Site icon Vistara News

Congress: ಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್‌ಗೆ ಶಾಕ್;‌ ಐಟಿ ತನಿಖೆಗೆ ತಡೆ ನೀಡಲು ಕೋರ್ಟ್‌ ನಕಾರ

Mallikarjun Kharge

Rahul Gandhi My Choice For PM, Priyanka Should Have Contested: Mallikarjun Kharge

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಚಾರ ಸೇರಿ ಹಲವು ಕಾರ್ಯ ಚಟುವಟಿಕೆಗಳಿಗಾಗಿ ರೈಲು ಟಿಕೆಟ್‌ ಬುಕ್‌ ಮಾಡಲು ಕೂಡ ದುಡ್ಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಬೆನ್ನಲ್ಲೇ ಕಾಂಗ್ರೆಸ್‌ಗೆ (Congress) ಮತ್ತೊಂದು ಹಿನ್ನಡೆಯುಂಟಾಗಿದೆ. ತೆರಿಗೆ ಪಾವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್‌ ವಿರುದ್ಧ ಆರಂಭಿಸಿರುವ ತೆರಿಗೆ ಮರು ಮೌಲ್ಯಮಾಪನ ಪ್ರಕ್ರಿಯೆಗೆ (Tax Re-Assessment Proceeding) ತಡೆ ನೀಡುವಂತೆ ಕೋರಿದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ (Delhi High Court) ನಿರಾಕರಿಸಿದೆ.

ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ. ಬಿಜೆಪಿ ಸೇರಿ ಎಲ್ಲ‌ ಪಕ್ಷಗಳು, ಅಭ್ಯರ್ಥಿಗಳು ಅಬ್ಬರ ಪ್ರಚಾರ ಕೈಗೊಳ್ಳುತ್ತಿವೆ. ಆದರೆ, ತೆರಿಗೆ ಪಾವತಿ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್‌ ಬ್ಯಾಂಕ್‌ ಖಾತೆಗಳನ್ನು ತಡೆಹಿಡಿದಿದೆ. ಇದರಿಂದಾಗಿ ಕಾಂಗ್ರೆಸ್‌ ಸಂಕಷ್ಟಕ್ಕೆ ಸಿಲುಕಿದೆ. ಇದರ ಬೆನ್ನಲ್ಲೇ, ಆದಾಯ ತೆರಿಗೆ ಇಲಾಖೆಯ ಪರಿಶೀಲನೆಗೆ ತಡೆಯಾಜ್ಞೆ ನೀಡಲು ದೆಹಲಿ ಹೈಕೋರ್ಟ್‌ ಕೂಡ ನಿರಾಕರಿಸಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಪ್ರಚಾರಕ್ಕೆ ಇನ್ನಷ್ಟು ತೊಂದರೆಯಾಗಲಿದೆ ಎಂದು ತಿಳಿದುಬಂದಿದೆ.

ಐಟಿ ಇಲಾಖೆಯ ಕ್ರಮವನ್ನು ಕಾಂಗ್ರೆಸ್‌ ಖಂಡಿಸಿದೆ. “ಚುನಾವಣೆ ಹೊತ್ತಿನಲ್ಲಿ ಕಾಂಗ್ರೆಸ್ ಬ್ಯಾಂಕ್‌ ಖಾತೆಗಳನ್ನು ತಡೆಹಿಡಿಯಲಾಗಿದೆ. ಇದು ಗಂಭೀರವಾದ ಪ್ರಕರಣವಾಗಿದೆ. ಇದು ಕಾಂಗ್ರೆಸ್‌ಅನ್ನು ಮಾತ್ರ ಹತ್ತಿಕ್ಕುವ ಪ್ರಯತ್ನವಲ್ಲ, ಇಡೀ ಪ್ರಜಾಪ್ರಭುತ್ವವನ್ನೇ ಹತ್ತಿಕ್ಕುವ ಪ್ರಯತ್ನ. ವಿತ್ತೀಯವಾಗಿ ಕಾಂಗ್ರೆಸ್‌ಅನ್ನು ಮುಗಿಸಲು ನರೇಂದ್ರ ಮೋದಿ ಅವರು ವ್ಯವಸ್ಥಿತವಾಗಿ ಪ್ರಯತ್ನಿಸುತ್ತಿದ್ದಾರೆ. ಜನರಿಂದ ಸಂಗ್ರಹಿಸಿದ ಕಾಂಗ್ರೆಸ್‌ನ ಹಣವನ್ನು ತಡೆಹಿಡಿಯಲಾಗಿದೆ. ನಮ್ಮ ಪಕ್ಷದ ಬ್ಯಾಂಕ್‌ ಖಾತೆಯಿಂದ ಹಣ ವಿತ್‌ಡ್ರಾ ಮಾಡಲಾಗಿದೆ” ಎಂದು ಇದಕ್ಕೂ ಮೊದಲು ಸೋನಿಯಾ ಗಾಂಧಿ ಆರೋಪಿಸಿದ್ದರು.

