Site icon Vistara News

Delhi Floods: ದೆಹಲಿಯಲ್ಲಿ ಕೋಚಿಂಗ್‌ ಸೆಂಟರ್‌ಗೆ ನುಗ್ಗಿದ ನೀರು; ಮೃತರ ಸಂಖ್ಯೆ 3ಕ್ಕೆ ಏರಿಕೆ: ವಿದ್ಯಾರ್ಥಿಗಳಿಂದ ಪ್ರತಿಭಟನೆ

Delhi Floods

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಹಲವೆಡೆ ಪ್ರವಾಹದ ಸ್ಥಿತಿ (Delhi Floods) ಉಂಟಾಗಿದೆ. ರಾಜೇಂದ್ರ ನಗರದಲ್ಲಿರುವ ರಾವ್‌ ಐಎಎಸ್‌ ಕೋಚಿಂಗ್‌ ಸೆಂಟರ್‌ಗೆ (Rau’s IAS Coaching Institute) ನೀರು ನುಗ್ಗಿ ಅನಾಹುತ ಸಂಭವಿಸಿದ್ದು, ಮೃತರ ಸಂಖ್ಯೆ 3ಕ್ಕೆ ಏರಿದೆ.

ಶನಿವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ರಾಜೇಂದ್ರ ನಗರದಲ್ಲಿ ಭಾರಿ ಪ್ರವಾಹದ ಸ್ಥಿತಿ ಉಂಟಾಗಿದೆ. ಇದರಿಂದಾಗಿ ಇಲ್ಲಿನ ರಾವ್‌ ಐಎಎಸ್‌ ಸ್ಟಡಿ ಸರ್ಕಲ್‌ನ ನೆಲಮಹಡಿಗೆ ನೀರು ನುಗ್ಗಿದೆ. ಸಂಜೆ 7.19ಕ್ಕೆ ಏಕಾಏಕಿ ನೀರು ನುಗ್ಗಿದ ಕಾರಣ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಮೃತರನ್ನು ಐಎಎಎಸ್‌ ಆಕಾಂಕ್ಷಿಗಳಾದ ತೆಲಂಗಾಣ, ಉತ್ತರ ಪ್ರದೇಶ ಮತ್ತು ಕೇರಳ ಮೂಲದ ತಾನಿಯಾ ಸೋನಿ (25), ಶ್ರೇಯಾ ಯಾದವ್ (25) ಮತ್ತು ನವೀನ್ ಡೆಲ್ವಿನ್ (28) ಎಂದು ಗುರುತಿಸಲಾಗಿದೆ.

ಬೇಸ್‌ಮೆಂಟ್‌ನಲ್ಲಿ ಸಂಸ್ಥೆಯ ಲೈಬ್ರರಿ ಇದ್ದು, ಇಲ್ಲಿ ಸುಮಾರು 150-180 ವಿದ್ಯಾರ್ಥಿಗಳು ಕೂರಲು ವ್ಯವಸ್ಥೆ ಮಾಡಲಾಗಿದೆ. ಲೈಬ್ರರಿಯಲ್ಲಿ ಕುಳಿತು ಓದುತ್ತಿರುವಾಗ ಚರಂಡಿ ಮೋರಿಯ ತಡೆಗೋಡೆ ಒಡೆದು ಮಳೆ ನೀರು ನುಗ್ಗಿದ ಹಿನ್ನಲೆ ದುರ್ಘಟನೆ ಸಮಭವಿಸಿದೆ. “ಶನಿವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಕೋಚಿಂಗ್‌ ಸೆಂಟರ್‌ನ ಬೇಸ್‌ಮೆಂಟ್‌ಗೆ ನೀರು ನುಗ್ಗಿದೆ. ನೆಲಮಹಡಿಯಲ್ಲಿದ್ದ ಮೂವರು ವಿದ್ಯಾರ್ಥಿಗಳು ಹೊರಬರಲು ಆಗದೆ, ಮೇಲಿನ ಮಹಡಿಗೂ ಹೋಗಲು ಆಗದೆ ನೀರಿನಲ್ಲೇ ಸಿಲುಕಿರುವ ಸಾಧ್ಯತೆ ಇದೆ. ಇದರಿಂದಾಗಿ ಮೂವರು ವಿದ್ಯಾರ್ಥಿಗಳ ಸಾವುಂಟಾಗಿದೆ. ಕೂಡಲೇ ಎನ್‌ಡಿಆರ್‌ಎಫ್‌ ಸಿಬ್ಬಂದಿಯು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ” ಎಂದು ಸೆಂಟ್ರಲ್‌ ದೆಹಲಿ ಡಿಸಿಪಿ ಎಂ. ಹರ್ಷವರ್ಧನ್‌ ತಿಳಿಸಿದ್ದಾರೆ.

