ನವದೆಹಲಿ: ಕರ್ನಾಟದಲ್ಲಿ ವಿದ್ಯುತ್ ದರ ಏರಿಕೆಯಿಂದ ಜನ ಆಕ್ರೋಶ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ದೆಹಲಿಯಲ್ಲೂ ವಿದ್ಯುತ್ ದರ ಏರಿಕೆ ಮಾಡಲಾಗಿದೆ. ವಿದ್ಯುತ್ ಪೂರೈಕೆ ಮಾಡುವ ಕಂಪನಿಗಳಿಗೆ ವಿದ್ಯುತ್ ದರ (Power Tariff) ಏರಿಸಲು ದೆಹಲಿ ವಿದ್ಯುತ್ ನಿಯಂತ್ರಣ ಆಯೋಗ (DERC)ವು ಅನುಮತಿ ನೀಡಿದೆ. ಇದು ಈಗ ಕೇಂದ್ರ ಹಾಗೂ ದೆಹಲಿಯ ಆಪ್ ಸರ್ಕಾರದ ಮಧ್ಯೆ ವಾಗ್ವಾದಕ್ಕೆ ಕಾರಣವಾಗಿದೆ.
ವಿದ್ಯುತ್ ಸರಬರಾಜು ಕಂಪನಿಗಳಾದ ಬಿಎಸ್‌ಇಎಸ್ ಯಮುನಾ ಪವರ್ ಲಿಮಿಟೆಡ್ (BYPL)ಗೆ ಶೇ.9.42ರಷ್ಟು, ಬಿಎಸ್‌ಇಎಸ್ ರಾಜಧಾನಿ ಪವರ್ ಲಿಮಿಟೆಡ್ (BRPL)ಗೆ ಶೇ. 6.39ರಷ್ಟು ಹಾಗೂ ನ್ಯೂ ಡೆಲ್ಲಿ ಮುನ್ಸಿಪಲ್ ಕೌನ್ಸಿಲ್ (NDMC)ಗೆ ಶೇ.2ರಷ್ಟು ವಿದ್ಯುತ್ ದರ ಏರಿಕೆ ಮಾಡಲು ಡಿಇಆರ್‌ಸಿ ಅನುಮೋದನೆ ನೀಡಿದೆ. ಇದರಿಂದ ಮುಂದಿನ ದಿನಗಳಲ್ಲಿ ಜನ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ದೆಹಲಿಯಲ್ಲಿ 2014ರಿಂದ ವಿದ್ಯುತ್ ದರ ಏರಿಕೆ ಮಾಡಿರಲಿಲ್ಲ.
ಕೇಂದ್ರದ ವಿರುದ್ಧ ಆಪ್ ವಾಗ್ದಾಳಿ
ವಿದ್ಯುತ್ ದರ ಏರಿಕೆ ಮಾಡಿದ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ಆಮ್ ಆದ್ಮಿ ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ. “ದೆಹಲಿಯಲ್ಲಿ ವಿದ್ಯುತ್ ದರ ಏರಿಕೆಯಾಗಲು ಕೇಂದ್ರ ಸರ್ಕಾರವೇ ಕಾರಣವಾಗಿದೆ. ಆದಾಗ್ಯೂ, 200 ಯುನಿಟ್‌ವರೆಗೆ ವಿದ್ಯುತ್‌ಅನ್ನು ಉಚಿತವಾಗಿ ಬಳಸುವವರಿಗೆ ಬೆಲೆಯೇರಿಕೆಯಿಂದ ಯಾವುದೇ ತೊಂದರೆ ಆಗುವುದಿಲ್ಲ. ಬೇರೆ ಗ್ರಾಹಕರು ಶೇ.8ರಷ್ಟು ಸರ್‌ಚಾರ್ಜ್ ಕಟ್ಟಬೇಕಾಗುತ್ತದೆ. ಕೇಂದ್ರ ಸರ್ಕಾರದ ಅಸಮರ್ಪಕ ನಿರ್ವಹಣೆ ಹಾಗೂ ಕಲ್ಲಿದ್ದಿಲಿನ ದರ ಹೆಚ್ಚಾದ ಕಾರಣ ವಿದ್ಯುತ್ ದರ ಏರಿಕೆಯಾಗಿದೆ” ಎಂದು ದೆಹಲಿ ಸಚಿವೆ ಆತಿಶಿ ಆರೋಪಿಸಿದ್ದಾರೆ.
ಇದನ್ನೂ ಓದಿ: How to apply Gruha Jyothi : ಉಚಿತ ವಿದ್ಯುತ್ ಪಡೆಯಲು 5 ನಿಮಿಷದಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ
ಗ್ರಾಹಕರ ಮೇಲೆ ಪರಿಣಾಮ ಇಲ್ಲ ಎಂದ ದೆಹಲಿ ಎನ್‌ಸಿಟಿ
ವಿದ್ಯುತ್ ಬೆಲೆಯೇರಿಕೆಯಿಂದ ಗ್ರಾಹಕರ ಮೇಲೆ ನೇರವಾಗಿ ಪರಿಣಾಮ ಬೀರುವುದಿಲ್ಲ ಎಂದು ದೆಹಲಿ ಎನ್‌ಸಿಟಿ ಆಡಳಿತ ತಿಳಿಸಿದೆ. “ವಿದ್ಯುತ್ ಖರೀದಿ ಒಪ್ಪಂದದ ಪ್ರಕಾರ ವಿದ್ಯುತ್ ದರದಲ್ಲಿ ಏರಿಳಿತವಾಗುತ್ತದೆ. ಚಳಿಗಾಲದಲ್ಲಿ ಇಳಿಕೆಯಾದರೆ, ಬೇಸಿಗೆಯಲ್ಲಿ ಏರಿಕೆಯಾಗುತ್ತದೆ. ಹಾಗಾಗಿ, ಇದರಿಂದ ಗ್ರಾಹಕರಿಗೆ ನೇರವಾಗಿ ಯಾವುದೇ ಪರಿಣಾಮ ಬೀರುವುದಿಲ್ಲ” ಎಂದು ತಿಳಿಸಿದೆ. ಕರ್ನಾಟಕದಲ್ಲಿ ಕೆಲ ದಿನಗಳ ಹಿಂದೆ ವಿದ್ಯುತ್ ದರ ಏರಿಕೆಯಾಗಿದ್ದು, ಜನಾಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆಯೂ ಆರೋಪ-ಪ್ರತ್ಯಾರೋಪಗಳು ಶುರುವಾಗಿವೆ.
ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