ನವದೆಹಲಿ: ಕೇಂದ್ರ ಸರಕಾರ ಜೂನ್ ೧೪ರಂದು ಘೋಷಿಸಿದ ಅಗ್ನಿಪಥ್ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ಜುಲೈ ೨೦ರಂದು ದಿಲ್ಲಿ ಹೈಕೋರ್ಟ್‌ನಲ್ಲಿ ನಡೆಯಲಿದೆ. ಸಶಸ್ತ್ರ ಪಡೆಗಳಿಗೆ ಅಗ್ನಿಪಥ್ ಯೋಜನೆಯ ಮೂಲಕ ತಾತ್ಕಾಲಿಕ ನೆಲೆಯಲ್ಲಿ ಯೋಧರನ್ನು ನೇಮಿಸುವುದನ್ನು ಪ್ರಶ್ನಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ.
ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳಿಗೆ ನೇಮಕಾತಿ ನಡೆಸಲು ಸರಕಾರ ರೂಪಿಸಿದ ಹೊಸ ಯೋಜನೆ ಅಗ್ನಿಪಥ್. ಇದರ ಪ್ರಕಾರ, ಹದಿನೇಳೂವರೆಯಿಂದ ೨೩ ವರ್ಷದವರೆಗಿನ ಯುವಜನರಿಗೆ ಸೇನೆ ಸೇರಲು ಅವಕಾಶ ನೀಡಲಾಗುತ್ತದೆ. ಸೇನೆಗೆ ಸೇರ್ಪಡೆಯಾದವರಲ್ಲಿ ಶೇ. ೭೫ರಷ್ಟು ಮಂದಿಯನ್ನು ನಾಲ್ಕು ವರ್ಷದಲ್ಲಿ ಸೇನೆಯಿಂದ ಮುಕ್ತಗೊಳಿಸಲಾಗುತ್ತದೆ. ಸಾಮರ್ಥ್ಯವನ್ನು ಸಾಬೀತುಪಡಿಸುವ ಶೇ. ೨೫ ಮಂದಿಗಷ್ಟೇ ಕಾಯಂ ಸೇವೆಗೆ ಅವಕಾಶ ನೀಡಲಾಗುತ್ತದೆ.
ಈ ಯೋಜನೆಯ ವಿರುದ್ಧ ದೇಶಾದ್ಯಂತ ಭಾರಿ ಪ್ರತಿಭಟನೆಗಳು ನಡೆದಿದ್ದವು ಮತ್ತು ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ದಾಖಲಾಗಿದ್ದವು. ಇವೆಲ್ಲವನ್ನೂ ದಿಲ್ಲಿ ಹೈಕೋರ್ಟ್ ಪರಿಗಣಿಸಲಿದೆ. ಇದರ ಜತೆಗೆ ಸೇನಾ ನೇಮಕಾತಿಗೆ ಸಂಬಂಧಿಸಿದ ಇತರ ಎರಡು ಅರ್ಜಿಗಳ ವಿಚಾರಣೆ ಕೂಡಾ ನಡೆಯಲಿದೆ.
ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್ ಅವರಿದ್ದ ಪೀಠ ಭಾರತೀಯ ನೌಕಾಪಡೆಯಲ್ಲಿ ನೇಮಕಾತಿ ಪ್ರಕ್ರಿಯೆ ಪ್ರಶ್ನಿಸಿ 2021ರಲ್ಲಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆದಿತ್ತು. ಅದೇ ಪೀಠದಲ್ಲಿ ಈಗ ಈ ವಿಚಾರಣೆಯೂ ನಡೆಯಲಿದೆ.
ಭಾರತೀಯ ನೌಕಾಪಡೆ ಮತ್ತು ವಾಯುಪಡೆಯಲ್ಲಿನ ನೇಮಕಾತಿ ಪ್ರಕ್ರಿಯೆಗಳನ್ನು ಪ್ರಶ್ನಿಸುವ ಎರಡು ಅರ್ಜಿಗಳ ವಿಚಾರಣೆ ನ್ಯಾಯಾಲಯದಲ್ಲಿ ಬಾಕಿ ಇದೆ. ತಮ್ಮ ನೇಮಕಾತಿಯನ್ನು 2019ರ ಅಧಿಸೂಚನೆಯ ಪ್ರಕಾರ ಮಾಡಬೇಕು ಎಂದು ಒತ್ತಾಯಿಸಿ ಭಾರತೀಯ ವಾಯುಪಡೆಗೆ (IAF) ಆಯ್ಕೆಯಾದ ಏರ್‌ಮೆನ್‌ಗಳು ಸಲ್ಲಿಸಿದ್ದು ಒಂದು ಅರ್ಜಿಯಾದರೆ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಅಧಿಕಾರಿ ಶ್ರೇಣಿಗಿಂತ ಕೆಳಗಿರುವ ಸಿಬ್ಬಂದಿ ಆಯ್ಕೆ ಮಾನದಂಡಕ್ಕೆ (PBORs) ಸಂಬಂಧಿಸಿದ್ದಾಗಿದೆ.
ಇದನ್ನೂ ಓದಿ| ಅಗ್ನಿಪಥ್‌ಗೆ ಭರ್ಜರಿ ಡಿಮಾಂಡ್, ವಾಯುಪಡೆಯ 3,000 ಹುದ್ದೆಗಳಿಗೆ 3 ದಿನಗಳಲ್ಲಿ 56,960 ಅರ್ಜಿ ಸ್ವೀಕಾರ