ನವ ದೆಹಲಿ: ಇಡೀ ದೇಶವನ್ನು ನಡುಗಿಸಿದ ದೆಹಲಿ ಶ್ರದ್ಧಾ ವಾಳ್ಕರ್ ಹತ್ಯೆ (Shraddha Murder Case) ಪ್ರಕರಣವನ್ನು ಸಿಬಿಐ ತನಿಖೆಗೆ ವರ್ಗಾಯಿಸಬೇಕು ಎಂದು ದೆಹಲಿ ಹೈಕೋರ್ಟ್ಗೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಂಡಿದೆ. ಶ್ರದ್ಧಾ ವಾಳ್ಕರ್ ಮತ್ತು ಅಫ್ತಾಬ್ ಪೂನಾವಾಲಾ ಲಿವ್ ಇನ್ ರಿಲೇಶನ್ಶಿಪ್ನಲ್ಲಿ ಇದ್ದರು. ಆದರೆ ಅದೇ ಅಫ್ತಾಬ್ ಕೈಯಲ್ಲೇ ಶ್ರದ್ಧಾ ವಾಳ್ಕರ್ ಭಯಾನಕವಾಗಿ ಕೊಲೆಯಾಗಿದ್ದಾಳೆ. ಅಫ್ತಾಬ್ ಆಕೆಯ ದೇಹವನ್ನು 35 ತುಂಡುಗಳನ್ನಾಗಿ ಕತ್ತರಿಸಿ, ತನ್ನ ಅಪಾರ್ಟ್ಮೆಂಟ್ ಸಮೀಪವೇ ಇದ್ದ ಮೆಹ್ರೌಲಿ ಅರಣ್ಯದ ವಿವಿಧೆಡೆ ಎಸೆದಿದ್ದ. ಈಗ ಪೊಲೀಸರು ಒಂದು ಕಡೆಯಿಂದ ತನಿಖೆ, ಪರಿಶೀಲನೆ ಪ್ರಾರಂಭ ಮಾಡಿ ಶ್ರದ್ಧಾ ದೇಹದ ಪೀಸ್ಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ನಿನ್ನೆಯಷ್ಟೇ ಆಕೆಯ ತಲೆ ಬುರುಡೆ ಭಾಗ ಪತ್ತೆಯಾಗಿತ್ತು.
ತನಿಖೆಗೆ ಅತಿಮುಖ್ಯವಾಗಿ ಅಗತ್ಯವಿರುವ ತಲೆಯ ಭಾಗ ಸಿಗುತ್ತಿದ್ದಂತೆ ಈ ಕೇಸ್ನ್ನು ಸಿಬಿಐ ತನಿಖೆಗೆ ವರ್ಗಾಯಿಸಬೇಕು ಎಂದು ಮನವಿ ಮಾಡಿ, ವಕೀಲರೊಬ್ಬರು ದೆಹಲಿ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ವಿಚಾರಣೆ ನಡೆಸಲು ಹೈಕೋರ್ಟ್ ಒಪ್ಪಲಿಲ್ಲ. ‘ಈಗಾಗಲೇ ಪೊಲೀಸರು ಸರಿಯಾದ ಮಾರ್ಗದಲ್ಲಿ ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ ಇಂಥ ಅರ್ಜಿ ಯಾಕೆ’ ಎಂದು ಪ್ರಶ್ನಿಸಿರುವ ಹೈಕೋರ್ಟ್ ‘ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲ. ಪ್ರಚಾರದ ಉದ್ದೇಶದಿಂದ ಸಲ್ಲಿಕೆಯಾದ ಪ್ರಚಾರ ಹಿತಾಸಕ್ತಿ ಅರ್ಜಿ’ ಎಂದು ಹೇಳಿದೆ. ಅರ್ಜಿ ಸಲ್ಲಿಕೆ ಮಾಡಿದವರಿಗೆ ದಂಡ ವಿಧಿಸಿ, ವಜಾಗೊಳಿಸಿದೆ.
ಹಾಗೇ ಇನ್ನೊಂದೆಡೆ ಆರೋಪಿ ಅಫ್ತಾಬ್ಗೆ ಆತನ ಕುಟುಂಬಸ್ಥರನ್ನು ಭೇಟಿ ಮಾಡಲು ದೆಹಲಿ ಹೈಕೋರ್ಟ್ ಅವಕಾಶ ನೀಡಿದೆ. ಜೈಲು ಪಾಲಾಗಿರುವ ಅಫ್ತಾಬ್, ತನ್ನ ಮನೆಯವರನ್ನು ಭೇಟಿಯಾಗಲು ಅವಕಾಶ ಮಾಡಿಕೊಡುವಂತೆ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದ. ಅದಕ್ಕೆ ಹೈಕೋರ್ಟ್ ಅಸ್ತು ಎಂದಿದೆ.
ಇದನ್ನೂ ಓದಿ: Shraddha Murder Case | ಮೆಹ್ರೌಲಿ ಅರಣ್ಯದಲ್ಲಿ ಶ್ರದ್ಧಾಳ ತಲೆ ಬುರುಡೆಯ ಭಾಗಗಳು ಪತ್ತೆ!, ಸಿಬಿಐ ತನಿಖೆಗೆ ಮನವಿ