Site icon Vistara News

Arvind Kejriwal: ಚೀನಾದಿಂದ ಭಾರತದ ನೆಲ ವಾಪಸ್‌ ಸೇರಿ 10 ಗ್ಯಾರಂಟಿ ಘೋಷಿಸಿದ ಕೇಜ್ರಿವಾಲ್

Arvind Kejriwal

Delhi CM Arvind Kejriwal launches 10 poll guarantees for Lok Sabha Elections 2024

ನವದೆಹಲಿ: ಅಬಕಾರಿ ನೀತಿ ಜಾರಿ ವೇಳೆ ಹಗರಣ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ತಿಹಾರ ಜೈಲುಪಾಲಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರು ಮಧ್ಯಂತರ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ. ಇದರ ಬೆನ್ನಲ್ಲೇ ಅವರು, ಲೋಕಸಭೆ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಜನರಿಗಾಗಿ 10 ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದಾರೆ. ಕೇಂದ್ರದಲ್ಲಿ ಇಂಡಿಯಾ ಒಕ್ಕೂಟ (India Bloc) ಅಧಿಕಾರಕ್ಕೆ ಬಂದರೆ ಇಷ್ಟೆಲ್ಲ ಗ್ಯಾರಂಟಿಗಳನ್ನು ಜಾರಿಗೊಳಿಸಲಾಗುವುದು ಎಂದಿದ್ದಾರೆ.

“ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಾನಿಂದು 10 ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೇನೆ. ನನ್ನ ಬಂಧನದಿಂದಾಗಿ ಘೋಷಣೆ ಮಾಡುವುದು ವಿಳಂಬವಾಯಿತು. ಆದರೂ, ದೇಶದಲ್ಲಿ ಇನ್ನೂ ಹಲವು ಹಂತಗಳ ಮತದಾನ ಬಾಕಿ ಇದೆ. ಹಾಗಂತ, ಇಂಡಿಯಾ ಒಕ್ಕೂಟದ ಪಕ್ಷಗಳ ಜತೆ ಚರ್ಚಿಸಿ ಗ್ಯಾರಂಟಿಗಳನ್ನು ಘೋಷಣೆ ಮಾಡಿಲ್ಲ. ಇದರಿಂದ ಅವರಿಗೆ ಯಾವುದೇ ತೊಂದರೆ ಇಲ್ಲ ಎಂದು ಭಾವಿಸಿದ್ದೇನೆ. ಇಂಡಿಯಾ ಒಕ್ಕೂಟವು ದೇಶದಲ್ಲಿ ಅಧಿಕಾರಕ್ಕೆ ಬಂದರೆ ಈ 10 ಗ್ಯಾರಂಟಿಗಳನ್ನು ಜಾರಿಗೆ ತರಲಾಗುವುದು” ಎಂದು ಹೇಳಿದರು.

ಕೇಜ್ರಿವಾಲ್‌ ಘೋಷಿಸಿದ ಪ್ರಮುಖ ಗ್ಯಾರಂಟಿಗಳು

  1. ದೇಶಾದ್ಯಂತ 24 ಗಂಟೆ ವಿದ್ಯುತ್‌ ಪೂರೈಸುವುದು. ಇದರಿಂದ ಬಡವರಿಗೆ, ಉದ್ಯಮಿಗಳಿಗೆ ಅನುಕೂ ಮಾಡಿಕೊಡುವುದು.
  2. ಕೇಂದ್ರ ಹಾಗೂ ರಾಜ್ಯಗಳ ಸಹಕಾರದೊಂದಿಗೆ 5 ಲಕ್ಷ ಕೋಟಿ ರೂ. ವೆಚ್ಚದಲ್ಲಿ ದೇಶಾದ್ಯಂತ ಶಾಲೆ ನಿರ್ಮಿಸಿ, ಬಡವರಿಗೆ ಶಿಕ್ಷಣ ನೀಡುವುದು
  3. ದೇಶಾದ್ಯಂತ ಮೊಹಲ್ಲಾ ಕ್ಲಿನಿಕ್‌ಗಳನ್ನು ಸ್ಥಾಪಿಸಿ, ಉಚಿತವಾಗಿ ಚಿಕಿತ್ಸೆ ನೀಡಲಾಗುವುದು
  4. ಚೀನಾದ ಹಿಡಿತದಲ್ಲಿರುವ ಭಾರತದ ಜಾಗವನ್ನು ವಾಪಸ್‌ ಪಡೆಯುವುದು
  5. ಅಗ್ನಿವೀರ ಯೋಜನೆಯನ್ನು ರದ್ದುಗೊಳಿಸಿ, ಸೇನೆಯನ್ನು ಇನ್ನಷ್ಟು ಬಲಪಡಿಸುವುದು
  6. ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಖಾತರಿ ನೀಡುವುದು
  7. ದೆಹಲಿಗೆ ರಾಜ್ಯ ಸ್ಥಾನಮಾನ ನೀಡುವ ಮೂಲಕ ಏಳಿಗೆಗೆ ಇನ್ನಷ್ಟು ಶ್ರಮಿಸುವುದು

ಗ್ಯಾರಂಟಿ ಘೋಷಿಸಿದ ಬಳಿಕ ಮಾತನಾಡಿದ ಕೇಜ್ರಿವಾಲ್‌, “ದೇಶದ ಬಡವರು ಹಾಗೂ ರೈತರನ್ನು ಗಮನದಲ್ಲಿಟ್ಟುಕೊಂಡು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೇವೆ. ಕೇಂದ್ರದಲ್ಲಿ ಇಂಡಿಯಾ ಒಕ್ಕೂಟದ ಸರ್ಕಾರ ಬಂದರೆ, ಬಡವರಿಗೆ ಆರೋಗ್ಯ, ಶಿಕ್ಷಣ, ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು. ಇದಕ್ಕಾಗಿಯೇ ಗ್ಯಾರಂಟಿಗಳನ್ನು ಘೋಷನೆ ಮಾಡಿದ್ದೇವೆ” ಎಂದು ತಿಳಿಸಿದರು.

ಇದನ್ನೂ ಓದಿ: Narendra Modi: ಚುನಾವಣೆ ಪ್ರಚಾರದ ವೇಳೆ 5 ಗ್ಯಾರಂಟಿಗಳನ್ನು ಘೋಷಿಸಿದ ಮೋದಿ; ಏನವು?

Exit mobile version