ನವ ದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇಂದು ಸದನದಲ್ಲಿ ವಿಶ್ವಾಸ ಮತ ಯಾಚಿಸಿ, ಬಹುಮತ ಸಾಬೀತುಪಡಿಸಿದ್ದಾರೆ. ಒಟ್ಟೂ 70 ಶಾಸಕರ ಬಲದ ದೆಹಲಿ ವಿಧಾನಸಭೆಯಲ್ಲಿ ಆಮ್ ಆದ್ಮಿ ಪಕ್ಷದ 62 ಶಾಸಕರು ಇದ್ದರು. ಅವರಲ್ಲಿ ಇಂದು 58 ಜನರು ಅರವಿಂದ್ ಕೇಜ್ರಿವಾಲ್ಗೆ ಮತ ಹಾಕಿದ್ದಾರೆ. ‘ನಮ್ಮ ಪಕ್ಷದ 62 ಶಾಸಕರಲ್ಲಿ ಇಬ್ಬರು ವಿದೇಶಕ್ಕೆ ತೆರಳಿದ್ದಾರೆ. ಒಬ್ಬರು ಜೈಲಿನಲ್ಲಿದ್ದಾರೆ ಮತ್ತು ನಾಲ್ಕನೇ ಶಾಸಕ ಸದನದಲ್ಲಿ ಸ್ಪೀಕರ್ ಆಗಿದ್ದಾರೆ. ಹೀಗಾಗಿ ಆ ನಾಲ್ವರು ಮತ ಹಾಕಲು ಸಾಧ್ಯವಾಗಿಲ್ಲ’ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ದೆಹಲಿಯಲ್ಲಿ ಕಳೆದ ವರ್ಷ ಅನುಷ್ಠಾನಕ್ಕೆ ಬಂದಿದ್ದ ನೂತನ ಅಬಕಾರಿ ನೀತಿಯಲ್ಲಿ ಭ್ರಷ್ಟಾಚಾರ ಆಗಿದೆ ಎಂಬ ಆರೋಪದಡಿ, ಅಬಕಾರಿ ಇಲಾಖೆ ಸಚಿವ, ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ವಿರುದ್ಧ ಸಿಬಿಐ ತನಿಖೆ ಪ್ರಾರಂಭವಾಗಿದೆ. ಮನೀಷ್ಗೆ ಸೇರಿದ ಸ್ಥಳಗಳ ಮೇಲೆ ಸಿಬಿಐ ರೇಡ್ ಮಾಡಿರುವ ಜತೆ, ಅವರ ವಿರುದ್ಧ ಎಫ್ಐಆರ್ ಕೂಡ ದಾಖಲಿಸಿದೆ.
ಮನೀಷ್ ಸಿಸೋಡಿಯಾ ವಿರುದ್ಧ ಸಿಬಿಐ ದಾಳಿಯಾದ ಬೆನ್ನಲ್ಲೇ ಸಿಎಂ ಅರವಿಂದ್ ಕೇಜ್ರಿವಾಲ್ ಬಿಜೆಪಿ ವಿರುದ್ಧ ಆರೋಪ ಮಾಡಿದ್ದರು. ಬಿಜೆಪಿ ದೆಹಲಿಯ ಆಪ್ ಸರ್ಕಾರವನ್ನು ಬೀಳಿಸಲು ಪ್ರಯತ್ನ ಮಾಡುತ್ತಿದೆ. ಮನೀಷ್ ಸಿಸೋಡಿಯಾಗೆ ಪಕ್ಷ ಬಿಟ್ಟು ಬಂದರೆ, ಮುಖ್ಯಮಂತ್ರಿ ಹುದ್ದೆ ಕೊಡುವುದಾಗಿ ಹೇಳಿತ್ತು. ಅಷ್ಟೇ ಅಲ್ಲ, ಆಪ್ನ 40 ಶಾಸಕರಿಗೆ ಬಿಜೆಪಿಗೆ ಬಂದರೆ, ತಲಾ 20 ಕೋಟಿ ರೂಪಾಯಿ ಕೊಡುವುದಾಗಿ ಆಮಿಷವೊಡ್ಡಿತ್ತು. ಆದರೆ ಅವರ ಆಪರೇಶನ್ ಕಮಲ ಕೆಲಸ ಮಾಡಲಿಲ್ಲ. ನಮ್ಮವರು ಯಾರೂ ಬಿಜೆಪಿಗೆ ಹೋಗಲಿಲ್ಲ ಎಂದು ಹೇಳಿದ್ದರು. ಹಾಗೇ, ಆಮ್ ಆದ್ಮಿ ಪಕ್ಷದ ಶಾಸಕರೆಲ್ಲ ಒಗ್ಗಟ್ಟಾಗಿದ್ದೇವೆ, ಯಾರೂ ಬಿಜೆಪಿಯ ಆಮಿಷಕ್ಕೆ ಒಳಗಾಗಿಲ್ಲ ಎಂಬುದನ್ನು ಸಾಬೀತು ಪಡಿಸಲು, ಶೀಘ್ರದಲ್ಲಿಯೇ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡುತ್ತೇನೆ ಎಂದೂ ತಿಳಿಸಿದ್ದರು. ಅದರಂತೆ ಇಂದು ವಿಶ್ವಾಸ ಮತ ಯಾಚಿಸಿ, ಗೆದ್ದಿದ್ದಾರೆ.
ಇದನ್ನೂ ಓದಿ: ಹಲವು ಸರ್ಕಾರಗಳನ್ನು ಕೊಂದ ಸರಣಿ ಹಂತಕ ಬಿಜೆಪಿ ಎಂದ ಕೇಜ್ರಿವಾಲ್; ವಿಶ್ವಾಸ ಮತ ಯಾಚನೆಗೆ ನಿರ್ಧಾರ !