ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಅಬಕಾರಿ ನೀತಿ ಜಾರಿ (Delhi Excise Policy Case) ವೇಳೆ ನೂರಾರು ಕೋಟಿ ರೂಪಾಯಿ ಹಗರಣ ನಡೆದಿರುವ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರಿಗೆ ಬುಧವಾರವೂ (ಮಾರ್ಚ್ 27) ರಿಲೀಫ್ ಸಿಕ್ಕಿಲ್ಲ. ಇ.ಡಿ ಅಧಿಕಾರಿಗಳು (E.D Officials) ತಮ್ಮನ್ನು ಬಂಧಿಸಿ, ಕಸ್ಟಡಿಗೆ ತೆಗೆದುಕೊಂಡಿರುವುದನ್ನು ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ (Delhi High Court), ಇ.ಡಿ ಅಧಿಕಾರಿಗಳಿಗೆ ಏಪ್ರಿಲ್ 2ರೊಳಗೆ ಪ್ರತಿಕ್ರಿಯಿಸಬೇಕು ಎಂಬುದಾಗಿ ನೋಟಿಸ್ ನೀಡಿದೆ. ಹಾಗಾಗಿ, ಇನ್ನೂ ಒಂದು ವಾರ ಅರವಿಂದ್ ಕೇಜ್ರಿವಾಲ್ ಅವರು ಜೈಲಿನಲ್ಲೇ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇ.ಡಿ ಕಸ್ಟಡಿಯಿಂದ ಮುಕ್ತಿಗೊಳಿಸಲು ನಿರಾಕರಿಸಿದ ನ್ಯಾಯಾಲಯವು ಪ್ರಕರಣವನ್ನು ಏಪ್ರಿಲ್ 3ಕ್ಕೆ ಮುಂದೂಡಿದೆ. ಏಪ್ರಿಲ್ 2ರೊಳಗೆ ಅರವಿಂದ್ ಕೇಜ್ರಿವಾಲ್ ಅರ್ಜಿಗೆ ಪ್ರತಿಕ್ರಿಯಿಸಬೇಕು ಎಂದು ಇ.ಡಿ ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ. ಇನ್ನು, ಅರವಿಂದ್ ಕೇಜ್ರಿವಾಲ್ ಅವರ ಇ.ಡಿ ಕಸ್ಟಡಿಯ ಅವಧಿಯು ಮಾರ್ಚ್ 28ರಂದು ಮುಗಿಯಲಿದ್ದು, ಇನ್ನಷ್ಟು ದಿನಗಳ ಅವಧಿಗೆ ಕಸ್ಟಡಿಗೆ ನೀಡಬೇಕು ಎಂದು ಇ.ಡಿ ಅಧಿಕಾರಿಗಳು ರೋಸ್ ಅವೆನ್ಯೂ ಕೋರ್ಟ್‌ಗೆ ಮನವಿ ಮಾಡಲಿದ್ದಾರೆ. ಹಾಗೊಂದು ವೇಳೆ, ಇ.ಡಿ ಕಸ್ಟಡಿ ಅವಧಿ ವಿಸ್ತರಿಸಿದರೆ, ಅರವಿಂದ್ ಕೇಜ್ರಿವಾಲ್ ಅವರು ಇನ್ನಷ್ಟು ದಿನ ಜೈಲಲ್ಲೇ ಕಾಲ ಕಳೆಯಬೇಕಾಗುತ್ತದೆ.
Delhi High Court issues notice to Enforcement Directorate on plea moved by CM Arvind Kejriwal raising issues of legality and validity regarding the arrest and remand.
— ANI (@ANI) March 27, 2024
Delhi HC seeks ED's response on the main petition as well as the application for interim release of the… pic.twitter.com/5eRoyAVwk4
ಇದನ್ನೂ ಓದಿ: ಖಲಿಸ್ತಾನಿ ಉಗ್ರರಿಂದ ಕೇಜ್ರಿವಾಲ್‌ಗೆ 133 ಕೋಟಿ ರೂ. ಸಂದಾಯ; ಪನ್ನುನ್ ಸ್ಫೋಟಕ ಮಾಹಿತಿ
ದೆಹಲಿ ಸರ್ಕಾರವು 2021ರ ನವೆಂಬರ್ 17ರಂದು ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ಭ್ರಷ್ಟಾಚಾರದ ಆರೋಪದ ನಡುವೆ 2022ರ ಸೆಪ್ಟೆಂಬರ್ ಕೊನೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ತನಿಖಾ ಸಂಸ್ಥೆಗಳ ಪ್ರಕಾರ ಹೊಸ ನೀತಿಯ ಅಡಿಯಲ್ಲಿ ಸಗಟು ವ್ಯಾಪಾರಿಗಳ ಲಾಭಾಂಶವನ್ನು ಶೇ.5ರಿಂದ 12ಕ್ಕೆ ಹೆಚ್ಚಿಸಲಾಗಿತ್ತು. ಅಬಕಾರಿ ನೀತಿ ಜಾರಿ ವೇಳೆ ನೂರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಇದರಲ್ಲಿ ಕೆ. ಕವಿತಾ ಅವರ ಪಾಲೂ ಇದೆ ಎಂಬ ಆರೋಪವಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಕೆ. ಕವಿತಾ ಅವರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ದೆಹಲಿ ಜಲ ಮಂಡಳಿ ಗುತ್ತಿಗೆ ಮಂಜೂರು ಮಾಡುವಾಗ ಕೂಡ ಅಕ್ರಮ ನಡೆದಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಜಾರಿ ನಿರ್ದೇಶನಾಲಯವು ಅರವಿಂದ್ ಕೇಜ್ರಿವಾಲ್ ಅವರಿಗೆ ಸಮನ್ಸ್ ಜಾರಿಗೊಳಿಸಿದೆ. ಮತ್ತೊಂದೆಡೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಇ.ಡಿ ಸಲ್ಲಿಸಿದ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರಿಗೆ ಈಗಾಗಲೇ ಜಾಮೀನು ಸಿಕ್ಕಿದೆ. ಇದರಿಂದ ಅವರು ತಾತ್ಕಾಲಿಕವಾಗಿ ರಿಲೀಫ್ ಪಡೆದಿದ್ದರು. ಆದರೆ, ಈಗ ಬಂಧನದಿಂದ ರಕ್ಷಣೆಗೆ ನೀಡದ ಕಾರಣ ಅವರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