ನವ ದೆಹಲಿ: ದಿಲ್ಲಿಯಿಂದ ದುಬೈಗೆ ಹೊರಟಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಕ್ಷಣವೇ ಅದನ್ನು ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿದೆ. ಮಂಗಳವಾರ ಬೆಳಗ್ಗೆ ಈ ವಿಮಾನ ಹಾರಾಟ ಆರಂಭಿಸಿ ಸ್ವಲ್ಪ ಹೊತ್ತಿನಲ್ಲಿ ತೊಂದರೆ ಕಾಣಿಸಿಕೊಂಡಿತು. ಕೂಡಲೇ ಕರಾಚಿ ವಿಮಾನ ನಿಲ್ದಾಣವನ್ನು ಸಂಪರ್ಕಿಸಿ ಅನುಮತಿ ಪಡೆದು ಇಳಿಸಲಾಯಿತು. ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಗಿದೆ. ಸ್ಪೈಸ್ ಜೆಟ್ ವಿಮಾನಗಳಲ್ಲಿ ಪದೇಪದೆ ಇಂಥ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವುದು ಕಂಡುಬಂದಿದೆ.
ಸ್ಪೈಸ್ ಜೆಟ್ ಬಿ೭೩೭ ವಿಮಾನ ದಿಲ್ಲಿಯಿಂದ ದುಬೈಗೆ ಪ್ರಯಾಣಿಸುತ್ತಿದ್ದಾಗ ಅದರ ಇಂಡಿಕೇಟರ್ ಲೈಟ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವುದು ಗಮನಕ್ಕೆ ಬಂತು. ಕೂಡಲೇ ಕರಾಚಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು. ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಗಿದೆ ಎಂದು ಸ್ಪೈಸ್ ಜೆಟ್ ವಕ್ತಾರರು ತಿಳಿಸಿದ್ದಾರೆ.
ʻʻಯಾವುದೇ ತುರ್ತು ಲ್ಯಾಂಡಿಂಗ್ ಘೋಷಣೆ ಮಾಡಲಾಗಿಲ್ಲ. ವಿಮಾನ ಸಾಮಾನ್ಯ ಲ್ಯಾಂಡಿಂಗ್ ಮಾಡಿದೆ. ಈ ವಿಮಾನದಲ್ಲಿ ಹಿಂದೆ ಎಂದೂ ಈ ಸಮಸ್ಯೆ ಕಾಣಿಸಿಕೊಂಡಿರಲಿಲ್ಲʼʼ ಎಂದು ವಕ್ತಾರರು ತಿಳಿಸಿದ್ದಾರೆ. ʻʻಪ್ರಯಾಣಿಕರಿಗೆ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಪ್ರತ್ಯೇಕ ವಿಮಾನವನ್ನು ಕರಾಚಿಗೆ ಕಳುಹಿಸಲಾಗುತ್ತಿದ್ದು, ಅದು ಪ್ರಯಾಣಿಕರನ್ನು ದುಬೈಗೆ ಕರೆದೊಯ್ಯಲಿದೆ,ʼʼ ಎಂದು ಹೇಳಿದ್ದಾರೆ.
ಇನ್ನೊಂದು ಮೂಲದ ಪ್ರಕಾರ, ಬೆಳಗ್ಗೆ ೮.೦೪ಕ್ಕೆ ದಿಲ್ಲಿಯಿಂದ ಹೊರಟ ವಿಮಾನದಲ್ಲಿ ತೈಲ ಪ್ರಮಾಣ ಅತ್ಯಂತ ತ್ವರಿತ ಗತಿಯಲ್ಲಿ ಇಳಿಯುತ್ತಿದ್ದುದನ್ನು ಗಮನಿಸಿ ವಿಮಾನವನ್ನು ಕರಾಚಿಯಲ್ಲಿ ಇಳಿಸಲಾಯಿತು. ಬೆಳಗ್ಗೆ ೯.೩೦ಕ್ಕೆ ಕರಾಚಿಯಲ್ಲಿ ವಿಮಾನ ಇಳಿದಿದೆ. ದುಬೈಗೆ ಅಲ್ಲಿಂದ ಇನ್ನೂ ಮೂರು ಗಂಟೆಯ ಪ್ರಯಾಣವಿದೆ. ಮಧ್ಯಾಹ್ನ ೧.೩೦ಕ್ಕೆ ಮುಂಬಯಿಯಿಂದ ಪ್ರತ್ಯೇಕ ವಿಮಾನ ಕರಾಚಿಗೆ ಹೊರಟಿದ್ದು, ಅಲ್ಲಿಂದ ಪ್ರಯಾಣಿಕರನ್ನು ಕರೆದುಕೊಂಡು ದುಬೈಗೆ ಹಾರಲಿದೆ.
