ನವದೆಹಲಿ: ರಾಜಧಾನಿಯಲ್ಲಿ ಅಬಕಾರಿ ನೀತಿ ಜಾರಿ (Delhi Excise Policy Case) ವೇಳೆ ನಡೆದಿದೆ ಎನ್ನಲಾದ ನೂರಾರು ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ನಿಷೇಧಿತ ಖಲಿಸ್ತಾನಿ ಉಗ್ರ ಸಂಘಟನೆ ‘ಸಿಖ್ಸ್ ಫಾರ್ ಜಸ್ಟಿಸ್’ನಿಂದ (Sikhs for Justice) ರಾಜಕೀಯ ದೇಣಿಗೆ ಪಡೆದ ಪ್ರಕರಣವನ್ನು ಎನ್‌ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ (VK Saxena) ಅವರು ಶಿಫಾರಸು ಮಾಡಿದ್ದಾರೆ.
1993ರ ದೆಹಲಿ ಬಾಂಬ್ ಸ್ಫೋಟದ ಅಪರಾಧಿ, ಖಲಿಸ್ತಾನಿ ಉಗ್ರ ದೇವಿಂದರ್ ಪಾಲ್ ಭುಲ್ಲರ್‌ನನ್ನು ಜೈಲಿನಿಂದ ಬಿಡುಗಡೆಗೊಳಿಸುವುದಾಗಿ ತಿಳಿಸಿ ಆಮ್ ಆದ್ಮಿ ಪಕ್ಷವು ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆಯಿಂದ ಸುಮಾರು 133 ಕೋಟಿ ರೂ. (16 ದಶಲಕ್ಷ ಡಾಲರ್) ದೇಣಿಗೆ ಪಡೆದಿದೆ ಎಂಬ ಕುರಿತು ದೂರು ನೀಡಿದ ಹಿನ್ನೆಲೆಯಲ್ಲಿ ವಿ.ಕೆ.ಸಕ್ಸೇನಾ ಅವರು ಎನ್‌ಐಎ ತನಿಖೆಗೆ ಶಿಫಾರಸು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಸಿಖ್ಸ್ ಫಾರ್ ಜಸ್ಟಿಸ್ ಉಗ್ರ ಸಂಘಟನೆಯು ವಾಂಟೆಡ್ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಸ್ಥಾಪಿಸಿದ್ದಾನೆ. ಇದನ್ನು ಕೇಂದ್ರ ಸರ್ಕಾರವು ನಿಷೇಧಿಸಿದೆ. ಈ ಸಂಘಟನೆಯಿಂದ ಆಮ್ ಆದ್ಮಿ ಪಕ್ಷವು ನೂರಾರು ಕೋಟಿ ರೂ. ದೇಣಿಗೆ ಪಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈಗ ಇದರ ಕುರಿತು ಎನ್‌ಐಎ ತನಿಖೆಗೆ ವಿ.ಕೆ.ಸಕ್ಸೇನಾ ಅವರು ಶಿಫಾರಸು ಮಾಡಿದ್ದಾರೆ.
Delhi LG, VK Saxena has recommended an NIA probe against Delhi CM Arvind Kejriwal for allegedly receiving political funding from the banned terrorist organization “Sikhs for Justice”
— ANI (@ANI) May 6, 2024
LG had received a complaint that Arvind Kejriwal-led AAP had received huge funds – USD 16… pic.twitter.com/11wzfXvgmo
ದೆಹಲಿ ಅಬಕಾರಿ ನೀತಿ ಜಾರಿ ಹಗರಣಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದ್ದು, ತಿಹಾರ ಜೈಲಿನಲ್ಲಿದ್ದಾರೆ. ದೆಹಲಿ ಸರ್ಕಾರವು 2021ರ ನವೆಂಬರ್ 17ರಂದು ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ಭ್ರಷ್ಟಾಚಾರದ ಆರೋಪದ ನಡುವೆ 2022ರ ಸೆಪ್ಟೆಂಬರ್ ಕೊನೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ತನಿಖಾ ಸಂಸ್ಥೆಗಳ ಪ್ರಕಾರ ಹೊಸ ನೀತಿಯ ಅಡಿಯಲ್ಲಿ ಸಗಟು ವ್ಯಾಪಾರಿಗಳ ಲಾಭಾಂಶವನ್ನು ಶೇ.5ರಿಂದ 12ಕ್ಕೆ ಹೆಚ್ಚಿಸಲಾಗಿತ್ತು. ಅಬಕಾರಿ ನೀತಿ ಜಾರಿ ವೇಳೆ ನೂರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಇದರಲ್ಲಿ ಕೆ. ಕವಿತಾ ಅವರ ಪಾಲೂ ಇದೆ ಎಂಬ ಆರೋಪವಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಅರವಿಂದ್ ಕೇಜ್ರಿವಾಲ್ ಮಾತ್ರವಲ್ಲ ಬಿಆರ್‌ಎಸ್ ನಾಯಕಿ ಕೆ. ಕವಿತಾ ಅವರನ್ನೂ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಅಷ್ಟೇ ಅಲ್ಲ, ದೆಹಲಿ ಜಲ ಮಂಡಳಿ ಗುತ್ತಿಗೆ ಮಂಜೂರು ಮಾಡುವಾಗ ಕೂಡ ಅಕ್ರಮ ನಡೆದಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಜಾರಿ ನಿರ್ದೇಶನಾಲಯವು ಅರವಿಂದ್ ಕೇಜ್ರಿವಾಲ್ ಅವರಿಗೆ ಸಮನ್ಸ್ ಜಾರಿಗೊಳಿಸಿದೆ. ಮತ್ತೊಂದೆಡೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಇ.ಡಿ ಸಲ್ಲಿಸಿದ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರಿಗೆ ಈಗಾಗಲೇ ಜಾಮೀನು ಸಿಕ್ಕಿದೆ. ಇದರಿಂದ ಅವರು ತಾತ್ಕಾಲಿಕವಾಗಿ ರಿಲೀಫ್ ಪಡೆದಿದ್ದರು. ಆದರೆ, ಈಗ ಬಂಧನದಿಂದ ರಕ್ಷಣೆಗೆ ನೀಡದ ಕಾರಣ ಅವರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇದನ್ನೂ ಓದಿ: Arvind Kejriwal: ಕೇಜ್ರಿವಾಲ್, ಕವಿತಾ ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