ನವದೆಹಲಿ: ಬಿಹಾರದಲ್ಲಿ ನಡೆದಿದೆ ಎನ್ನಲಾದ ಉದ್ಯೋಗಕ್ಕಾಗಿ ಜಮೀನು ಹಗರಣಕ್ಕೆ (Land For Job Case) ಸಂಬಂಧಿಸಿದಂತೆ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್, ಅವರ ಪತ್ನಿ ರಾಬ್ರಿ ದೇವಿ, ಪುತ್ರಿ ಮಿಸಾ ಭಾರತಿ ಸೇರಿ ಹಲವರಿಗೆ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಿಹಾರ ವಿಧಾನಸಭೆಯಲ್ಲಿ ಬಿಜೆಪಿ ಹಾಗೂ ಆರ್‌ಜೆಡಿ ಶಾಸಕರ ಮಧ್ಯೆ ಜಟಾಪಟಿ ನಡೆದಿದೆ.
ಲಾಲು ಪ್ರಸಾದ್ ಯಾದವ್ ಸೇರಿ ಹಲವರಿಗೆ ಜಾಮೀನು ನೀಡಿದ ಕಾರಣ ವಿಧಾನಸಭೆಯಲ್ಲಿ ಆರ್‌ಜೆಡಿ ಶಾಸಕರು ಲಡ್ಡು ಹಂಚಿದ್ದಾರೆ. ಇದೇ ವೇಳೆ ಬಿಜೆಪಿ ಹಾಗೂ ಆರ್‌ಜೆಡಿ ಶಾಸಕರ ಮಧ್ಯೆ ಗಲಾಟೆಯಾಗಿದೆ. ಬಿಜೆಪಿ ಶಾಸಕರು ಸದನದಿಂದ ಹೊರಗೆ ಬಂದಿದ್ದಾರೆ. ಹೀಗಿದ್ದರೂ ಆರ್‌ಜೆಡಿ ಶಾಸಕರೊಂದಿಗೆ ಬಿಜೆಪಿ ಶಾಸಕರು ವಾಗ್ವಾದ ನಡೆಸಿದ್ದಾರೆ. ಕೊನೆಗೆ ಆರ್‌ಜೆಡಿ ಶಾಸಕರು ಕೊಟ್ಟ ಲಡ್ಡುಗಳನ್ನು ಬಿಜೆಪಿ ಶಾಸಕರು ಬಿಸಾಡಿದ್ದಾರೆ.
ಬಿಜೆಪಿ-ಆರ್‌ಜೆಡಿ ಶಾಸಕರ ಜಟಾಪಟಿ
ಎರಡೂ ಪಕ್ಷಗಳ ಶಾಸಕರ ಜಟಾಪಟಿಯ ವಿಡಿಯೊ ವೈರಲ್ ಆಗಿದೆ. “ಆರ್‌ಜೆಡಿ ಶಾಸಕರು ಲಡ್ಡುಗಳನ್ನು ಹಂಚುವ ನೆಪದಲ್ಲಿ ಗಲಾಟೆ ಮಾಡಿದ್ದಾರೆ. ವಸ್ತುಗಳನ್ನು ಬಿಸಾಡಿ ದುರ್ವರ್ತನೆ ತೋರಿದ್ದಾರೆ. ನಮ್ಮ ಮೇಲೆ ಗೂಂಡಾಗಿರಿ ನಡೆಸಿದ್ದಾರೆ. ಸದನದ ಕಾರ್ಯಕಲಾಪಗಳಿಗೆ ಅವರು ಅಡ್ಡಿ ಮಾಡಿದ್ದಾರೆ. ನಾವು ಈ ಕುರಿತು ರಾಜ್ಯಪಾಲರಿಗೆ ದೂರು ನೀಡುತ್ತೇವೆ” ಎಂದು ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ವಿಜಯ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ.
2004ರಿಂದ 2009ರ ಅವಧಿಯಲ್ಲಿ ಕೇಂದ್ರದಲ್ಲಿ ಯುಪಿಎ ಸರ್ಕಾರ ಆಡಳಿತದಲ್ಲಿದ್ದಾಗ ರೈಲ್ವೆ ಸಚಿವರಾಗಿದ್ದ ಲಾಲು ಪ್ರಸಾದ್ ಯಾದವ್ ಅವರು ಸಂಬಂಧಿಕರು ಸೇರಿ ಹಲವರಿಂದ ಜಮೀನು ಪಡೆದು ಅವರಿಗೆ ಉದ್ಯೋಗ ನೀಡಿದ್ದಾರೆ ಎಂಬ ಆರೋಪವಿದೆ. ಇದಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ED) ದೇಶದ ಹಲವೆಡೆ ದಾಳಿ ನಡೆಸಿ, ನೂರಾರು ಕೋಟಿ ರೂ. ಅಕ್ರಮ ಆಸ್ತಿ ಪತ್ತೆಹಚ್ಚಿದೆ. ಲಾಲು ಯಾದವ್ ಸೇರಿ ಹಲವರನ್ನು ವಿಚಾರಣೆ ನಡೆಸಿದೆ.
ಇದನ್ನೂ ಓದಿ: Land For Job Case: ತೇಜಸ್ವಿ ನಿವಾಸದಲ್ಲಿ ಬಗೆದಷ್ಟೂ ಹಣ, 600 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