ನವದೆಹಲಿ: ದಿಲ್ಲಿ ಮೇಯರ್ ಚುನಾವಣೆಯನ್ನು (Delhi Mayor Polls) ಶುಕ್ರವಾರದಂದು ನಿಗದಿ ಮಾಡಲಾಗಿತ್ತು. ಅದರಂತೆ, ಬೆಳಗ್ಗೆ ಪಾಲಿಕೆ ಸಭೆ ಆರಂಭವಾಗುತ್ತಿದ್ದಂತೆ, ಸ್ಪೀಕರ್ ನೇಮಕ ವಿಷಯದಲ್ಲಿ ಆಮ್ ಆದ್ಮಿ ಪಾರ್ಟಿ(AAP) ಮತ್ತು ಬಿಜೆಪಿ (BJP) ಸದಸ್ಯರು ಪರಸ್ಪರ ಘೋಷಣೆ ಕೂಗಿ, ಗಲಾಟೆ ನಡೆಸಿದರು. ಕಲಾಪ ನಡೆಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾದ್ದರಿಂದ, ಮೇಯರ್ ಆಯ್ಕೆಯನ್ನು ಮುಂದಕ್ಕೆ ಹಾಕಲಾಗಿದೆ!
ಆಪ್ ಮತ್ತು ಬಿಜೆಪಿ ಸದಸ್ಯರ ಪರಸ್ಪರ ಹೊಡೆದಾಟ, ತಳ್ಳಾಟ ಮತ್ತು ಗದ್ದಲದೊಂದಿಗೆ ಪಾಲಿಕೆ ಸಭೆ ಆರಂಭವಾಯಿತು. ಕೆಲವು ಸದಸ್ಯರಂತೂ ಮೇಜುಗಳು ಮತ್ತು ವೇದಿಕೆಯ ಮೇಲೆ ಹತ್ತಿ, ಗಲಾಟೆ ನಡೆಸಿದರು. ಸಭೆಯಲ್ಲಿ ಕೋಲಾಹಲವೇ ಸೃಷ್ಟಿಯಾಯಿತು. ಪರಸ್ಪರ ಕುರ್ಚಿಯನ್ನು ಎಸೆಯುವುದು ಸೇರಿದಂತೆ ಅಹಿತಕರ ಘಟನೆಗಳು ನಡೆದವು. ಮೇಯರ್ ಎಲೆಕ್ಷನ್ ನಡೆಸಲು ಸಾಧ್ಯವಾಗದಂಥ ಪರಿಸ್ಥಿತಿ ನಿರ್ಮಾಣವಾಯಿತು. ಅಂತಿಮವಾಗಿ ಅಧಿಕಾರಿಗಳು ಮೇಯರ್ ಎಲೆಕ್ಷನ್ ಸಭೆಯನ್ನು ಮುಂದೂಡಲಾಯಿತು.
ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಆಪ್ ಪಕ್ಷವು ಪ್ರಚಂಡ ಗೆಲುವು ಸಾಧಿಸುವುದರೊಂದಿಗೆ, 15 ವರ್ಷಗಳ ಬಿಜೆಪಿಯ ಪಾಲಿಕೆಯ ಆಡಳಿತಕ್ಕೆ ಅಂತ್ಯ ಹಾಡಿತ್ತು. ಆದರೆ, ಉಭಯ ಪಕ್ಷಗಳ ನಡುವಿನ ವೈಮನಸ್ಸು ಮುಂದುವರಿದಿದ್ದು, ಅದು ಶುಕ್ರವಾರದ ಪಾಲಿಕೆ ಸಭೆ ವೇಳೆ ಪ್ರಕಟವಾಯಿತು.
ಏಕೆ ಗಲಾಟೆ?
ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ತಾತ್ಕಾಲಿಕವಾಗಿ ಬಿಜೆಪಿಯ ಸತ್ಯಾ ಶರ್ಮಾ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡುತ್ತಿದ್ದಂತೆ ಸಭೆಯಲ್ಲಿ ಸಂಘರ್ಷ ಶುರುವಾಯಿತು. ಶರ್ಮಾ ಅವರು ಮೊದಲಿಗೆ, ನಾಮನಿರ್ದೇಶನಗೊಂಡ ಸದಸ್ಯರಿಗೆ ಪ್ರಮಾಣವಚನ ಬೋಧಿಸಲು ಮುಂದಾದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಪ್ ಸದಸ್ಯರು, ನಾಮನಿರ್ದೇಶನಗೊಂಡ ಸದಸ್ಯರಿಗಿಂತ ಮೊದಲು, ಚುನಾಯಿತ ಸದಸ್ಯರಿಗೆ ಪ್ರಮಾಣವಚನ ಬೋಧಿಸಬೇಕು ಎಂದು ಪಟ್ಟು ಹಿಡಿದರು. ಆಗ ಬಿಜೆಪಿ ಮತ್ತು ಆಪ್ ಸದಸ್ಯರ ಮಧ್ಯೆ ಜಟಾಪಟಿ ಶುರುವಾಯಿತು.
ಹೊಸದಾಗಿ ಚುನಾಯಿತವಾದ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್‌ಗೆ 10 ಸದಸ್ಯರನ್ನು ನಾಮನಿರ್ದೇಶನ ಮಾಡಲಾಗಿದೆ. ಸಕ್ಸೇನಾ ಅವರು ಶುಕ್ರವಾರ ಮೇಯರ್ ಚುನಾವಣೆಯ ಅಧ್ಯಕ್ಷತೆ ವಹಿಸಲು ಬಿಜೆಪಿ ಕೌನ್ಸಿಲರ್ ಸತ್ಯ ಶರ್ಮಾ ಅವರನ್ನು ತಾತ್ಕಾಲಿಕ ಸ್ಪೀಕರ್ ಎಂದು ಘೋಷಿಸಿದರು. ಮೇಯರ್ ಆಯ್ಕೆಯ ಹಿನ್ನೆಲೆಯು ಆಪ್ ಮತ್ತು ಬಿಜೆಪಿ ಸದಸ್ಯರ ಮಧ್ಯೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ.
ಇದನ್ನೂ ಓದಿ | Delhi MCD Election | ಆಪ್ ವಿರುದ್ಧ ಸೋತಿದ್ದರೂ ಮೇಯರ್-ಉಪಮೇಯರ್ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಬಿಜೆಪಿ