Site icon Vistara News

Arundhati Roy: ‘ಕಾಶ್ಮೀರ ಭಾರತದ್ದಲ್ಲ’ ಎಂದಿದ್ದ ಅರುಂಧತಿ ರಾಯ್‌ ವಿರುದ್ಧ ಉಗ್ರರ ನಿಗ್ರಹ ಕಾಯ್ದೆ ಅಡಿ ಕ್ರಮ!

Arundhati Roy

Delhi LG approves prosecution of Arundhati Roy under UAPA

ನವದೆಹಲಿ: ಜಮ್ಮು-ಕಾಶ್ಮೀರದ ಕುರಿತು ಪ್ರಚೋದನಾತ್ಮಕ ಹೇಳಿಕೆ ನೀಡಿದ ಪ್ರಕರಣದಲ್ಲಿ ಖ್ಯಾತ ಲೇಖಕಿ, ಸಾಮಾಜಿಕ ಹೋರಾಟಗಾರ್ತಿಯೂ ಆದ ಅರುಂಧತಿ ರಾಯ್‌ (Arundhati Roy) ಹಾಗೂ ಮಾಜಿ ಪ್ರೊಫೆಸರ್‌ ಶೇಖ್‌ ಶೌಕತ್‌ ಹುಸೇನ್‌ (Sheikh Showkat Hussain) ಅವರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಇಬ್ಬರ ವಿರುದ್ಧವೂ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲು ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ (V K Saxena) ಅನುಮತಿ ನೀಡಿದ್ದಾರೆ. ಉಗ್ರರನ್ನು ನಿಗ್ರಹಿಸಲು ಜಾರಿಗೆ ತಂದಿರುವ ಕಾಯ್ದೆಯ ಅಡಿಯಲ್ಲಿ ಇಬ್ಬರ ವಿರುದ್ಧ ಇನ್ನು ಕ್ರಮ ತೆಗೆದುಕೊಳ್ಳಲಾಗುತ್ತದೆ.

ಏನಿದು ಪ್ರಕರಣ?

2010ರ ಅಕ್ಟೋಬರ್‌ 21ರಂದು ನವದೆಹಲಿಯ ಎಲ್‌ಟಿಜಿ ಆಡಿಟೋರಿಯಂನಲ್ಲಿ ‘ಆಜಾದಿ-ದಿ ಓನ್ಲಿ ವೇ’ (Azadi- The Only Way) ಎಂಬ ಬ್ಯಾನರ್‌ ಅಡಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಭಾರತದಿಂದ ಜಮ್ಮು-ಕಾಶ್ಮೀರವನ್ನು ಪ್ರತ್ಯೇಕಿಸುವುದು ಸೇರಿ ಹಲವು ವಿಷಯಗಳ ಕುರಿತು ಚರ್ಚಿಸಲು ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅರುಂಧತಿ ರಾಯ್‌ ಹಾಗೂ ಕಾಶ್ಮೀರ ಕೇಂದ್ರೀಯ ವಿವಿಯ ಮಾಜಿ ಪ್ರೊಫೆಸರ್‌ ಶೇಖ್‌ ಶೌಕತ್‌ ಹುಸೇನ್‌ ಅವರು ಕಾಶ್ಮೀರ ಕುರಿತು ಮಾತನಾಡಿದ್ದರು. ಇವರು ಕಾಶ್ಮೀರ ಕುರಿತು ನೀಡಿದ ಹೇಳಿಕೆಗಳನ್ನು ಖಂಡಿಸಿದ ಕಾಶ್ಮೀರದ ಸುಶೀಲ್‌ ಪಂಡಿತ್‌ ಎಂಬ ಸಾಮಾಜಿಕ ಕಾರ್ಯಕರ್ತ 2010ರ ಅಕ್ಟೋಬರ್‌ 28ರಂದು ಎಫ್‌ಐಆರ್‌ ದಾಖಲಿಸಿದ್ದರು.

