ನವದೆಹಲಿ: ರಾಷ್ಟ್ರ ರಾಜಧಾನಿಯ ಪಶ್ಚಿಮದಲ್ಲಿರುವ ಮುಂಡ್ಕಾ ಎಂಬಲ್ಲಿ ಶುಕ್ರವಾರ ಸಂಜೆ ಭೀಕರ ಅಗ್ನಿದುರಂತ (Delhi Fire Tragedy) ನಡೆದಿದೆ. ನಾಲ್ಕು ಅಂತಸ್ತಿನ ವಾಣಿಜ್ಯ ಕಟ್ಟಡಕ್ಕೆ ಬೆಂಕಿ ಬಿದ್ದು 27 ಮಂದಿ ದುರ್ಮರಣಕ್ಕೀಡಾಗಿದ್ದಾರೆ. 12ಜನರು ಗಾಯಗೊಂಡಿದ್ದು ಅವರನ್ನೆಲ್ಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಟ್ಟಡಕ್ಕೆ ಬೆಂಕಿ ಬೀಳುತ್ತಿದ್ದಂತೆ ಹಲವರು ಪ್ರಾಣ ಉಳಿಸಿಕೊಳ್ಳಲು ಕಿಟಕಿಗಳ ಮೂಲಕ ಹಾರಿರುವ ವಿಡಿಯೋಗಳು ವೈರಲ್ ಆಗುತ್ತಿವೆ. ಅಗ್ನಿ ದುರಂತ ನಡೆದ ಕಟ್ಟಡ ಒಂದು ಫ್ಯಾಕ್ಟರಿಯಾಗಿದ್ದು, ಇದಕ್ಕೆ ಒಟ್ಟು ಮೂವರು ಮಾಲೀಕರು ಇದ್ದರು. ಮೂವರಲ್ಲಿ ಇಬ್ಬರನ್ನು ದೆಹಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇನ್ನೊಬ್ಬಾತ ನಾಪತ್ತೆಯಾಗಿದ್ದಾನೆ. ಈ ಕಾರ್ಖಾನೆ ಪರವಾನಗಿ ಹೊಂದಿಲ್ಲ ಮತ್ತು ಅಗ್ನಿಶಾಮಕ ದಳದಿಂದ ಎನ್‌ಒಸಿ (ನಿರಾಕ್ಷೇಪಣಾ ಪತ್ರ-NOC)ಯನ್ನೂ ಪಡೆದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ದೆಹಲಿ ಅಗ್ನಿ ದುರಂತ ದೇಶಾದ್ಯಂತ ತಲ್ಲಣ ಸೃಷ್ಟಿಸಿದೆ.
ಅಗ್ನಿ ದುರಂತ ಸಂಭವಿಸುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು, ಅಗ್ನಿ ಶಾಮಕ ದಳಗಳು, ರಕ್ಷಣಾ ಪಡೆಗಳು ಆಗಮಿಸಿವೆ. ಸುಮಾರು 19 ಮಂದಿ ನಾಪತ್ತೆಯಾಗಿದ್ದಾರೆ. ಅವರನ್ನು ಪತ್ತೆ ಹಚ್ಚಿ, ರಕ್ಷಣೆ ಮಾಡುವ ಕೆಲಸ ನಡೆಯುತ್ತಿದೆ. ಬೆಂಕಿಯಿಂದಾಗಿ ಕಟ್ಟಡದಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಕರಕಲಾಗಿ ಬಿದ್ದಿವೆ. ಅದರಡಿಯಿಂದ ಗುರುತು ಪತ್ತೆಯಾಗದಷ್ಟು ರೀತಿಯಲ್ಲಿ ದಹನಗೊಂಡ ಮೃತದೇಹಗಳು ಪತ್ತೆಯಾಗುತ್ತಿವೆ. ಮೃತರ ಗುರುತು ತಿಳಿಯಲು ಡಿಎನ್‌ಎ ಟೆಸ್ಟ್ ಮಾಡುವುದು ಅನಿವಾರ್ಯವಾಗಿದ್ದು, ಅದಕ್ಕಾಗಿ ವಿಧಿ ವಿಜ್ಞಾನ ತಂಡಗಳು ಪ್ರಕ್ರಿಯೆ ಶುರುವಿಟ್ಟುಕೊಂಡಿವೆ.
