ನವದೆಹಲಿ: ದೇಶದಲ್ಲಿ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು (Rs 2000 Notes) ಹಿಂಪಡೆಯಲಾದ ತೀರ್ಮಾನ ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಹಾಗೂ ನ್ಯಾಯಮೂರ್ತಿ ಸುಬ್ರಮಣಿಯನ್ ಪ್ರಸಾದ್ ನೇತೃತ್ವದ ನ್ಯಾಯಪೀಠವು ಆರ್‌ಬಿಐ ಆದೇಶಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ.
ಪಿಐಎಲ್ ಸಲ್ಲಿಸಿದ, ವಕೀಲರೂ ಆದ ರಜನೀಶ್ ಭಾಸ್ಕರ್ ವಾದ ಮಂಡಿಸಿದರು. “ಭಾರತೀಯ ರಿಸರ್ವ್ ಬ್ಯಾಂಕ್‌ಗೆ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆಯುವ ಅಧಿಕಾರ ಇಲ್ಲ. 1934ರ ಆರ್‌ಬಿಐ ಕಾಯ್ದೆಯ ಸೆಕ್ಷನ್ 24 (2)ರ ಪ್ರಕಾರ ಕೇಂದ್ರ ಸರ್ಕಾರವೇ ನೋಟುಗಳನ್ನು ಹಿಂಪಡೆಯುವ ಅಧಿಕಾರ ಹೊಂದಿದೆ. ಆದರೆ, 2 ಸಾವಿರ ರೂಪಾಯಿ ಮೌಲ್ಯದ ನೋಟುಗಳನ್ನು ಆರ್‌ಬಿಐ ಹಿಂಪಡೆದಿದೆ. ಇದು ನಿಯಮಗಳ ವಿರುದ್ಧವಿದೆ” ಎಂದು ತಿಳಿಸಿದರು.
“2016ರಲ್ಲಿ ನೋಟು ಅಮಾನ್ಯೀಕರಣ ಮಾಡಿದ ಬಳಿಕ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಮುದ್ರಿಸಲು ಸಾವಿರಾರು ಕೋಟಿ ರೂಪಾಯಿಯನ್ನು ವ್ಯಯಿಸಲಾಗಿದೆ. ತೆರಿಗೆ ಪಾವತಿದಾರರ ಇಷ್ಟೆಲ್ಲ ಹಣವನ್ನು ನೋಟುಗಳ ಮುದ್ರಣಕ್ಕಾಗಿಯೇ ಖರ್ಚು ಮಾಡಲಾಗಿದೆ. ಆದರೆ, ಈಗ ಏಕಾಏಕಿ 2 ಸಾವಿರ ರೂಪಾಯಿ ಮೌಲ್ಯದ ನೋಟುಗಳನ್ನು ಹಿಂಪಡೆದರೆ ಸಾವಿರಾರು ಕೋಟಿ ರೂಪಾಯಿ ವ್ಯರ್ಥವಾಗುತ್ತದೆ. ಹಾಗಾಗಿ, ನೋಟು ವಾಪಸ್ ನಿರ್ಧಾರಕ್ಕೆ ತಡೆಯಾಜ್ಞೆ ನೀಡಬೇಕು” ಎಂದು ಕೂಡ ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
ಇದನ್ನೂ ಓದಿ: 2000 Notes Withdrawn: ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ನಲ್ಲಿ 2000 ನೋಟು ಚಲಾವಣೆಯಲ್ಲಿ ಇಲ್ವಾ?
ಅರ್ಜಿದಾರರು ಹಾಗೂ ಆರ್‌ಬಿಐ ಪರ ವಾದ ಆಲಿಸಿದ ಬಳಿಕ ನ್ಯಾಯಾಲಯವು ಪಿಐಎಲ್‌ಅನ್ನು ತಿರಸ್ಕರಿಸಿತು. ಕ್ಲೀನ್ ನೋಟ್ ಪಾಲಿಸಿ ಅಡಿಯಲ್ಲಿ ಆರ್‌ಬಿಐ ಕಳೆದ ಮೇ ತಿಂಗಳಲ್ಲಿ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆದಿದೆ. 2016ರಲ್ಲಿ ಐನೂರು, ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆದ ಬಳಿಕ 2 ಸಾವಿರ ರೂ. ನೋಟುಗಳನ್ನು ಪರಿಚಯಿಸಲಾಗಿತ್ತು. ಸದ್ಯ, 2 ಸಾವಿರ ರೂ. ನೋಟುಗಳು ಇರುವವರು ಬ್ಯಾಂಕ್‌ಗಳಲ್ಲಿ ಬದಲಾಯಿಸಿಕೊಳ್ಳಲು ಅಥವಾ ಅಕೌಂಟ್‌ಗೆ ಜಮೆ ಮಾಡಿಕೊಳ್ಳಲು ಆರ್‌ಬಿಐ ಅವಕಾಶ ಮಾಡಿಕೊಟ್ಟಿದೆ.