ಪ್ರತ್ಯೇಕವಾದಿ ಮುಖಂಡ ಸೈಯದ್‌ ಶಾ ಗೀಲಾನಿ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ. ಸೈಯದ್‌ ಶಾ ಗೀಲಾನಿ ಹಾಗೂ ಅರುಂಧತಿ ರಾಯ್‌ ಅವರು, “ಭಾರತೀಯ ಸೇನೆಯೇ ಕಾಶ್ಮೀರವನ್ನು ಅಕ್ರಮವಾಗಿ ವಶಪಡಿಸಿಕೊಂಡಿದೆ. ಕಾಶ್ಮೀರವು ಎಂದಿಗೂ ಭಾರತದ ಭಾಗವಾಗಿರಲಿಲ್ಲ” ಎಂಬುದಾಗಿ ಹೇಳಿದ್ದರು ಎಂಬ ಆರೋಪವಿದೆ. ಕಾರ್ಯಕ್ರಮದಲ್ಲಿ ಇವರೆಲ್ಲ ಮಾತನಾಡಿದ ಸಿ.ಡಿಗಳನ್ನು ಸುಶೀಲ್‌ ಪಂಡಿತ್‌ ಅವರು ಕೋರ್ಟ್‌ಗೆ ಹಾಜರುಪಡಿಸಿದ್ದರು. ಅದರಂತೆ, ಹಲವು ಸೆಕ್ಷನ್‌ಗಳ ಅಡಿಯಲ್ಲಿ ಇವರ ವಿರುದ್ಧ ತನಿಖೆ ನಡೆಸಲಾಗುತ್ತಿದೆ. ಈಗ ಯುಎಪಿಎ ಅಡಿಯಲ್ಲಿ ದೆಹಲಿ ಪೊಲೀಸರು ಕ್ರಮ ತೆಗೆದುಕೊಳ್ಳಲಿದ್ದಾರೆ.

ಏನಿದು ಯುಎಪಿಎ?
ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯನ್ನು ಸಂಕ್ಷಿಪ್ತವಾಗಿ ಯುಎಪಿಎ ಎಂದ ಕರೆಯಲಾಗುತ್ತದೆ. ಭಾರತದಲ್ಲಿ ನಡೆಯುವ ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸುವುದೇ ಈ ಕಾನೂನಿನ ಮುಖ್ಯ ಉದ್ದೇಶ. ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡುವ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವನ್ನು ಈ ಕಾಯ್ದೆಯು ಸರ್ಕಾರಕ್ಕೆ ನೀಡುತ್ತದೆ. 1967ರ ಈ ಕಾಯ್ದೆಗೆ ಹಲವು ಬಾರಿ ತಿದ್ದುಪಡಿಯಾಗಿದೆ. ತೀರಾ ಇತ್ತೀಚಿನ ತಿದ್ದುಪಡಿ ಎಂದರೆ, 2019ರ ತಿದ್ದುಪಡಿ. ಈ ತಿದ್ದುಪಡಿ ಅನ್ವಯ ಕೇಂದ್ರ ಸರ್ಕಾರವು ಯಾವುದೇ ವ್ಯಕ್ತಿಯನ್ನು ಕಾನೂನು ಪ್ರಕ್ರಿಯೆಗೆ ಒಳಪಡಿಸದೇ ಉಗ್ರ ಎಂದು ತೀರ್ಮಾನಿಸಬಹುದಾಗಿದೆ. ಈ ಕಾನೂನನ್ನು ಉಗ್ರ ನಿಗ್ರಹ ಕಾಯಿದೆ ಎಂದೂ ಕರೆಯಲಾಗುತ್ತದೆ.

ಗರಿಷ್ಠ ಶಿಕ್ಷೆ ಏನು?
ಯುಎಪಿಎ ಕಾಯ್ದೆಯಡಿ ಅಪರಾಧಿಗೆ ಗರಿಷ್ಠ ಐದು ವರ್ಷಕ್ಕಿಂತ ಕಡಿಮೆ ಇಲ್ಲದಂತೆ ಜೀವಾವಧಿ ಶಿಕ್ಷೆ ವಿಧಿಸಬಹುದು. ಗರಿಷ್ಠ ಪ್ರಕರಣದಲ್ಲಿ ಗಲ್ಲು ಶಿಕ್ಷೆಯನ್ನೂ ವಿಧಿಸಬಹುದಾಗಿದೆ. ಈ ಕಾಯ್ದೆಯಡಿ ಬಂಧಿತರಾದವರಿಗೆ ಜಾಮೀನು ದೊರೆಯುವ ಅವಕಾಶಗಳು ಬಹಳ ಕಡಿಮೆಯಾಗಿರುತ್ತದೆ. ಆಸ್ತಿಯನ್ನು ವಶಪಡಿಸಿಕೊಳ್ಳುವ ಅಧಿಕಾರವನ್ನು ಎನ್ಐಎಗೆ ಈ ಕಾಯ್ದೆ ನೀಡುತ್ತದೆ.

ಇದನ್ನೂ ಓದಿ: Coimbatore Blast | ಯುಎಪಿಎ ಕಾಯ್ದೆಯಡಿ ಕೊಯಮತ್ತೂರು ಸ್ಫೋಟ ತನಿಖೆ, ಯಾಕೆ ಈ ನಿರ್ಧಾರ?

Exit mobile version