ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಅಬಕಾರಿ ನೀತಿ (Delhi Excise Policy Case) ಜಾರಿ ವೇಳೆ ನೂರಾರು ಕೋಟಿ ರೂ. ಹಗರಣ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಕಳೆದ 50 ದಿನಗಳಿಂದ ಜೈಲಿನಲ್ಲೇ ಇದ್ದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಶುಕ್ರವಾರ (ಮೇ 10) ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಜೂನ್ 1ರವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ ಕಾರಣ ಶುಕ್ರವಾರ ಸಂಜೆ ತಿಹಾರ ಜೈಲಿನಿಂದ (Tihar Jail) ಅವರನ್ನು ಬಿಡುಗಡೆ ಮಾಡಲಾಯಿತು. ಕೇಜ್ರಿವಾಲ್ ಅವರು ಜೈಲಿನಿಂದ ಹೊರಬರುತ್ತಲೇ ಆಪ್ ಕಾರ್ಯಕರ್ತರು ಜೈಕಾರ ಕೂಗಿ ಅವರನ್ನು ಸ್ವಾಗತಿಸಿದರು.
ಯಾವುದೇ ಕಡತಗಳಿಗೆ ಸಹಿ ಹಾಕಬಾರದು ಎಂಬುದು ಸೇರಿ ಅರವಿಂದ್ ಕೇಜ್ರಿವಾಲ್ ಅವರಿಗೆ ನ್ಯಾಯಾಲಯವು ಹಲವು ಷರತ್ತುಗಳನ್ನು ವಿಧಿಸಿದೆ. ಹಾಗೆಯೇ, ಜೂನ್ 2ರಂದು ಮತ್ತೆ ಶರಣಾಗಬೇಕು ಎಂಬುದಾಗಿ ಸೂಚಿಸಿದೆ. ಅಬಕಾರಿ ನೀತಿ ಹಗರಣದಲ್ಲಿ ಮಾರ್ಚ್ 21ರಂದು ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿತ್ತು. ಹಲವು ಬಾರಿ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿತ್ತು. ಈಗ ನ್ಯಾಯಾಲಯವು ಅವರಿಗೆ ಜಾಮೀನು ಮಂಜೂರು ಮಾಡಿದ್ದು, ಜೈಲಿನಿಂದ ಹೊರಬಂದಿದ್ದಾರೆ.
#WATCH | After being released from Tihar Jail, Delhi CM Arvind Kejriwal says, "…I want to thank all of you. You gave me your blessings. I want to thank the judges of the Supreme Court, it is because of them that I am in front of you. We have to save the country from… pic.twitter.com/HDcgRCLED1
— ANI (@ANI) May 10, 2024
ಕೇಜ್ರಿವಾಲ್ ಫಸ್ಟ್ ರಿಯಾಕ್ಷನ್
ಜೈಲಿನಿಂದ ಬಿಡುಗಡೆಯಾದ ಬಳಿಕ ಕಾರ್ಯಕರ್ತರು ಅರವಿಂದ್ ಕೇಜ್ರಿವಾಲ್ ಅವರನ್ನು ಮೆರವಣಿಗೆ ಮಾಡಿದರು. ಇದೇ ವೇಳೆ ಮಾತನಾಡಿದ ಅವರು, “ನಾನು ನಿಮಗೆಲ್ಲ ಧನ್ಯವಾದ ಹೇಳಲು ಬಯಸುತ್ತೇನೆ. ನೀವೆಲ್ಲರೂ ನನಗೆ ಆಶೀರ್ವಾದ ಮಾಡಿದ್ದೀರಿ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೂ ನಾನು ಧನ್ಯವಾದ ತಿಳಿಸುತ್ತೇನೆ. ಅವರಿಂದಾಗಿಯೇ ನಾನು ಈಗ ಜೈಲಿನಿಂದ ಬಿಡುಗಡೆಯಾಗಿದ್ದೇನೆ. ಸರ್ವಾಧಿಕಾರದಿಂದ ಪ್ರಜಾಪ್ರಭುತ್ವವನ್ನು ಉಳಿಸಲು ಎಲ್ಲರೂ ಹೋರಾಡೋಣ” ಎಂದು ಹೇಳಿದರು.
