Site icon Vistara News

Fire Tragedy: ಸುರಕ್ಷತಾ ನಿಯಮ ನಿರ್ಲಕ್ಷ್ಯಕ್ಕೆ ತೆರಬೇಕಾಗುತ್ತದೆ ಬೆಂಕಿಯ ಬೆಲೆ

fire Tragedy

ಅಗ್ನಿ ದುರಂತ ನಡೆದ ದಿಲ್ಲಿಯ ಕಟ್ಟಡದಲ್ಲಿ ರಕ್ಷಣಾ ಕಾರ್ಯಾಚರಣೆ

ನವದೆಹಲಿ: ಮುಂಡ್ಕಾ ಅಗ್ನಿ ದುರಂತ (Delhi Fire Tragedy) ಇತ್ತೀಚಿನ ದಿನಗಳಲ್ಲೇ ಅತ್ಯಂತ ಭೀಕರವಾದ ಘಟನೆ. 27 ಜನರ ಪ್ರಾಣ ಹೋಗಿದೆ. ಮೃತರ ಸಂಖ್ಯೆ ಇನ್ನಷ್ಟು ಏರಿಕೆಯಾಗಲಿದೆ ಎಂದು ಸ್ಥಳೀಯ ಆಡಳಿತ ಹೇಳಿದೆ. ಇನ್ನೊಂದೆಡೆ ಘಟನೆಯಲ್ಲಿ ನಾಪತ್ತೆಯಾದವರಿಗಾಗಿ ಹುಡುಕಾಟ ಮುಂದುವರಿದಿದೆ. ಆದರೆ ಭಾರತದಲ್ಲಿ ಇಂಥ ಘಟನೆಗಳು ಹೊಸದಲ್ಲ. ಅಗ್ನಿ ಸುರಕ್ಷತಾ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದೆ, ಅಗ್ನಿ ಶಾಮಕ ದಳದಿಂದ ಎನ್‌ಒಸಿ ಪಡೆಯದೆ, ಅಗತ್ಯ ಪರವಾನಗಿಗಳನ್ನು ಹೊಂದದೆ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವರ ಸಂಖ್ಯೆ ನಮ್ಮ ದೇಶದಲ್ಲಿ ಹೆಚ್ಚಾಗಿದೆ.  ಈಗ ಕೂಡ ಬೆಂಕಿ ದುರಂತ ಸಂಭವಿಸಿದ್ದು ಅಂಥದ್ದೇ ಒಂದು ಕಟ್ಟಡದಲ್ಲಿ. ಪರಿಣಾಮ ಜೀವ ಬಲಿ, ನಷ್ಟ.. ಕುಟುಂಬದವರು-ಸಂಬಂಧಿಕರ ಗೋಳಾಟ.

ದೆಹಲಿಯ ಪಶ್ಚಿಮದಲ್ಲಿರುವ ಮುಂಡ್ಕಾದಲ್ಲಿದ್ದ ನಾಲ್ಕು ಅಂತಸ್ತಿನ ವಾಣಿಜ್ಯ ಕಟ್ಟಡಕ್ಕೆ ಬೆಂಕಿ ಬಿದ್ದ ಘಟನೆ ಬಗ್ಗೆ ದೆಹಲಿ ಫೈರ್‌ ಸರ್ವೀಸ್‌ (ಡಿಎಫ್‌ಎಸ್‌) ನಿರ್ದೇಶಕ ಅತುಲ್‌ ಗಾರ್ಗ್‌ ಪ್ರತಿಕ್ರಿಯೆ ನೀಡಿ, ಈ ಕಟ್ಟಡ ಅಗ್ನಿ ಶಾಮಕದಳದಿಂದ ನಿರಾಕ್ಷೇಪಣಾ ಪರವಾನಗಿ ಹೊಂದಿರಲಿಲ್ಲ. ಅಗ್ನಿ ಸುರಕ್ಷತಾ ಸಾಧನಗಳು ಯಾವವೂ ಅಲ್ಲಿ ಇರಲಿಲ್ಲ. ಮೊದಲ ಫ್ಲೋರ್‌ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡರೂ ಹೆಚ್ಚಿನ ಜನರು ಮೃತಪಟ್ಟಿದ್ದು ಎರಡನೇ ಫ್ಲೋರ್‌ನಲ್ಲಿ. ಕಟ್ಟಡದ ಎರಡನೇ ಮಹಡಿಯಲ್ಲಿ ಇದ್ದಿದ್ದು ಭದ್ರತಾ ಕ್ಯಾಮರಾ (ಸಿಸಿಟಿವಿ ಕ್ಯಾಮರಾ)ಗಳನ್ನು ಮಾರಾಟ ಮಾಡುವ ಕಂಪನಿ. ಅದನ್ನು ಪ್ಯಾಕ್‌ ಮಾಡುವುದಕ್ಕೋಸ್ಕರ ಪ್ಲಾಸ್ಟಿಕ್‌ ವಸ್ತುಗಳನ್ನು ಸಂಗ್ರಹಿಸಿ ಇಡಲಾಗಿತ್ತು. ಹೀಗಾಗಿ ಇಲ್ಲಿ ಬೆಂಕಿಯ ತೀವ್ರತೆ ಅತ್ಯಂತ ಹೆಚ್ಚಾಗಿತ್ತು. ಪ್ಲಾಸ್ಟಿಕ್‌ಗಳೆಲ್ಲ ಹೊತ್ತಿ ಉರಿದವು. ಸದ್ಯ ಕಂಪನಿಯ ಇಬ್ಬರು ಮಾಲೀಕರನ್ನು ಅರೆಸ್ಟ್‌ ಮಾಡಿದ್ದೇವೆ ಎಂದು ತಿಳಿಸಿದ್ದಾರೆ

