Site icon Vistara News

Delhi Assembly Session | ದಿನದ ಮಟ್ಟಿಗೆ ದಿಲ್ಲಿ ಅಸೆಂಬ್ಲಿಯಿಂದ ಬಿಜೆಪಿಯ ಎಲ್ಲ ಶಾಸಕರು ಸಸ್ಪೆಂಡ್, ಯಾಕೆ?

ನವ ದೆಹಲಿ: ಬಿಜೆಪಿಯ ‘ಆಪರೇಷನ್ ಕಮಲ’ ವಿಫಲವಾಗಲಿದೆ ಎಂಬುದನ್ನು ಸಾಬೀತುಪಡಿಸಲು ಆಮ್ ಆದ್ಮಿ ಪಾರ್ಟಿ (ಆಪ್) ಮತ್ತೊಂದು ಹೈಡ್ರಾಮಾಗೆ ಮುಂದಾಗಿದೆ. ಅವಶ್ಯಕತೆ ಇಲ್ಲದಿದ್ದರೂ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ವಿಶೇಷ ಅಧಿವೇಶನ ಕರೆದು, ಸೋಮವಾರ ವಿಶ್ವಾಸಮತ ಯಾಚನೆ ಮಾಡುತ್ತಿದ್ದಾರೆ. ಅಸೆಂಬ್ಲಿ ಕಲಾಪ ಈಗ ಶುರುವಾಗಿದ್ದು, 70 ಸದಸ್ಯ ಬಲ ಇರುವ ದಿಲ್ಲಿ ವಿಧಾನಸಭೆ(Delhi Assembly Session)ಯಲ್ಲಿ ಆಪ್ 62 ಶಾಸಕರನ್ನು ಹೊಂದಿದೆ.

ದಿಲ್ಲಿ ಸರ್ಕಾರವನ್ನು ಬಿಜೆಪಿ ಅಸ್ಥಿರಗೊಳಿಸುತ್ತಿದೆ ಎಂದು ಆರೋಪಿಸಿದ್ದ ಆಪ್, ತನ್ನ ಯಾವ ಶಾಸಕರೂ ಪಕ್ಷಾಂತರಕ್ಕೆ ಮುಂದಾಗಿಲ್ಲ ಎಂಬುದನ್ನು ಸಾಬೀತುಪಡಿಸಲು ಮುಂದಾಗಿದೆ. ಇದೇ ಕಾರಣಕ್ಕಾಗಿ ವಿಶೇಷ ಅಧಿವೇಶನ ಕರೆಯುವುದಾಗಿ ಶುಕ್ರವಾರ ಅರವಿಂದ್ ಕೇಜ್ರಿವಾಲ್ ಹೇಳಿದ್ದರು. ಮನೀಶ್ ಸಿಸೋಡಿಯಾ ವಿರುದ್ಧ ಸಿಬಿಐ ದಾಳಿ ನಡೆದ ಬೆನ್ನಲ್ಲೇ, ಬಿಜೆಪಿಯು ಆಪ್‌ನ 40 ಶಾಸಕರ ಖರೀದಿಗೆ ಮುಂದಾಗಿದೆ ಎಂಬ ಆರೋಪವನ್ನು ಆಪ್ ಮಾಡಿತ್ತು.

ಬಿಜೆಪಿ ನಿರಾಕರಣೆ
ಸೋಮವಾರ ದಿಲ್ಲಿ ವಿಧಾನಸಭೆ ಆರಂಭವಾಗುತ್ತಿದ್ದಂತೆ, ಬಿಜೆಪಿ ಶಾಸಕರು ಗಮನ ಸೆಳೆಯುವ ನೋಟಿಸ್ ನೀಡಲು ಮುಂದಾದರು. ಆದರೆ, ಇದಕ್ಕೆ ಸ್ಪೀಕರ್ ಪೀಠದಲ್ಲಿದ್ದ ಡೆಪ್ಯುಟಿ ಸ್ಪೀಕರ್ ಅವಕಾಶವನ್ನು ನೀಡಲಿಲ್ಲ. ಇದರಿಂದ ಅಸಮಾಧಾನಗೊಂಡ ಬಿಜೆಪಿ ಶಾಸಕರು ಪ್ರತಿಭಟನೆಗೆ ಮುಂದಾದರು. ಆಗ ಡೆಪ್ಯುಟಿ ಸ್ಪೀಕರ್, ಪ್ರತಿಭಟನಾನಿರತ ಬಿಜೆಪಿ ಶಾಸಕರನ್ನು ಒಂದು ದಿನದಮಟ್ಟಿಗೆ ಸಸ್ಪೆಂಡ್ ಮಾಡಿದರು. ಅಲ್ಲದೇ, ಮಾರ್ಷಲ್ಸ್ ಕರೆಯಿಸಿ, ಬಿಜೆಪಿ ಶಾಸಕರನ್ನು ಅಸೆಂಬ್ಲಿಯಿಂದ ಹೊರ ಹಾಕಿದರು. ಬಿಜೆಪಿ ಶಾಸಕ ವಿಜೇಂದೇರ್ ಗುಪ್ತಾ ಅವರನ್ನು ಮಾರ್ಷಲ್ಸ್ ಅಕ್ಷರಶಃ ಎತ್ತಿಕೊಂಡು ಹೊರ ಹೋದರು.