ಇದನ್ನೂ ಓದಿ: ಚುನಾವಣೆಯಲ್ಲಿ ಸ್ಪರ್ಧಿಸಲು ನನ್ನ ಬಳಿ ದುಡ್ಡಿಲ್ಲ; ನಿರ್ಮಲಾ ಸೀತಾರಾಮನ್ ಬಿಚ್ಚಿಟ್ಟ ರಹಸ್ಯ ಇದು!

ಆದಾಯ ತೆರಿಗೆ ಪಾವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್‌ನ ಹಲವು ಖಾತೆಗಳಿಗೆ ತಡೆಹಿಡಿದಿದೆ. ಅಷ್ಟೇ ಅಲ್ಲ, ಕಾಂಗ್ರೆಸ್‌ ಪಕ್ಷದ ಹಲವು ಖಾತೆಗಳಿಂದ ಆದಾಯ ತೆರಿಗೆ ಇಲಾಖೆಯು 65 ಕೋಟಿ ರೂಪಾಯಿ ವಿತ್‌ಡ್ರಾ ಮಾಡಿದೆ. ನವದೆಹಲಿಯ ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ ಐಟಿ ಇಲಾಖೆಯು ಹಣ ವಿತ್‌ಡ್ರಾ ಮಾಡಿದೆ. ಕಾಂಗ್ರೆಸ್‌ನ ಮೂರು ಬ್ಯಾಂಕ್ ಖಾತೆಗಳಿಂದ 60.25 ಕೋಟಿಯನ್ನು ಡಿಮ್ಯಾಂಡ್ ಡ್ರಾಫ್ಟ್‌ಗಳ ರೂಪದಲ್ಲಿ ತೆಗೆದುಕೊಳ್ಳಲಾಗಿದೆ. ಭಾರತೀಯ ಯುವ ಕಾಂಗ್ರೆಸ್‌ನ ಖಾತೆಯಿಂದ 5 ಕೋಟಿ ರೂ. ಪಡೆಯಲಾಗಿದೆ ಎಂದು ಕಾಂಗ್ರೆಸ್‌ ತಿಳಿಸಿದೆ.

2017-18ರ ಹಣಕಾಸು ವರ್ಷ ಅಂದರೆ 2018-19ರ ಮೌಲ್ಯಮಾಪನ ವರ್ಷದಲ್ಲಿ ಕಾಂಗ್ರೆಸ್ 45 ದಿನಗಳ ತಡವಾಗಿ ತನ್ನ ಬ್ಯಾಂಕ್‌ ಖಾತೆಗಳ ವಿವರಗಳನ್ನು ಸಲ್ಲಿಸಿತ್ತು. ವಿಳಂಬ ತೆರಿಗೆ ಪಾವತಿಯ ಹಿನ್ನೆಲೆಯಲ್ಲಿ ಆದಾಯ ತೆರಿಗೆ, ಕಾಂಗ್ರೆಸ್‌ ಖಾತೆಗಳನ್ನು ಸೀಜ್‌ ಮಾಡಿತ್ತು. ಪಕ್ಷದ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಿದ ಬೆನ್ನಿಗೆ ನ್ಯಾಯ ಮಂಡಳಿಯ ಮೊರೆ ಹೋದ ಕಾಂಗ್ರೆಸ್‌, ಬ್ಯಾಂಕ್‌ ಖಾತೆಗಳನ್ನು ಚಾಲ್ತಿ ಮಾಡುವಂತೆ ಮನವಿ ಮಾಡಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version