ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೆಪ್ಟೆಂಬರ್‌ನಲ್ಲಿ ಜಿ-20 ಸಭೆ (G 20 Summit) ನಡೆಯಲಿದೆ. ಹಲವು ದೇಶಗಳ ಗಣ್ಯರು ದೆಹಲಿಗೆ ಆಗಮಿಸಲಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಇದರ ಬೆನ್ನಲ್ಲೇ, ದೆಹಲಿ ಹಲವು ಮೆಟ್ರೋ ನಿಲ್ದಾಣಗಳ ಗೋಡೆಗಳ ಮೇಲೆ ಖಲಿಸ್ತಾನ ಪರ ಘೋಷಣೆಗಳನ್ನು (Khalistan Slogans) ಬರೆಯುವ ಮೂಲಕ ಖಲಿಸ್ತಾನ ಉಗ್ರರು ಉದ್ಧಟತನ ಮೆರೆದಿದ್ದಾರೆ. “ದೆಹಲಿಯನ್ನು ಖಲಿಸ್ತಾನವನ್ನಾಗಿ ಮಾಡುತ್ತೇವೆ” ಎಂಬಂತಹ ಬರಹಗಳ ಮೂಲಕ ಮೆಟ್ರೋ ನಿಲ್ದಾಣಗಳ ಗೋಡೆಗಳನ್ನು ವಿರೂಪಗೊಳಿಸಿದ್ದಾರೆ.
ದೆಹಲಿಯ ಮೆಟ್ರೋ ನಿಲ್ದಾಣಗಳ ಗೋಡೆಗಳ ಮೇಲೆ “ದೆಹಲಿಯನ್ನು ಪ್ರತ್ಯೇಕ ಖಲಿಸ್ತಾನ ರಾಷ್ಟ್ರವನ್ನಾಗಿ ಮಾಡುತ್ತೇವೆ”, “ಖಲಿಸ್ತಾನ ರೆಫರೆಂಡಮ್ ಜಿಂದಾಬಾದ್” ಸೇರಿ ಹಲವು ಘೋಷಣೆಗಳನ್ನು ಬರೆಯಲಾಗಿದೆ. ಪಂಜಾಬಿ ಬಾಗ್, ಶಿವಾಜಿ ಪಾರ್ಕ್, ಮಾದಿಪುರ್, ಪಶ್ಚಿಮ ವಿಹಾರ, ಉದ್ಯೋಗ ನಗರ ಹಾಗೂ ಮಹಾರಾಜ ಸೂರಜ್‌ಮಾಲ್ ಸ್ಟೇಡಿಯಂ ಮೆಟ್ರೋ ನಿಲ್ದಾಣಗಳ ಗೋಡೆಗಳನ್ನು ಬರಹಗಳ ಮೂಲಕ ವಿರೂಪಗೊಳಿಸಲಾಗಿದೆ.
ಗೋಡೆ ಬರಹಗಳು
ನಿಷೇಧಿತ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟಿಸ್ (SFJ) ಉಗ್ರರು ಗೋಡೆ ಬರಹಗಳ ಮೂಲಕ ಉದ್ಧಟತನ ಎಸಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಹಾಗೆಯೇ, ಖಲಿಸ್ತಾನ ಉಗ್ರರು ಕೃತ್ಯದ ವಿಡಿಯೊವನ್ನು ಕೂಡ ಬಿಡುಗಡೆ ಮಾಡಿದ್ದಾರೆ. “ಖಲಿಸ್ತಾನದ ಪರ ಘೋಷಣೆಗಳನ್ನು ದೆಹಲಿ ಮೆಟ್ರೋ ನಿಲ್ದಾಣಗಳ ಗೋಡೆಗಳ ಮೇಲೆ ಬರೆದಿರುವ ಕುರಿತು ಖಲಿಸ್ತಾನಿಗಳು ವಿಡಿಯೊ ಬಿಡುಗಡೆ ಮಾಡಿದ್ದಾರೆ” ಎಂದು ಮೆಟ್ರೋ ಡಿಸಿಪಿ ರಾಮ್ ಗೋಪಾಲ್ ತಿಳಿಸಿದ್ದಾರೆ.
ಇದನ್ನೂ ಓದಿ: Canada Hindu Temple: ಕೆನಡಾದಲ್ಲಿ ಮತ್ತೊಂದು ಹಿಂದು ದೇಗುಲ ಮೇಲೆ ಖಲಿಸ್ತಾನಿಗಳ ದಾಳಿ; ಖಂಡಿಸಿದ ಹಿಂದುಗಳು
“ಗೋಡೆ ಬರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ” ಎಂದು ಮಾಹಿತಿ ನೀಡಿದ್ದಾರೆ. ಪ್ರಗತಿ ಮೈದಾನದಲ್ಲಿ ಸೆಪ್ಟೆಂಬರ್ 9 ಹಾಗೂ 10ರಂದು ಜಿ 20 ಸಭೆ ನಡೆಯಲಿದೆ. ಇದಕ್ಕಾಗಿ ಪ್ರಗತಿ ಮೈದಾನದಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಸಭೆಯ ಹಿನ್ನೆಲೆಯಲ್ಲಿಯೇ ಖಲಿಸ್ತಾನಿಗಳು ಉಪಟಳ ಮಾಡಿದ್ದಾರೆ ಎಂದು ತಿಳಿದುಬಂದಿದೆ.