40 ಶಾಸಕರಿಗೆ ಬಿಜೆಪಿ ಗಾಳ, ಆಪ್ ಆರೋಪ
ಆಮ್ ಆದ್ಮಿ ಪಾರ್ಟಿ ಶಾಸಕರಿಗೆ ತಲಾ 20 ಕೋಟಿ ರೂ. ಆಮಿಷ ಒಡ್ಡಲಾಗಿದೆ. ಒಟ್ಟು 40 ಶಾಸಕರ ಖರೀದಿಗೆ ಬಿಜೆಪಿ ಮುಂದಾಗಿದೆ. ಆ ಮೂಲಕ ಆಪ್ ಸರ್ಕಾರವನ್ನು ಅಧಿಕಾರದಿಂದ ಕೆಳಗೆ ಇಳಿಸುವ ಕೆಲಸವನ್ನು ಮಾಡುತ್ತಿದೆ ಎಂದು ಆಪ್ ಆರೋಪ ಮಾಡಿತ್ತು. ಆದರೆ, ಈ ಆರೋಪವನ್ನು ಅಲ್ಲಗಳೆದಿತ್ತು.

ಆಪ್ ಸರ್ಕಾರದ ಅಬಕಾರಿ ಹಗರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಜನರ ಗಮನವನ್ನು ಬೇರೇಡೆಗೆ ಸೆಳೆಯಲು ಶಾಸಕರ ಖರೀದಿ ಆರೋಪವನ್ನು ಆಪ್ ಮಾಡುತ್ತಿದೆ ಎಂದು ಬಿಜೆಪಿ ಹೇಳಿದೆ. ಅಬಕಾರಿ ಇಲಾಖೆಯ ಸಚಿವರಾಗಿರುವ ಮನೀಶ್ ಸಿಸೋಡಿಯಾ ಅವರ ಹೆಸರನ್ನು ಸಿಬಿಐ ಎಫ್ಐಆರ್‌ನಲ್ಲಿ ದಾಖಲಿಸಿದೆ. ಅವರು ಪ್ರಮುಖ ಆರೋಪಿಯಾಗಿದ್ದಾರೆ. ಈ ಮಧ್ಯೆ, ಆಪ್‌ನಿಂದ ಬಿಜೆಪಿಗೆ ಬಂದರೆ ಮುಖ್ಯಮಂತ್ರಿ ಪೋಸ್ಟ್ ನೀಡುವ ಆಫರ್ ಅನ್ನು ಬಿಜೆಪಿ ನೀಡಿತ್ತು ಎಂದು ಸಿಸೋಡಿಯಾ ಹೇಳಿದ್ದರು. ಈ ಎಲ್ಲ ಆರೋಪಗಳನ್ನು ಬಿಜೆಪಿ ತಳ್ಳಿ ಹಾಕಿದೆ.

ಇದನ್ನೂ ಓದಿ | ಹಲವು ಸರ್ಕಾರಗಳನ್ನು ಕೊಂದ ಸರಣಿ ಹಂತಕ ಬಿಜೆಪಿ ಎಂದ ಕೇಜ್ರಿವಾಲ್​; ವಿಶ್ವಾಸ ಮತ ಯಾಚನೆಗೆ ನಿರ್ಧಾರ !

Exit mobile version