ಪ್ರತಿಭಟನೆ

ಇದೀಗ ಈ ಘಟನೆ ರಾಜಕೀಯ ತಿರುವು ಪಡೆದುಕೊಂಡಿದೆ. ಮುನ್ಸಿಪಾಲ್‌ ಕಾರ್ಪೋರೇಷನ್‌ ಆಫ್‌ ದಿಲ್ಲಿ (MCD)ಯನ್ನು ನಿಯಂತ್ರಿಸುವ ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರದ ಮೇಲೆ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. “ಇದು ಸರ್ಕಾರ ಮತ್ತು ಪುರಸಭೆಯ ವೈಫಲ್ಯ. ಇದು ಈ ದೇಶದ ಅತ್ಯಂತ ಸಂವೇದನಾರಹಿತ ಸರ್ಕಾರ. ಇದು ವಿದ್ಯಾರ್ಥಿಗಳ ಸಾವಲ್ಲ, ಕೊಲೆ” ಎಂದು ಬಿಜೆಪಿ ವಕ್ತಾರ ಮಂಜಿಂದರ್ ಸಿಂಗ್ ಸಿರ್ಸಾ ತಿಳಿಸಿದ್ದಾರೆ. ಇನ್ನು ಈ ಆರೋಪಕ್ಕೆ ತಿರುಗೇಟು ನೀಡಿದ ಆಪ್‌, ʼʼಇದಕ್ಕೆ ಬಿಜೆಪಿ ಕೂಡ ಉತ್ತರಿಸಬೇಕು. ಕಳೆದ 15 ವರ್ಷಗಳಿಂದ ಈ ಪ್ರದೇಶದಲ್ಲಿ ಬಿಜೆಪಿ ಕೌನ್ಸಿಲರ್‌ಗಳಿದ್ದರು. ಅವರೇಕೆ ಚರಂಡಿಯನ್ನು ದುರಸ್ತಿ ಮಾಡಲಿಲ್ಲ? ಎಲ್ಲ ಚರಂಡಿಗಳನ್ನು ಒಂದು ವರ್ಷದಲ್ಲಿ ಮಾಡಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ರಾಜಕೀಯ ಮಾಡಬಾರದು” ಎಂದು ಹೇಳಿದೆ.

ಇನ್ನು ಹಲವು ವಿದ್ಯಾರ್ಥಿಗಳು ಶನಿವಾರ ರಾತ್ರಿಯಿಂದಲೇ ಸಂಸ್ಥೆಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ಸಂಸ್ಥೆಯ ಹೊರಗಿನ ರಸ್ತೆಯಲ್ಲಿ ಕುಳಿತ ವಿದ್ಯಾರ್ಥಿಗಳು ‘ನಮಗೆ ನ್ಯಾಯ ಬೇಕು’ ಎಂಬ ಘೋಷಣೆಗಳನ್ನು ಕೂಗುತ್ತಿದ್ದಾರೆ. “ಎಂಸಿಡಿ ಇದು ವಿಪತ್ತು ಎಂದು ಹೇಳುತ್ತದೆ. ಆದರೆ ಇದು ಸಂಪೂರ್ಣ ನಿರ್ಲಕ್ಷ್ಯದಿಂದ ಸಂಭವಿಸಿದ ದುರಂತ. ಅರ್ಧ ಗಂಟೆ ಮಳೆ ಬಂದರೆ ಸಾಕು ಮೊಣಕಾಲುವರೆಗೆ ನೀರು ನಿಲ್ಲುತ್ತದೆ. ಅಸಮರ್ಪಕ ಒಳಚರಂಡಿಯಿಂದಾಗಿ ಇದು ಸಂಭವಿಸುತ್ತಿದೆ. ಚರಂಡಿಯನ್ನು ಸ್ವಚ್ಛಗೊಳಿಸಬೇಕು 10-12 ದಿನಗಳಿಂದ ಕೌನ್ಸಿಲರ್‌ಗೆ ಮನವಿ ಸಲ್ಲಿಸುತ್ತಿದ್ದೇನೆ ಎಂದು ಮಾಲೀಕರು ತಿಳಿಸಿದ್ದಾರೆ” ಎಂದು ಪ್ರತಿಭಟನಾನಿರತ ವಿದ್ಯಾರ್ಥಿಯೊಬ್ಬರು ಸುದ್ದಿ ಸಂಸ್ಥೆ ಎಎನ್ಐಗೆ ಹೇಳಿದ್ದಾರೆ.

ಇದನ್ನೂ ಓದಿ: Delhi Floods: ದೆಹಲಿಯಲ್ಲಿ ಭಾರಿ ಮಳೆ; ಕೋಚಿಂಗ್‌ ಸೆಂಟರ್‌ಗೆ ನೀರು ನುಗ್ಗಿ ಇಬ್ಬರು ವಿದ್ಯಾರ್ಥಿನಿಯರ ಸಾವು!

“ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬುದು ನಮ್ಮ ಮೊದಲ ಬೇಡಿಕೆ. ಘಟನೆಯಿಂದಾದ ಸಾವುಗಳು ಮತ್ತು ಗಾಯಾಳುಗಳ ನಿಜವಾದ ಸಂಖ್ಯೆಯನ್ನು ಬಹಿರಂಗಪಡಿಸಬೇಕು” ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಪ್ರತಿಭಟನೆ ಹಿನ್ನಲೆಯಲ್ಲಿ ಸದ್ಯ ಘಟನಾ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

Exit mobile version