ಇದನ್ನೂ ಓದಿ | ದೆಹಲಿ ಅಗ್ನಿ ದುರಂತ: 4 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ; 27 ಸಾವು, 19 ಜನ ನಾಪತ್ತೆ

ಅಗ್ನಿ ಸುರಕ್ಷತಾ ನಿಯಮಗಳ ಬಗ್ಗೆ ಅಸಡ್ಡೆ

ಸಾಮಾನ್ಯವಾಗಿ ಬಹುಮಹಡಿ ಕಟ್ಟಡಗಳಲ್ಲಿ  ಅಗ್ನಿ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಾಗುತ್ತದೆ. ಆದರೆ ಹಲವು ಆಸ್ಪತ್ರೆಗಳೂ ಸೇರಿ, ಬಹುತೇಕ ಕಟ್ಟಡಗಳಲ್ಲಿ ಆ ನಿಯಮಗಳನ್ನು ಅನುಷ್ಠಾನಕ್ಕೆ ತರಲು ಅಸಡ್ಡೆ ತೋರುತ್ತಾರೆ. ಮಹಾನಗರಗಳಲ್ಲೇ ಈ ನಿರ್ಲಕ್ಷ್ಯ ಜಾಸ್ತಿ ಎಂಬ ಬಗ್ಗೆ ಕೆಲ ಮಾಧ್ಯಮಗಳು ಸಮೀಕ್ಷಾ ವರದಿ ಪ್ರಕಟಿಸಿವೆ. ಹಾಗಿದ್ದಾಗ್ಯೂ ದೆಹಲಿ, ಚೆನ್ನೈ, ಮುಂಬೈಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಬೆಂಕಿ ಅವಘಡಗಳು ಕಡಿಮೆ ಎನ್ನಬಹುದು. ಈ ಬಗ್ಗೆ ಹಿಂದೊಮ್ಮೆ ಎಕನಾಮಿಕ್‌ & ಪೊಲಿಟಿಕಲ್‌ ವೀಕ್ಲಿ ಎಂಬ ಜರ್ನಲ್‌, 2017ರಲ್ಲಿ ಮುಂಬೈನ ಕಮಲಾ ಮಿಲ್‌ನಲ್ಲಿ ನಡೆದ ಅಗ್ನಿ ದುರಂತದ ಉದಾಹರಣೆ ಕೊಟ್ಟು ವಿವರಿಸಿತ್ತು. ಈ ಮಿಲ್‌ ಮುಂಬೈನ ಲೋವರ್‌ ಪರೇಲ್‌ನಲ್ಲಿದ್ದು, ಮಧ್ಯ ರಾತ್ರಿ 12 ಗಂಟೆಯಲ್ಲಿ ಬೆಂಕಿ ಹೊತ್ತಿ, 14 ಮಂದಿ ಮೃತಪಟ್ಟಿದ್ದರು. ಸ್ವಲ್ಪ ದುರ್ಗಮ ಪ್ರದೇಶದಲ್ಲಿ ಇದ್ದ ಜಾಗವಾಗಿದ್ದರಿಂದ ಅಗ್ನಿಶಾಮಕ ದಳ ತಮ್ಮ ಉಪಕರಣಗಳೊಂದಿಗೆ ಜಾಗ ತಲುಪಲು ಕಷ್ಟಪಡುವಂತಾಗಿತ್ತು. ಬರೀ ಇದು ಎಂದಲ್ಲ, ಹೀಗೆ ಹಲವು ಕಟ್ಟಡ, ಕಾರ್ಖಾನೆಗಳನ್ನು ಕಾನೂನು ಬಾಹಿರವಾಗಿ, ಜನಸಂಚಾರ ಕಷ್ಟವಾದ ಪ್ರದೇಶಗಳಲ್ಲಿ ನಿರ್ಮಾಣ ಮಾಡಿಕೊಳ್ಳುತ್ತಾರೆ. ಇಲ್ಲಿ ಅಗ್ನಿ ಸುರಕ್ಷತಾ ನಿಯಮಗಳನ್ನು ಪಾಲಿಸುವುದಿಲ್ಲ. ಪರವಾನಗಿಯೂ ಇರುವುದಿಲ್ಲ. ಇಂಥ ಸ್ಥಳದಲ್ಲಿ ಅಗ್ನಿ ಅವಘಡವಾದಾಗ ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಅಲ್ಲಿಗೆ ತಲುಪುವುದೂ ಕಷ್ಟ ಎಂದು ಜರ್ನಲ್‌ ವರದಿ ಪ್ರಕಟಿಸಿತ್ತು.

