ನವದೆಹಲಿ: ರಾಜಧಾನಿಯಲ್ಲಿ ಅಬಕಾರಿ ನೀತಿ ಜಾರಿ (Delhi Excise Policy Case) ವೇಳೆ ನಡೆದಿದೆ ಎನ್ನಲಾದ ನೂರಾರು ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರಿಗೆ ಸುಪ್ರೀಂ ಕೋರ್ಟ್‌ನಿಂದಲೂ (Supreme Court) ರಿಲೀಫ್ ಸಿಕ್ಕಿಲ್ಲ. ಇ.ಡಿ ಅಧಿಕಾರಿಗಳು ಬಂಧಿಸಿರುವ ಕ್ರಮವನ್ನು ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಇ.ಡಿಗೆ ನೋಟಿಸ್ ನೀಡಿದೆ. ಏಪ್ರಿಲ್ 24ರೊಳಗೆ ಈ ಕುರಿತು ಇ.ಡಿ ಪ್ರತಿಕ್ರಿಯಿಸಬೇಕು ಎಂಬುದಾಗಿ ಸೂಚಿಸಿದ ನ್ಯಾಯಾಲಯವು ಏಪ್ರಿಲ್ 29ಕ್ಕೆ ವಿಚಾರಣೆ ಮುಂದೂಡಿದೆ.
ಇ.ಡಿ ಬಂಧನ ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿದ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. ದೆಹಲಿ ಕೋರ್ಟ್ ಆದೇಶ ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿಯು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ದೀಪಾಂಕರ್ ದತ್ತ ಅವರಿದ್ದ ಪೀಠವು, ಏಪ್ರಿಲ್ 29ಕ್ಕೆ ವಿಚಾರಣೆ ಮುಂದೂಡಿದೆ. ಹಾಗಾಗಿ, ಅರವಿಂದ್ ಕೇಜ್ರಿವಾಲ್ ಅವರು ಏಪ್ರಿಲ್ 29ರವರೆಗೆ ತಿಹಾರ ಜೈಲಿನಲ್ಲೇ ಕಾಲ ಕಳೆಯಬೇಕಿದೆ. ಇದಕ್ಕೂ ಮೊದಲು, ತುರ್ತು ವಿಚಾರಣೆಗೆ ಕೇಜ್ರಿವಾಲ್ ಅವರು ಮನವಿ ಮಾಡಿದ್ದರು. ಇದನ್ನು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು.
Supreme Court asks ED to file its response on or before April 24. Supreme Court posts the plea of Kejriwal on the week commencing from April 29.
— ANI (@ANI) April 15, 2024
Senior advocate Abhishek Manu Singhvi appearing for Kejriwal tells the Supreme Court that the arrest was made to disable him from… https://t.co/ngPlXoH0zb
ಏನಿದು ಪ್ರಕರಣ?
ದೆಹಲಿ ಸರ್ಕಾರವು 2021ರ ನವೆಂಬರ್ 17ರಂದು ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ಭ್ರಷ್ಟಾಚಾರದ ಆರೋಪದ ನಡುವೆ 2022ರ ಸೆಪ್ಟೆಂಬರ್ ಕೊನೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ತನಿಖಾ ಸಂಸ್ಥೆಗಳ ಪ್ರಕಾರ ಹೊಸ ನೀತಿಯ ಅಡಿಯಲ್ಲಿ ಸಗಟು ವ್ಯಾಪಾರಿಗಳ ಲಾಭಾಂಶವನ್ನು ಶೇ.5ರಿಂದ 12ಕ್ಕೆ ಹೆಚ್ಚಿಸಲಾಗಿತ್ತು. ಅಬಕಾರಿ ನೀತಿ ಜಾರಿ ವೇಳೆ ನೂರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಇದರಲ್ಲಿ ಕೆ. ಕವಿತಾ ಅವರ ಪಾಲೂ ಇದೆ ಎಂಬ ಆರೋಪವಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಅರವಿಂದ್ ಕೇಜ್ರಿವಾಲ್ ಮಾತ್ರವಲ್ಲ ಬಿಆರ್‌ಎಸ್ ನಾಯಕಿ ಕೆ. ಕವಿತಾ ಅವರನ್ನೂ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ದೆಹಲಿ ಜಲ ಮಂಡಳಿ ಗುತ್ತಿಗೆ ಮಂಜೂರು ಮಾಡುವಾಗ ಕೂಡ ಅಕ್ರಮ ನಡೆದಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಜಾರಿ ನಿರ್ದೇಶನಾಲಯವು ಅರವಿಂದ್ ಕೇಜ್ರಿವಾಲ್ ಅವರಿಗೆ ಸಮನ್ಸ್ ಜಾರಿಗೊಳಿಸಿದೆ. ಮತ್ತೊಂದೆಡೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಇ.ಡಿ ಸಲ್ಲಿಸಿದ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರಿಗೆ ಈಗಾಗಲೇ ಜಾಮೀನು ಸಿಕ್ಕಿದೆ. ಇದರಿಂದ ಅವರು ತಾತ್ಕಾಲಿಕವಾಗಿ ರಿಲೀಫ್ ಪಡೆದಿದ್ದರು. ಆದರೆ, ಈಗ ಬಂಧನದಿಂದ ರಕ್ಷಣೆಗೆ ನೀಡದ ಕಾರಣ ಅವರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇದನ್ನೂ ಓದಿ: K Kavitha: ಅಬಕಾರಿ ಹಗರಣ; ಬಿಆರ್‌ಎಸ್ ನಾಯಕಿ ಕೆ.ಕವಿತಾಗೆ 1 ವಾರ ತಿಹಾರ ಜೈಲೇ ಗತಿ!