#WATCH | Delhi CM Arvind Kejriwal released from Delhi's Tihar Jail after being granted interim bail in Delhi excise policy case
— ANI (@ANI) May 10, 2024
The Supreme Court granted him interim bail till June 1. pic.twitter.com/Qw80ugnehO
ಅಬಕಾರಿ ನೀತಿ ಪ್ರಕರಣವೇನು?
ಈ ಪ್ರಕರಣವು 2021-22ರ ದೆಹಲಿ ಸರ್ಕಾರದ ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದೆ. ದೆಹಲಿ ಸರ್ಕಾರವು ನಗರದ ಪ್ರಮುಖ ಮದ್ಯದ ವ್ಯಾಪಾರವನ್ನು ಪರಿಷ್ಕರಿಸುವ ನೀತಿಯನ್ನು ರೂಪಿಸಿದ್ದು, ವ್ಯಾಪಾರಿಗಳಿಗೆ ಪರವಾನಗಿ ಶುಲ್ಕದ ಬದಲಾವಣೆ ಸೇರಿದಂತೆ ಹಲವು ಬದಲಾವಣೆ ಮಾಡಿತ್ತು. ಆದರೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಇದರಲ್ಲಿ ಅಕ್ರಮಗಳನ್ನು ಆರೋಪಿಸಿ ನೀತಿಯ ಬಗ್ಗೆ ಸಿಬಿಐ ತನಿಖೆಗೆ ಕೋರಿದ್ದರು. ನಂತರ ನೀತಿಯನ್ನು ರದ್ದುಗೊಳಿಸಲಾಯಿತು.
ಸಿಬಿಐ ಮತ್ತು ಇಡಿ ಪ್ರಕಾರ, ಎಎಪಿ ನಾಯಕರು ಅಬಕಾರಿ ನೀತಿಯ ಅಡಿಯಲ್ಲಿ ಪರವಾನಗಿ ನೀಡಲು ರಾಜಕಾರಣಿಗಳು ಮತ್ತು ಮದ್ಯದ ಉದ್ಯಮಿಗಳ ಗುಂಪಿನಿಂದ ₹ 100 ಕೋಟಿ ಕಿಕ್‌ಬ್ಯಾಕ್‌ಗಳನ್ನು ಸ್ವೀಕರಿಸಿದ್ದಾರೆ. ಆರೋಪಪಟ್ಟಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಹೆಸರನ್ನೂ ಉಲ್ಲೇಖಿಸಲಾಗಿದ್ದು, ಅಬಕಾರಿ ನೀತಿ ಪ್ರಕರಣದ ಎಲ್ಲಾ ಆರೋಪಿಗಳು ಅಬಕಾರಿ ನೀತಿಯನ್ನು ರೂಪಿಸಲು ದೆಹಲಿ ಸಿಎಂ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿತ್ತು. ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಜೊತೆಗೆ ಭಾರತ್ ರಾಷ್ಟ್ರ ಸಮಿತಿ (BRS) ನಾಯಕಿ ಕೆ. ಕವಿತಾ ಮತ್ತು ಆಮ್ ಆದ್ಮಿ ಪಕ್ಷದ ಗೋವಾ ಚುನಾವಣೆ ನಿಧಿ ವ್ಯವಸ್ಥಾಪಕ ಚನ್‌ಪ್ರೀತ್ ಸಿಂಗ್ ಅವರನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: Arvind Kejriwal: ಜೂನ್ 1ರವರೆಗೆ ಕೇಜ್ರಿವಾಲ್‌ಗೆ ಜಾಮೀನು, ಮತದಾನ ಮುಗಿಯುವವರೆಗೆ ರಿಲೀಫ್