ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಶತಾಯ ಗತಾಯ ಸೋಲಿಸಬೇಕು ಎಂಬ ದೃಷ್ಟಿಯಿಂದ ಪ್ರತಿಪಕ್ಷಗಳು ರಚಿಸಿರುವ ಒಕ್ಕೂಟಕ್ಕೆ ಇಂಡಿಯಾ (I.N.D.I.A) ಎಂದು ಹೆಸರಿಟ್ಟಿರುವುದನ್ನು (INDIA Alliance) ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, 26 ಪಕ್ಷಗಳು, ಕೇಂದ್ರ ಸರ್ಕಾರ, ಚುನಾವಣೆ ಆಯೋಗಕ್ಕೆ ನೋಟಿಸ್ ನೀಡಿದೆ.
ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟಲ್ ಇನ್‌ಕ್ಲುಸಿವ್ ಅಲಯನ್ಸ್‌ಗೆ INDIA ಎಂಬುದಾಗಿ ಹೆಸರಿಟ್ಟಿರುವುದು ಸರಿಯಲ್ಲ ಎಂಬುದಾಗಿ ಪಿಐಎಲ್ ಸಲ್ಲಿಕೆಯಾಗಿದೆ. ಪಿಐಎಲ್ ವಿಚಾರಣೆ ನಡೆಸಿದ ನ್ಯಾಯಾಲಯವು, ಕೇಂದ್ರ ಗೃಹ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಒಕ್ಕೂಟದ 26 ಪಕ್ಷಗಳು ಹಾಗೂ ಚುನಾವಣೆ ಆಯೋಗಕ್ಕೆ ನೋಟಿಸ್ ನೀಡಿದೆ. ಪಿಐಎಲ್ ಕುರಿತು ಪ್ರತಿಕ್ರಿಯೆ ನೀಡಬೇಕು ಎಂದು ಸೂಚಿಸಿದೆ. ಹಾಗೆಯೇ, ಈ ಕುರಿತು ಅಕ್ಟೋಬರ್ 21ರಂದು ವಿಚಾರಣೆ ನಡೆಸುವುದಾಗಿ ಸೂಚಿಸಿದೆ.
“ಜುಲೈ 19ರಂದು ಪ್ರತಿಪಕ್ಷಗಳು ಸೇರಿ ಇಂಡಿಯಾ ಎಂಬ ಹೆಸರಿನ ಒಕ್ಕೂಟವನ್ನು ರಚಿಸಿವೆ. ಈ ಕುರಿತು ದೂರು ನೀಡಿದರೂ ಚುನಾವಣೆ ಆಯೋಗವು ಒಕ್ಕೂಟದ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ನನಗೆ ಬೇರೆ ಆಯ್ಕೆಗಳೇ ಇರದ ಕಾರಣ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಯಿತು” ಎಂದು ಭಾರದ್ವಾಜ್ ಎಂಬುವರು ಸಲ್ಲಿಸಿದ ಪಿಐಎಲ್‌ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: India TV-CNX Opinion Poll: 3ನೇ ಅವಧಿಗೆ ಮೋದಿ ಪಿಎಂ! ‘ಇಂಡಿಯಾ’ಗಿಲ್ಲ ಲಕ್! ನೆಹರು ದಾಖಲೆ ಸರಿಗಟ್ಟಲಿರುವ ಮೋದಿ
ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಜೆಡಿಯು, ಆರ್‌ಜೆಡಿ ಸೇರಿ 26 ಪಕ್ಷಗಳು ಜತೆಗೂಡಿ ಇಂಡಿಯಾ ಎಂಬ ಒಕ್ಕೂಟವನ್ನು ರಚಿಸಿವೆ. ಈಗಾಗಲೇ ಇಂಡಿಯಾ ಎಂಬ ಹೆಸರಿಟ್ಟಿರುವುದಕ್ಕೆ ನರೇಂದ್ರ ಮೋದಿ, ಬಿಜೆಪಿಯ ಹಲವು ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಂತೂ, ಒಕ್ಕೂಟವನ್ನು ಇಂಡಿಯಾ ಎಂದು ಕರೆಯುವ ಬದಲು ಘಮಂಡಿಯಾ ಎಂಬುದಾಗಿ ಕರೆಯಬೇಕು ಎಂದು ಟೀಕಿಸಿದ್ದಾರೆ.