ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಅಬಕಾರಿ ನೀತಿ ಜಾರಿ (Delhi Excise Policy Case) ವೇಳೆ ನಡೆದಿದೆ ಎನ್ನಲಾದ ನೂರಾರು ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಜಾರಿ ನಿರ್ದೇಶನಾಲಯದ (ED) ಕಸ್ಟಡಿಯಲ್ಲಿದ್ದಾರೆ. ಇದರ ಬೆನ್ನಲ್ಲೇ ಅರವಿಂದ್ ಕೇಜ್ರಿವಾಲ್ ಅವರಿಗೆ ಹೊಸ ಸಂಕಷ್ಟ ಎದುರಾಗಿದೆ. “ಲೈಂಗಿಕ ಕಿರುಕುಳ ನೀಡಿದ ಪ್ರಾಂಶುಪಾಲರೊಬ್ಬರ ವರ್ಗಾವಣೆ ಫೈಲ್ ಒಂದನ್ನು ಕಳೆದ 45 ದಿನಗಳಿಂದ ಅರವಿಂದ್ ಕೇಜ್ರಿವಾಲ್ ಅವರು ಪೆಂಡಿಂಗ್‌ನಲ್ಲಿ ಇಟ್ಟಿದ್ದಾರೆ” ಎಂದು ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ (VK Saxena) ಆರೋಪಿಸಿದ್ದಾರೆ.
“ದೆಹಲಿಯ ಬಾಬಾ ಸಾಹೇಬ್ ಅಂಬೇಡ್ಕರ್ ಮೆಡಿಕಲ್ ಕಾಲೇಜಿನಲ್ಲಿ ಪ್ರಾಂಶುಪಾಲರ ವಿರುದ್ಧವೇ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ದೆಹಲಿ ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಅವರೇ ಕ್ರಮಕ್ಕೆ ಆಗ್ರಹಿಸಿದ್ದಾರೆ. ಹೀಗಿದ್ದರೂ, ಪ್ರಾಂಶುಪಾಲರ ವರ್ಗಾವಣೆಯ ದಾಖಲೆಯನ್ನು ಕಳೆದ 45 ದಿನಗಳಿಂದಲೂ ವಿಲೇವಾರಿ ಮಾಡಿಲ್ಲ. ಲೈಂಗಿಕ ಕಿರುಕುಳ ಪ್ರಕರಣದ ಕುರಿತು ಸೌರಭ್ ಭಾರದ್ವಾಜ್ ಅವರೇ ಆಕ್ರೋಶ ವ್ಯಕ್ತಪಡಿಸಿದರೂ, ಸರ್ಕಾರವು ವರ್ಗಾವಣೆಗೆ ಮೀನ ಮೇಷ ಎಣಿಸುತ್ತಿದೆ” ಎಂದು ವಿ.ಕೆ. ಸಕ್ಸೇನಾ ಆರೋಪಿಸಿದ್ದಾರೆ.
ಪ್ರಾಂಶುಪಾಲ ಈಶ್ವರ್ ಸಿಂಗ್ ಅವರನ್ನು ಕೂಡಲೇ ಹುದ್ದೆಯಿಂದ ಅಮಾನತುಗೊಳಿಸಬೇಕು ಎಂದು ಸೌರಭ್ ಭಾರದ್ವಾಜ್ ಅವರು 2024ರ ಮಾರ್ಚ್ 20ರಂದು ಆಗ್ರಹಿಸಿದ್ದರು. ಆದರೆ, ಇದುವರೆಗೆ ಪ್ರಾಂಶುಪಾಲರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಪ್ರಕರಣದ ಹಿಂದೆ ಆಮ್ ಆದ್ಮಿ ಪಕ್ಷದ ಕುಮ್ಕಕ್ಕು ಇರುವುದನ್ನು ಅಲ್ಲಗಳೆಯುವಂತಿಲ್ಲ ಎಂದು ವಿ.ಕೆ.ಸಕ್ಸೇನಾ ಆರೋಪಿಸಿದ್ದಾರೆ. ಇದು ಈಗ ಹೊಸ ಚರ್ಚೆಗೆ ಕಾರಣವಾಗಿದೆ. ಇದಕ್ಕೂ ಮೊದಲು ಕೂಡ ವಿ.ಕೆ.ಸಕ್ಸೇನಾ ಹಾಗೂ ದೆಹಲಿ ಸರ್ಕಾರದ ಮಧ್ಯೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಜಟಾಪಟಿ ನಡೆದಿವೆ.
ಇದನ್ನೂ ಓದಿ: Arvind Kejriwal: ಅರವಿಂದ್ ಕೇಜ್ರಿವಾಲ್‌ಗೆ ತಪ್ಪದ ಸಂಕಷ್ಟ; ಇನ್ನೂ 4 ದಿನ ಜೈಲೇ ಗತಿ!
ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 21ರಂದು ಅರವಿಂದ್ ಕೇಜ್ರಿವಾಲ್ ಅವರನ್ನು ಇ.ಡಿ ಅಧಿಕಾರಿಗಳು ಬಂಧಿಸಿದ್ದರು. ಇದಾದ ಬಳಿಕ ಮಾರ್ಚ್ 28ರವರೆಗೆ ನ್ಯಾಯಾಲಯವು ಅವರನ್ನು ಇ.ಡಿ ಕಸ್ಟಡಿಗೆ ನೀಡಿತ್ತು. ಇದಾದ ಬಳಿಕ ಮತ್ತೆ ನ್ಯಾಯಾಲಯವು ಅವರನ್ನು ಏಪ್ರಿಲ್ 1ರವರೆಗೆ ಇ.ಡಿ ಕಸ್ಟಡಿಗೆ ನೀಡಿದೆ. ಇನ್ನು, ಅರವಿಂದ್ ಕೇಜ್ರಿವಾಲ್ ಅವರ ಬಂಧನ ಖಂಡಿಸಿ ಆಪ್ ಮುಖಂಡರು ಹಾಗೂ ಕಾರ್ಯಕರ್ತರ ಪ್ರತಿಭಟನೆ ಮುಂದುವರಿದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