ಭಾನುವಾರ (ನವೆಂಬರ್ 5) ಬೆಳಗ್ಗೆ ಗಾಳಿ ಗುಣಮಟ್ಟ ಸೂಚ್ಯಂಕದಲ್ಲಿ 460 ರೇಟಿಂಗ್ ಇದೆ. ಇದರಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಮಕ್ಕಳು ಹಾಗೂ ಹಿರಿಯ ನಾಗರಿಕರಿಗೆ ಉಸಿರಾಟದ ಸಮಸ್ಯೆ, ಕಣ್ಣಿನ ಸಮಸ್ಯೆಗಳು ಉಲ್ಬಣಿಸುತ್ತಿವೆ ಎಂದು ವೈದ್ಯರು ತಿಳಿಸಿದ್ದಾರೆ. ಅದರಲ್ಲೂ, ವಾಯುಮಾಲಿನ್ಯ ಪ್ರಮಾಣ ಜಾಸ್ತಿಯೇ ಆಗುತ್ತಿರುವುದರಿಂದ ಜನ ಆತಂಕದಲ್ಲಿಯೇ ಕಾಲ ಕಳೆಯುವಂತಾಗಿದೆ.
ಇದನ್ನೂ ಓದಿ: BAN vs SL: ವಾಯು ಗುಣಮಟ್ಟ ಕುಸಿತ; ಲಂಕಾ-ಬಾಂಗ್ಲಾ ಅಭ್ಯಾಸ ರದ್ದು
ಮಾಲಿನ್ಯಕಾರಕ ಅಂಶಗಳನ್ನು ಗುರುತಿಸುವ ‘ಪಿಎಂ 2.5’ ಕಣಗಳ ಆಧಾರದ ಮೇಲೆ ವಾಯುಮಾಲಿನ್ಯವನ್ನು ಅಂದಾಜಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಒಂದು ಘನ ಮೀಟರ್‌ಗೆ ಪಿಎಂ 2.5 ಕಣಗಳ ಮಟ್ಟವು ಒಂದು ಘನ ಮೀಟರ್‌ಗೆ 5 ಮೈಕ್ರೋ ಗ್ರಾಂ ಇರಬೇಕು. ಆದರೆ, ದೆಹಲಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವುದಕ್ಕಿಂತ 80ರಿಂದ 100 ಪಟ್ಟು ಜಾಸ್ತಿಯಾಗಿದೆ. ಹಾಗಾಗಿ, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇನ್ನು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸುವುದರಿಂದ ವಾಯುಮಾಲಿನ್ಯ ಪ್ರಮಾಣವು ಮತ್ತಷ್ಟು ಜಾಸ್ತಿಯಾಗಲಿದೆ ಎಂದು ತಿಳಿದುಬಂದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