ಇದನನೂ ಓದಿ | ಪಂಜಾಬ್‌ನಲ್ಲಿ ದೆಹಲಿ ಮಾದರಿ: ರಾಜಧಾನಿಗೆ ಭೇಟಿ ನೀಡಿದ ಭಗವಂತ್ ಮನ್
ಈ ನಾಲ್ಕಂತಸ್ತಿನ ಕಟ್ಟಡದಲ್ಲಿ ಹಲವು ಕಚೇರಿಗಳು, ಫ್ಯಾಕ್ಟರಿಗಳು ಇವೆ. ಶುಕ್ರವಾರ ಕೂಡ ಎಂದಿನಿಂತೆ ಸಹಜವಾಗಿಯೇ ಇಲ್ಲಿ ಕೆಲಸ ನಡೆಯುತ್ತಿತ್ತು. ಕಟ್ಟಡದ ಮೊದಲ ಫ್ಲೋರ್‌ನಲ್ಲಿದ್ದ ಆಫೀಸ್‌ವೊಂದರಲ್ಲಿ ಸಂಜೆ 4.30 ರ ಹೊತ್ತಿಗೆ ಮೀಟಿಂಗ್ ನಡೆಯುತ್ತಿತ್ತು. ಅದೇ ವೇಳೆ ಅದೇ ಫ್ಲೋರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಹೊಗೆ ಏಳಲು ಪ್ರಾರಂಭವಾಗಿತ್ತು. ನೋಡನೋಡುತ್ತಿದ್ದಂತೆ ಬೆಂಕಿಯ ತೀವ್ರತೆ ಹೆಚ್ಚಾಗಿ, ಜನರ ಕೂಗಾಟ-ಕಿರುಚಾಟ ಶುರುವಾಗಿತ್ತು. ಎಷ್ಟೋ ಜನರು ಕಟ್ಟಡದಿಂದ ಹೊರಹೋಗಲು ಪ್ರಯತ್ನಿಸತೊಡಗಿದರು. ಕಿಟಿಕಿಗಳ ಗಾಜನ್ನು ಒಡೆದು ಜಿಗಿದರು. ಹಗ್ಗಗಳ ಮೂಲಕ ಕೆಳಗೆ ಇಳಿದರು. ಅಷ್ಟರಲ್ಲಾಗಲೇ ಸ್ಥಳಕ್ಕೆ ಆಗಮಿಸಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಕಾರ್ಯಪ್ರವೃತ್ತರಾಗಿ ಅಲ್ಲಿ ಸಿಲುಕಿದ್ದವರ ರಕ್ಷಣೆ ಮಾಡಿದರು. ಸ್ಥಳೀಯರೂ ಕೆಲವರು ತಾವೇ ಮುಂದಾಗಿ ರಕ್ಷಣಾ ಕಾರ್ಯಾಚರಣೆಗೆ ಕೈಜೋಡಿಸಿದರು. ಇನ್ನೊಂದೆಡೆ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಪ್ರಯತ್ನದಲ್ಲಿ ತೊಡಗಿದ್ದರು. ಎಷ್ಟೇ ತ್ವರಿತವಾಗಿ ಕೆಲಸ ಮಾಡಿದರೂ 27 ಮಂದಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.
2 ಲಕ್ಷ ರೂ.ಪರಿಹಾರ
ಅಗ್ನಿ ದುರಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ಮಾಹಿತಿ ನೀಡಿದೆ. ಹಾಗೇ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟ್ವೀಟ್ ಮಾಡಿ, ದೆಹಲಿ ಅಗ್ನಿ ದುರಂತ ಹಲವರ ಜೀವ ಕಸಿದಿದೆ. ಗಾಯಗೊಂಡವರು ಬಹುಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
ಇದನ್ನೂ ಓದಿ | LPG Price | ₹1,000 ಗಡಿ ದಾಟಿತು ಗ್ಯಾಸ್ ಸಿಲಿಂಡರ್ ಬೆಲೆ: ಮುಂಬೈ, ದೆಹಲಿಗಿಂತಲೂ ಬೆಂಗಳೂರೇ ದುಬಾರಿ