Site icon Vistara News

Arvind Kejriwal: ಅರವಿಂದ್‌ ಕೇಜ್ರಿವಾಲ್‌ಗೆ ತಪ್ಪದ ಸಂಕಷ್ಟ; ಇನ್ನೂ 4 ದಿನ ಜೈಲೇ ಗತಿ!

Arvind Kejriwal

Delhi Excise Policy Case: Delhi Court extends ED remand of Arvind Kejriwal till April 1

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಅಬಕಾರಿ ನೀತಿ ಜಾರಿ (Delhi Excise Policy Case) ವೇಳೆ ನಡೆದಿದೆ ಎನ್ನಲಾದ ನೂರಾರು ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರ ಇ.ಡಿ ಕಸ್ಟಡಿಯನ್ನು ಏಪ್ರಿಲ್‌ 1ರವರೆಗೆ ವಿಸ್ತರಿಸಿದೆ. ಕಸ್ಟಡಿಯ ಅವಧಿಯು ಗುರುವಾರ (ಮಾರ್ಚ್‌ 28) ಮುಗಿಯುವ ಹಿನ್ನೆಲೆಯಲ್ಲಿ ಇ.ಡಿ ಅಧಿಕಾರಿಗಳು (ED Officials) ಕೇಜ್ರಿವಾಲ್‌ ಅವರನ್ನು ಕೋರ್ಟ್‌ಗೆ ಹಾಜರುಪಡಿಸಿದರು. ಇನ್ನೂ ಒಂದು ವಾರ ಕಸ್ಟಡಿಗೆ ನೀಡಬೇಕು ಎಂದು ಮನವಿ ಮಾಡಿದರು. ಆದರೆ, ನ್ಯಾಯಾಲಯವು ನಾಲ್ಕು ದಿನಗಳವರೆಗೆ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಇ.ಡಿ ಕಸ್ಟಡಿಗೆ ನೀಡಿತು.

ಅರವಿಂದ್‌ ಕೇಜ್ರಿವಾಲ್‌ ಪರ ವಾದ ಮಂಡಿಸಿದ ವಕೀಲರು, “ಅರವಿಂದ್‌ ಕೇಜ್ರಿವಾಲ್‌ ಅವರ ಬಂಧನಕ್ಕೆ ಬಲವಾದ ಕಾರಣಗಳೇ ಇಲ್ಲ. ಇ.ಡಿ, ಸಿಬಿಐ ದಾಖಲೆಗಳಲ್ಲಿ ಕೇವಲ ನಾಲ್ಕು ಕಡೆ ಅರವಿಂದ್‌ ಕೇಜ್ರಿವಾಲ್‌ ಅವರ ಹೆಸರಿದೆ. ಇವರನ್ನು ಏಕೆ ಬಂಧಿಸಿದ್ದಾರೆ ಎಂಬುದೇ ಅಧಿಕಾರಿಗಳಿಗೆ ಗೊತ್ತಿಲ್ಲ” ಎಂಬುದಾಗಿ ಹೇಳಿದರು. ಇನ್ನು, 100 ಕೋಟಿ ರೂ. ಲಂಚದ ಪ್ರಕರಣದಲ್ಲಿ ಕೇಜ್ರಿವಾಲ್‌ ಅವರನ್ನು ಇನ್ನೂ ಒಂದು ವಾರ ವಿಚಾರಣೆ ನಡೆಸಬೇಕು ಎಂಬುದಾಗಿ ಇ.ಡಿ ಅಧಿಕಾರಿಗಳು ಮನವಿ ಮಾಡಿದರು. ಕೊನೆಗೆ ನ್ಯಾಯಾಲಯವು ನಾಲ್ಕು ದಿನ ಇ.ಡಿ ಕಸ್ಟಡಿಗೆ ನೀಡಿತು.

ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಮಾರ್ಚ್‌ 21ರಂದು ಅರವಿಂದ್‌ ಕೇಜ್ರಿವಾಲ್‌ ಅವರನ್ನು ಇ.ಡಿ ಅಧಿಕಾರಿಗಳು ಬಂಧಿಸಿದ್ದರು. ಇದಾದ ಬಳಿಕ ಮಾರ್ಚ್‌ 28ರವರೆಗೆ ನ್ಯಾಯಾಲಯವು ಅವರನ್ನು ಇ.ಡಿ ಕಸ್ಟಡಿಗೆ ನೀಡಿತ್ತು. ಇನ್ನು, ಅರವಿಂದ್‌ ಕೇಜ್ರಿವಾಲ್‌ ಅವರ ಬಂಧನ ಖಂಡಿಸಿ ಆಪ್‌ ಮುಖಂಡರು ಹಾಗೂ ಕಾರ್ಯಕರ್ತರ ಪ್ರತಿಭಟನೆ ಮುಂದುವರಿದಿದೆ.

ಸಿಎಂ ಸ್ಥಾನ ಅಬಾಧಿತ

ಅಬಕಾರಿ ನೀತಿ ಜಾರಿ ಹಗರಣಕ್ಕೆ ಸಂಬಂಧಿಸಿದಂತೆ ಜೈಲುಪಾಲಾಗಿರುವ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಬೇಕು ಎಂಬುದಾಗಿ ಸಲ್ಲಿಸಿದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ವಜಾಗೊಳಿಸಿದೆ. “ಇದೆಲ್ಲ ಶಾಸಕಾಂಗದ ಕೆಲಸ. ಯಾವುದೇ ಮುಖ್ಯಮಂತ್ರಿಯನ್ನು ಹುದ್ದೆಯಿಂದ ಕೆಳಗಿಳಿಸುವ ಅಧಿಕಾರ ನ್ಯಾಯಾಲಯಕ್ಕಿಲ್ಲ” ಎಂದು ಕೋರ್ಟ್‌ ಸ್ಪಷ್ಟಪಡಿಸಿತು.

ದೆಹಲಿ ಸರ್ಕಾರವು 2021ರ ನವೆಂಬರ್ 17ರಂದು ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ಭ್ರಷ್ಟಾಚಾರದ ಆರೋಪದ ನಡುವೆ 2022ರ ಸೆಪ್ಟೆಂಬರ್ ಕೊನೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ತನಿಖಾ ಸಂಸ್ಥೆಗಳ ಪ್ರಕಾರ ಹೊಸ ನೀತಿಯ ಅಡಿಯಲ್ಲಿ ಸಗಟು ವ್ಯಾಪಾರಿಗಳ ಲಾಭಾಂಶವನ್ನು ಶೇ.5ರಿಂದ 12ಕ್ಕೆ ಹೆಚ್ಚಿಸಲಾಗಿತ್ತು. ಅಬಕಾರಿ ನೀತಿ ಜಾರಿ ವೇಳೆ ನೂರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಇದರಲ್ಲಿ ಕೆ. ಕವಿತಾ ಅವರ ಪಾಲೂ ಇದೆ ಎಂಬ ಆರೋಪವಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಕೆ. ಕವಿತಾ ಅವರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Arvind Kejriwal: ಕೇಜ್ರಿವಾಲ್‌ ಬಂಧನ: ಮತ್ತೆ ಅಮೆರಿಕ ಕ್ಯಾತೆ; ಕಾಂಗ್ರೆಸ್‌ ಬ್ಯಾಂಕ್‌ ಅಕೌಂಟ್‌ ನಿರ್ಬಂಧ ಕುರಿತೂ ಕಿರಿಕ್

ದೆಹಲಿ ಜಲ ಮಂಡಳಿ ಗುತ್ತಿಗೆ ಮಂಜೂರು ಮಾಡುವಾಗ ಕೂಡ ಅಕ್ರಮ ನಡೆದಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಜಾರಿ ನಿರ್ದೇಶನಾಲಯವು ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಸಮನ್ಸ್‌ ಜಾರಿಗೊಳಿಸಿದೆ. ಮತ್ತೊಂದೆಡೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಇ.ಡಿ ಸಲ್ಲಿಸಿದ ಪ್ರಕರಣದಲ್ಲಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಈಗಾಗಲೇ ಜಾಮೀನು ಸಿಕ್ಕಿದೆ. ಇದರಿಂದ ಅವರು ತಾತ್ಕಾಲಿಕವಾಗಿ ರಿಲೀಫ್‌ ಪಡೆದಿದ್ದರು. ಆದರೆ, ಈಗ ಬಂಧನದಿಂದ ರಕ್ಷಣೆಗೆ ನೀಡದ ಕಾರಣ ಅವರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version