ದೆಹಲಿ ಮಹಾನಗರ ಪಾಲಿಕೆ (Delhi MCD) ಚುನಾವಣೆ ಡಿಸೆಂಬರ್ನಲ್ಲಿ ಮುಕ್ತಾಯವಾದಾಗಿನಿಂದಲೂ ಆಪ್ ಮತ್ತು ಬಿಜೆಪಿ ಕಿತ್ತಾಟ ನಡೆಯುತ್ತಲೇ ಇದೆ. ಮೇಯರ್ ಆಯ್ಕೆ ಚುನಾವಣೆ ಸಂಬಂಧ ಹೊಡೆದಾಟ-ಗಲಾಟೆ ನಡೆದು ಅಂತಿಮವಾಗಿ ಫೆ.22ರಂದು ಮೇಯರ್ ಆಯ್ಕೆಯೂ ಆಯಿತು. ಅದರ ಬೆನ್ನಲ್ಲೇ ಇಂದು ಸ್ಥಾಯಿ ಸಮಿತಿಗೆ ಆರು ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯುತ್ತಿದ್ದಾಗ ಕೂಡ ಆಪ್ ಮತ್ತು ಬಿಜೆಪಿ ಕೌನ್ಸಿಲರ್ಗಳ ಮಧ್ಯೆ ಮಾರಾಮಾರಿ ನಡೆದಿದೆ. ಪರಸ್ಪರರು ಗುದ್ದಾಡಿಕೊಂಡು-ತಳ್ಳಾಡಿದ್ದಾರೆ. ಹೀಗೆ ಹೊಡೆದಾಟ ಮಾಡಿ, ಸುಸ್ತಾಗಿ ಪಾಲಿಕೆಯ ಸದನದೊಳಗೇ ಮಲಗಿ ನಿದ್ದೆ ಹೋಗಿದ್ದಾರೆ. ನಿದ್ದೆಯಿಂದ ಎದ್ದವರು ಮತ್ತೆ ಜಗಳ ಮಾಡಿಕೊಂಡಿದ್ದಾರೆ.
ಇಂದು ಮುಂಜಾನೆಯೇ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಚುನಾವಣೆ ನಡೆಯಿತು. ಆದರೆ ರಹಸ್ಯ ಮತದಾನದ ವೇಳೆ ಆಮ್ ಆದ್ಮಿ ಪಕ್ಷದ ಕೌನ್ಸಿಲರ್ಗಳು ಬಂದು ಫೋಟೋ ತೆಗೆದಿದ್ದಾರೆ. ಹಾಗಾಗಿ ಈ ಮತದಾನವನ್ನು ರದ್ದುಗೊಳಿಸಿ ಮರು ಚುನಾವಣೆ ನಡೆಸಬೇಕು ಎಂದು ಬಿಜೆಪಿಗರು ಆಗ್ರಹಿಸಿದರು. ಅದೇ ಒಂದು ನೆಪವಾಗಿ ಎರಡೂ ಪಕ್ಷಗಳ ಕೌನ್ಸಿಲರ್ಗಳು ಹಲ್ಲೆ ಮಾಡಿಕೊಂಡರು. ಅದರಲ್ಲೂ ಮಹಿಳಾ ಕೌನ್ಸಿಲರ್ಗಳೇ ಮುಂದೆ ಬಂದು ಗುದ್ದಾಡಿಕೊಂಡು, ತಳ್ಳಾಡಿದ್ದಾರೆ. ಅದರಲ್ಲಿ ಕೆಲವರು ಕೆಳಗೆ ಕೂಡ ಬಿದ್ದಿದ್ದಾರೆ. ಈ ಮಧ್ಯೆ ಆಪ್ನ ಮೇಯರ್ ಶೆಲ್ಲಿ ಒಬೆರಾಯ್ ಕೂಡ ಬಿಜೆಪಿ ಕೌನ್ಸಿಲರ್ಗಳ ವಿರುದ್ಧ ಆರೋಪ ಮಾಡಿದ್ದಾರೆ. ತಮ್ಮ ಮೇಲೆ ಹಲ್ಲೆ ನಡೆಸಿದ್ದಾಗಿ ಹೇಳಿದ್ದಾರೆ.
ಇದನ್ನೂ ಓದಿ: Delhi MCD: ದೆಹಲಿ ಮಹಾನಗರ ಪಾಲಿಕೆಯಲ್ಲಿ ಮತ್ತೆ ಆಪ್-ಬಿಜೆಪಿ ಮಾರಾಮಾರಿ; ಗುದ್ದಾಡಿ, ತಳ್ಳಾಡಿಕೊಂಡ ಕೌನ್ಸಿಲರ್ಗಳು
ಇಂದು ಬೆಳಗ್ಗೆ ಪಾಲಿಕೆಯಲ್ಲಿ ಆಪ್-ಬಿಜೆಪಿ ಜಗಳ ಶುರುವಾಗಿ, ಅದು ಹೊಡೆದಾಟದ ಹಂತಕ್ಕೆ ಹೋಗುತ್ತಿದ್ದಂತೆ ಮೇಯರ್ ಶೆಲ್ಲಿ, ಸಭೆಯನ್ನು ಮುಂದೂಡಿದ್ದರು. ಅಷ್ಟಾದ ಮೇಲೆ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಚುನಾವಣೆ ನಡೆಯಿತೋ, ಇಲ್ಲವೋ? ಸದಸ್ಯರು ಆಯ್ಕೆಯಾದರೋ ಇಲ್ಲವೋ ಎಂಬ ಬಗ್ಗೆ ಇನ್ನೂ ಮಾಹಿತಿ ಹೊರಬಿದ್ದಿಲ್ಲ. ಅದೇನೇ ಆಗಲಿ, ಇವತ್ತೇ ಚುನಾವಣೆ ನಡೆಸುತ್ತೇವೆ ಎಂದು ಆಪ್ ಹೇಳಿಕೊಂಡಿದೆ.