ನವದೆಹಲಿ: ಕೆಲವು ದಿನಗಳ ಹಿಂದಷ್ಟೇ, “ನನಗೆ 52 ವರ್ಷವಾದರೂ ಸ್ವಂತ ಮನೆ ಇಲ್ಲ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದರು. ಅದರಲ್ಲೂ, ಮಾನಹಾನಿ ಪ್ರಕರಣದಲ್ಲಿ ಸಿಲುಕಿ, ಲೋಕಸಭೆಯಿಂದ ಅನರ್ಹರಾದ ಬಳಿಕ ಅವರಿಗೆ ನೀಡಿದ್ದ ಅಧಿಕೃತ ನಿವಾಸವನ್ನೂ ತೆರವುಗೊಳಿಸಬೇಕಿದೆ. ಸರ್ಕಾರದ ನಿವಾಸವನ್ನು ರಾಹುಲ್ ಗಾಂಧಿ ತೊರೆಯಬೇಕಾದ ಕಾರಣ ಕಾಂಗ್ರೆಸ್ ನಾಯಕಿಯೊಬ್ಬರು ರಾಹುಲ್ ಗಾಂಧಿ (Rahul Gandhi) ಅವರಿಗೆ ತಮ್ಮ ನಾಲ್ಕು ಅಂತಸ್ತಿನ ಮನೆಯನ್ನೇ ಬರೆದುಕೊಟ್ಟಿದ್ದಾರೆ.
ಹೌದು, ದೆಹಲಿ ಕಾಂಗ್ರೆಸ್ ಸೇವಾ ದಳದ ಅಧ್ಯಕ್ಷೆಯಾಗಿರುವ ರಾಜಕುಮಾರಿ ಗುಪ್ತಾ ಅವರು ರಾಹುಲ್ ಗಾಂಧಿ ಅವರ ಹೆಸರಿಗೆ ನಾಲ್ಕು ಮಹಡಿಯ ಮನೆಯನ್ನು ವರ್ಗಾವಣೆ ಮಾಡಿದ್ದಾರೆ. “ದೆಹಲಿ ಕಾಂಗ್ರೆಸ್ ಸೇವಾದಳ ಅಧ್ಯಕ್ಷೆಯಾಗಿರುವ ರಾಜಕುಮಾರಿ ಗುಪ್ತಾ ಅವರು ಮಂಗೋಲ್ಪುರಿ ಪ್ರದೇಶದಲ್ಲಿರುವ ತಮ್ಮ ಮನೆಯನ್ನು ರಾಹುಲ್ ಗಾಂಧಿ ಅವರಿಗೆ ನೀಡಿದ್ದಾರೆ. ಗುಪ್ತಾ ಅವರು ಇಂದಿರಾ ಗಾಂಧಿ ಅವರ ಕಾಲದಲ್ಲಿ ಈ ಮನೆಯನ್ನು ಪಡೆದಿದ್ದರು. ರಾಹುಲ್ ಗಾಂಧಿ ಅವರನ್ನು ಮೋದಿ ಅವರು ಮನೆಯಿಂದ ಓಡಿಸಬಲ್ಲರು, ಜನರ ಹೃದಯದಿಂದ ಓಡಿಸಲು ಸಾಧ್ಯವಿಲ್ಲ” ಎಂಬುದಾಗಿ ರಾಜಕುಮಾರಿ ಅವರು ಹೇಳಿದ್ದಾರೆ ಕಾಂಗ್ರೆಸ್ ಸೇವಾದಳ ಟ್ವೀಟ್ ಮಾಡಿದೆ.
ಮನೆಯ ಡೀಡ್ ತೋರಿಸಿದ ಗುಪ್ತಾ
ರಾಜಕುಮಾರ್ ಗುಪ್ತಾ ಅವರು ರಾಹುಲ್ ಗಾಂಧಿ ಅವರಿಗೆ ಮನೆ ನೀಡಿರುವ ಕುರಿತ ವಿಡಿಯೊವನ್ನು ಕೂಡ ಕಾಂಗ್ರೆಸ್ ಹಂಚಿಕೊಂಡಿದೆ. 22 ಸೆಕೆಂಡ್‌ನ ವಿಡಿಯೊದಲ್ಲಿ ರಾಜಕುಮಾರಿ ಅವರು ತಮ್ಮ ಮನೆಯ ಡೀಡ್ ಹಿಡಿದುಕೊಂಡಿರುವ ದೃಶ್ಯವಿದೆ. ರಾಹುಲ್ ಗಾಂಧಿ ಹೆಸರಿಗೆ ಮನೆಯನ್ನು ಬರೆದ ಬಳಿಕ ಅವರು ಪ್ರಮಾಣಪತ್ರವನ್ನು ಮಾಧ್ಯಮದವರಿಗೆ ತೋರಿಸಿದ್ದಾರೆ ಎಂದು ತಿಳಿದುಬಂದಿದೆ. ರಾಹುಲ್ ಗಾಂಧಿ ಅವರು ನಿವಾಸ ಖಾಲಿ ಮಾಡಬೇಕು ಎಂಬುದಾಗಿ ನೋಟಿಸ್ ನೀಡಿದ ಕಾರಣ ಮನನೊಂದು ಗುಪ್ತಾ ಅವರು ತಮ್ಮ ಮನೆಯನ್ನೇ ಕಾಂಗ್ರೆಸ್ ನಾಯಕನಿಗೆ ನೀಡಿದ್ದಾರೆ.
ಮೋದಿ ಉಪನಾಮ ಹೊಂದಿರುವ ಎಲ್ಲರೂ ಕಳ್ಳರೇ ಎಂದು ರಾಹುಲ್ ಗಾಂಧಿ ಅವರು ಹೇಳಿಕೆ ನೀಡಿದ್ದ ಕಾರಣ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು. ಪ್ರಕರಣದಲ್ಲಿ ರಾಹುಲ್ ಗಾಂಧಿ ದೋಷಿ ಎಂದು ತೀರ್ಪು ನೀಡಿದ ಸೂರತ್ ನ್ಯಾಯಾಲಯವು ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಹಾಗಾಗಿ, ಅವರು ಲೋಕಸಭೆಯಿಂದ ಅನರ್ಹಗೊಂಡಿದ್ದಾರೆ. ಇದರಿಂದಾಗಿ ತುಘಲಕ್ ಲೇನ್‌ನಲ್ಲಿ ರಾಹುಲ್ ಗಾಂಧಿ ವಾಸವಾಗಿರುವ 12ನೇ ಸಂಖ್ಯೆಯ ಸರ್ಕಾರಿ ನಿವಾಸವನ್ನು ಏಪ್ರಿಲ್ 23ರೊಳಗೆ ಖಾಲಿ ಮಾಡಬೇಕು ಎಂಬುದಾಗಿ ನೋಟಿಸ್ ನೀಡಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ, ಖಾಲಿ ಮಾಡುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: Rahul Gandhi Disqualified: ರಾಹುಲ್ ಗಾಂಧಿ ರೀತಿ ಮತ್ಯಾವ ನಾಯಕರು ಅನರ್ಹ?