ಏನೆಲ್ಲ ಸುರಕ್ಷತಾ ನಿಯಮಗಳಿರಬೇಕು?

ಬಹುಮಹಡಿ ಕಟ್ಟಡಗಳಿರಲಿ, ಸಾಮಾನ್ಯವಾದ ದೊಡ್ಡ ಕಾರ್ಖಾನೆಯೇ ಇರಲಿ. ಅಲ್ಲಿ ಕಡ್ಡಾಯವಾಗಿ ಅಗ್ನಿ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಮೊಟ್ಟ ಮೊದಲನೇದಾಗಿ ಆ ಕಟ್ಟಡದಿಂದ ಪಾರಾಗುವ ಸ್ಥಳ ಸಮರ್ಪಕವಾಗಿರಬೇಕು. ಅದಕ್ಕಾಗಿ ಒಂದು ಮಾರ್ಗವನ್ನು ಇಟ್ಟಿರಬೇಕು. ಅದರ ಗಾತ್ರ, ವಿನ್ಯಾಸ, ನಿರ್ವಹಣೆ ಮತ್ತು ಕಾರ್ಯಾಚರಣೆ ಕುರಿತು ದಿ ನ್ಯಾಶನಲ್‌ ಬಿಲ್ಡಿಂಗ್‌ ಕೋಡ್‌ (NBC) 2005 ರಲ್ಲಿ ವಿವರಿಸಲಾಗಿದ್ದು, ಅದರಂತೆಯೇ ರಚಿಸಿರಬೇಕು. ತುರ್ತು ಪರಿಸ್ಥಿತಿ ಎದುರಾದಾಗ ಉದ್ಯೋಗಿಗಳು/ಕಾರ್ಮಿಕರು ಗಾಬರಿಯಾಗುವುದು ಸಹಜ. ಆ ಹೊತ್ತಲ್ಲಿ ಎಲ್ಲರೂ ಒಟ್ಟಿಗೇ ಹೊರ ಓಡಲು ಪ್ರಯತ್ನಿಸುತ್ತಾರೆ. ಹೀಗಾಗಿ ಕಟ್ಟಡದಲ್ಲಿರುವ ಎಲ್ಲ ಮೆಟ್ಟಿಲುಗಳು, ಲಿಫ್ಟ್‌ ಮತ್ತಿತರ ಮಾರ್ಗಗಳು ಸರಿಯಾಗಿರಬೇಕು. ಹಾಗಾಗಿ ಅವುಗಳ ನಿರ್ವಹಣೆಯೂ ತುಂಬ ಚೆನ್ನಾಗಿರಬೇಕು.  

ಮತ್ತೊಂದು ಪ್ರಮುಖ ಅಂಶವೆಂದರೆ, ಕಟ್ಟಡದಲ್ಲಿರುವ ವಸ್ತುಗಳ ಬಗ್ಗೆ ತುಂಬ ಎಚ್ಚರಿಕೆಯಿರಬೇಕು. ಸಾಮಾನ್ಯವಾಗಿ ಮರದ ವಸ್ತುಗಳು, ಪೇಪರ್‌, ಫ್ಯಾಬ್ರಿಕ್‌ ವಸ್ತುಗಳಿರುವ ಕಟ್ಟಡಗಳಲ್ಲಿ ಬಹುಬೇಗನೇ ಬೆಂಕಿ ಆವರಿಸುತ್ತದೆ. ಹಾಗಾಗಿ ಇಂಥ ಕಂಪನಿಗಳು ತುಂಬ ಮುಂಜಾಗ್ರತೆ ವಹಿಸಬೇಕು. ಅಗ್ನಿ ಸುರಕ್ಷತಾ ನಿಯಮಗಳ ಕಡ್ಡಾಯ ಪಾಲನೆ ಮಾಡಬೇಕು. ತುಂಬ ಹಳೆಯ, ದಹನಗೊಳ್ಳುವ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳಬಾರದು. ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಉಂಟಾಗುವ ಸಾಧ್ಯತೆಗಳೂ ದಟ್ಟವಾಗಿರುತ್ತವೆ. ಹೀಗಾಗಿ ಆಗಾಗ ತಜ್ಞ ಎಲೆಕ್ಟ್ರಿಶಿಯನ್‌ಗಳಿಂದ ಇಡೀ ಕಟ್ಟಡದ ವಿದ್ಯುತ್‌ ವ್ಯವಸ್ಥೆಯನ್ನು ಮೌಲ್ಯಮಾಪನ ಮಾಡಿಸುತ್ತಿರಬೇಕು ಎಂದು ದಿ ಎಕನಾಮಿಕ್‌ & ಪೊಲಿಟಿಕಲ್‌ ವೀಕ್ಲಿ ವಿವರಿಸಿದೆ.

ಇದನ್ನೂ ಓದಿ | ಮಣಿಪಾಲದ ಫರ್ನೀಚರ್‌ ಅಂಗಡಿಯಲ್ಲಿ ಅಗ್ನಿ ಅವಘಡ!

Exit mobile version