ಎರಡೇ ತಿಂಗಳಲ್ಲಿ ಇದು ಐದನೇ ಬಾರಿ
ಸ್ಪೈಸ್ ಜೆಟ್ ವಿಮಾನಗಳಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ಸಂಚಾರ ವ್ಯತ್ಯಯವಾಗುತ್ತಿರುವುದು ಕಳೆದ ಎರಡೇ ತಿಂಗಳಲ್ಲಿ ಇದು ಐದನೇ ಬಾರಿ.
ಕೆಲವೇ ದಿನಗಳ ಹಿಂದೆ ದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಪ್ರದೇಶದ ಜಬಲ್ಪುರಕ್ಕೆ ಹೊರಟಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತುರ್ತಾಗಿ ಮರಳಿ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಲಾಗಿದೆ. ದಿಲ್ಲಿಯಿಂದ ಹೊರಟ ಈ ವಿಮಾನದಲ್ಲಿ ೫೦ ಪ್ರಯಾಣಿಕರು ಇದ್ದರು. ವಿಮಾನ ಟೇಕಾಫ್ ಆಗಿ ಸುಮಾರು ೫೦೦೦ ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಕ್ಯಾಬಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.
– ಜೂನ್ ೧೯ರಂದು 185 ಪ್ರಯಾಣಿಕರನ್ನು ಹೊತ್ತು ಪಟನಾದಿಂದ ದಿಲ್ಲಿಗೆ ಹೊರಟಿದ್ದ ವಿಮಾನದಲ್ಲಿ ಟೇಕಾಫ್ ಆದ ಕೂಡಲೇ ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಅದನ್ನು ಪಟನಾ ವಿಮಾನ ನಿಲ್ದಾಣದಲ್ಲೇ ಇಳಿಸಲಾಯಿತು.
– ಜೂನ್ ೨೫ರಂದು ಪಟನಾದಿಂದ ಗುವಾಹಟಿಗೆ ಹೋಗುತ್ತಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಾಗ ಕೂಡಲೇ ವಿಮಾನವನ್ನು ಪಟನಾದಲ್ಲಿ ತುರ್ತು ಭೂಸ್ಪರ್ಶ ಮಾಡಿಸಲಾಯಿತು.
– ಮೇ ೪ರಂದು ಚೆನ್ನೈನಿಂದ ದುರ್ಗಾಪುರಕ್ಕೆ ಹೋಗುತ್ತಿದ್ದ ವಿಮಾನದಲ್ಲಿ ಮಾರ್ಗಮಧ್ಯೆ ಸಮಸ್ಯೆ ಉಂಟಾಗಿದ್ದಿಂದ ಚೆನ್ನೈಗೆ ವಾಪಸ್ ಬರಲಾಯಿತು.
ಇದನ್ನೂ ಓದಿ| ಸ್ಪೈಸ್ ಜೆಟ್ ವಿಮಾನದಲ್ಲಿ ಹೊಗೆ ಕಂಡ ಬಳಿಕ ತುರ್ತು ಭೂಸ್ಪರ್ಶ, 2 ತಿಂಗಳಲ್ಲಿ 4ನೇ ಅವಘಡ