Site icon Vistara News

Delhi Air Pollution: ತಾಜ್ ಮಹಲ್ ನಾಪತ್ತೆ! ಇದು ವಾಯು ಮಾಲಿನ್ಯದ ಎಫೆಕ್ಟ್

Taj Mahal

Taj Mahal

ನವದೆಹಲಿ: ದಿನೇದಿನೆ ಏರಿಕೆಯಾಗುತ್ತಿರುವ ವಾಯುಮಾಲಿನ್ಯದಿಂದಾಗಿ (Delhi Air Pollution) ರಾಷ್ಟ್ರ ರಾಜಧಾನಿ ಜನ ತತ್ತರಿಸಿ ಹೋಗಿದ್ದಾರೆ. ಜನ ಉಸಿರಾಡಲು ಕೂಡ ಕಷ್ಟವಾಗಿದೆ, ಜನ ಮನೆಯಿಂದ ಹೊರಗೆ ಬರಲು ಕೂಡ ಭಯಪಡುವಂತಾಗಿದೆ. ದೆಹಲಿ ಮಾತ್ರವಲ್ಲ, ಸುತ್ತಮುತ್ತಲಿನ ನಗರಗಳಿಗೂ ವಾಯುಮಾಲಿನ್ಯದ ಬಿಸಿ ತಟ್ಟಿದೆ. ಇದಕ್ಕೆ ನಿದರ್ಶನ ಎಂಬಂತೆ, ಆಗ್ರಾದಲ್ಲಿರುವ ತಾಜ್‌ಮಹಲ್‌ (Taj Mahal) ಕೂಡ ವಾಯುಮಾಲಿನ್ಯದಿಂದಾಗಿ ಜನರಿಗೆ ಸ್ಪಷ್ಟವಾಗಿ ಕಾಣಿಸದಂತಾಗಿದೆ. ಹೊಗೆ ಮಿಶ್ರಿತ ಮಂಜಿನ ನಡುವೆ ತಾಜ್‌ಮಹಲ್‌ ಕಾಣದಿರುವ ವಿಡಿಯೊ ಹಾಗೂ ಫೋಟೊಗಳು ವೈರಲ್‌ ಆಗಿವೆ.

ಹೌದು, ದೆಹಲಿಯ ವಾಯುಮಾಲಿನ್ಯವು ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುವ ತಾಜ್‌ಮಹಲ್‌ಗೂ ತಟ್ಟಿದೆ. ವಾಯುಮಾಲಿನ್ಯ, ದಟ್ಟವಾದ ಹೊಗೆ ಇರುವ ಮಂಜಿನಿಂದಾಗಿ ಜನ ಸ್ಪಷ್ಟವಾಗಿ ತಾಜ್‌ಮಹಲ್‌ಅನ್ನು ವೀಕ್ಷಿಸಲು ಕೂಡ ಸಾಧ್ಯವಾಗುತ್ತಿಲ್ಲ. ತುಸು ದೂರ ನಿಂತರಂತೂ ತಾಜ್‌ಮಹಲ್‌ ಕಣ್ಣಿಗೆ ಕಾಣಿಸುತ್ತಿಲ್ಲ. ಇದರಿಂದಾಗಿ ತಾಜ್‌ಮಹಲ್‌ಗೆ ತೆರಳಿದ ಜನ ಚೆಂದದೊಂದು ಫೋಟೊ ತೆಗೆಸಿಕೊಳ್ಳಲು ಕೂಡ ಸಾಧ್ಯವಾಗುತ್ತಿಲ್ಲ. ಇದರಿಂದ ಪ್ರವಾಸಿಗರಿಗೆ ನಿರಾಸೆ ಆಗುತ್ತಿದೆ ಎಂದು ತಿಳಿದುಬಂದಿದೆ. ಉತ್ತರ ಪ್ರದೇಶದಲ್ಲಿ ವಾಯು ಗುಣಮಟ್ಟ ಸೂಚ್ಯಂಕವು 294 ಆಗಿದ್ದು, ಇದು ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ.

ಸಮ-ಬೆಸ ನಿಯಮ ಜಾರಿ

ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣವು ಅಪಾಯಕಾರಿಯಾದ ಕಾರಣ ದೆಹಲಿ ಸರ್ಕಾರವು ಮತ್ತೆ ಸಮ-ಬೆಸ ವಾಹನಗಳ ಸಂಚಾರ ನಿಯಮ ಜಾರಿಗೆ ತರುತ್ತಿದೆ. ನವೆಂಬರ್‌ 13ರಿಂದ 20ರವರೆಗೆ ಸಮ-ಬೆಸ ಸಂಖ್ಯೆಯ ವಾಹನಗಳ ಸಂಚಾರ ನಿಯಮ ಜಾರಿಗೆ ತರಲು ನಿರ್ಧರಿಸಿದೆ. ವಾಹನಗಳ ಓಡಾಟ ನಿಯಂತ್ರಣದ ಮೂಲಕ ವಾಯುಮಾಲಿನ್ಯ ತಗ್ಗಿಸುವುದು ಸರ್ಕಾರದ ಗುರಿಯಾಗಿದೆ. ವಾಹನಗಳ ಲೈಸೆನ್ಸ್‌ ಪ್ಲೇಟ್‌ಗಳ ಮೇಲೆ ಬೆಸ ಸಂಖ್ಯೆಗಳು ಅಂದರೆ 1, 3, 5, 7 ಹಾಗೂ 9 ಇರುವ ವಾಹನಗಳು ಒಂದು ದಿನ ಹಾಗೂ ಸಮ ಸಂಖ್ಯೆಗಳು ಅಂದರೆ 0, 2, 4, 6 ಹಾಗೂ 8 ಇರುವ ವಾಹನಗಳು ಮತ್ತೊಂದು ದಿನ ಮಾತ್ರ ಓಡಾಡಲು ಅವಕಾಶ ಇರುತ್ತದೆ ಎಂದು ಪರಿಸರ ಸಚಿವ ಗೋಪಾಲ್‌ ರೈ ತಿಳಿಸಿದ್ದಾರೆ.

ಇದನ್ನೂ ಓದಿ: Delhi Air Pollution: ವಾಯು ಮಾಲಿನ್ಯದಿಂದ ಕ್ಯಾನ್ಸರ್‌? ಏಮ್ಸ್ ವೈದ್ಯರು ಏನು ಹೇಳುತ್ತಾರೆ ಕೇಳಿ

ಹಾಗೆಯೇ, ಶಾಲೆಗಳಿಗೂ ದೆಹಲಿ ಸರ್ಕಾರ ರಜೆ ಘೋಷಿಸಿದೆ. ವಾಯುಮಾಲಿನ್ಯದ ಹಿನ್ನೆಲೆಯಲ್ಲಿ ನವೆಂಬರ್‌ 5ರವರೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಆದರೂ, ಮಾಲಿನ್ಯ ಪ್ರಮಾಣವು ಜಾಸ್ತಿಯೇ ಆಗುತ್ತಿರುವುದರಿಂದ ರಜೆಯನ್ನು ವಿಸ್ತರಿಸಲಾಗಿದೆ. ಪ್ರಾಥಮಿಕ ಶಾಲೆಗಳಿಗೆ ನವೆಂಬರ್‌ 10ರವರೆಗೆ ರಜೆ ಘೋಷಿಸಲಾಗಿದೆ. 6-12ನೇ ತರಗತಿ ಮಕ್ಕಳಿಗೆ ಆನ್‌ಲೈನ್‌ ಕ್ಲಾಸ್‌ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version