ಹೈದರಾಬಾದ್: ದೆಹಲಿ ಅಬಕಾರಿ ನೀತಿ ಹಗರಣ (Delhi Liquor Policy Case)ಕ್ಕೆ ಸಂಬಂಧಿಸಿ ಫೆಬ್ರವರಿ 26ರಂದು ವಿಚಾರಣೆಗೆ ಹಾಜರಾಗುವಂತೆ ಸಿಬಿಐ (Central Bureau of Investigation) ಅಧಿಕಾರಿಗಳು ಬಿಆರ್‌ಎಸ್ (Bharat Rashtra Samithi) ನಾಯಕಿ, ಎಂಎಲ್‌ಸಿ ಕೆ.ಕವಿತಾ (K.Kavitha) ಅವರಿಗೆ ಸಮನ್ಸ್ ಜಾರಿ ಮಾಡಿದ್ದಾರೆ. ದೆಹಲಿಯಲ್ಲಿರುವ ಸಿಬಿಐಯ ಕೇಂದ್ರ ಕಚೇರಿಗೆ ಹಾಜರಾಗುವಂತೆ ಸೂಚಿಸಲಾಗಿದೆ.
ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಕವಿತಾ ಅವರನ್ನು ಈ ಹಿಂದೆ 2022ರ ಡಿಸೆಂಬರ್‌ನಲ್ಲಿ ಸಿಬಿಐ ಇದೇ ಪ್ರಕರಣಕ್ಕೆ ಸಂಬಂಧಿಸಿ ಸುಮಾರು 7 ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ಮಾತ್ರವಲ್ಲ 2023ರ ಮಾರ್ಚ್ 11ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ED) ಸುಮಾರು 9 ಗಂಟೆಗಳ ಕಾಲ ಪ್ರಶ್ನಿಸಿದ್ದರು. ಮಾರ್ಚ್ 15ರಂದು ಕವಿತಾ ಇ.ಡಿ ವಿರುದ್ಧವೇ ಸುಪ್ರೀಂ ಕೋರ್ಟ್‌ದಲ್ಲಿ ಮೊಕದ್ದಮೆ ಹೂಡಿದ್ದರು. ಸೆಪ್ಟೆಂಬರ್‌ನಲ್ಲಿ ನ್ಯಾಯಾಲಯವು, ಮುಂದಿನ ವಿಚಾರಣೆಯನ್ನು ಕೈಗೆತ್ತಿಕೊಳ್ಳುವವರೆಗೆ ಕವಿತಾ ಅವರನ್ನು ಕರೆಸದಂತೆ ಇ.ಡಿಗೆ ಸೂಚಿಸಿತ್ತು. ಈ ವರ್ಷದ ಜನವರಿಯಲ್ಲಿ ಇ.ಡಿ ಮತ್ತೆ ಕವಿತಾ ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು.
CBI summons BRS leader K. Kavitha for questioning on February 26 in connection with the Delhi excise policy case: Sources
— ANI (@ANI) February 21, 2024
(File pic) pic.twitter.com/7nc5cFNp4c
ಮಹಿಳೆಯರನ್ನು ಅವರ ನಿವಾಸದಲ್ಲಿ ಪ್ರಶ್ನಿಸಬೇಕು ಎಂಬ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ ಎಂದು ಹೇಳಿ ಅವರು ಸಮನ್ಸ್ ತಪ್ಪಿಸಿಕೊಂಡಿದ್ದರು. ಮಾತ್ರವಲ್ಲ ಕಳೆದ ವರ್ಷ ಅವರು ಮೂರು ಬಾರಿ ವಿಚಾರಣೆಗೆ ಹಾಜರಾಗಿರಲಿಲ್ಲ. ಇದೀಗ ಸಿಬಿಐ ಫೆಬ್ರವರಿ 26ರಂದು ಹಾಜರಾಗಲು ಸೂಚಿಸಿದ್ದು, ಕವಿತಾ ಅವರ ಮುಂದಿನ ನಡೆ ಕುತೂಹಲ ಕೆರಳಿಸಿದೆ.
ಏನಿದು ಹಗರಣ?
ದೆಹಲಿ ಸರ್ಕಾರ ಈಗ ರದ್ದುಪಡಿಸಿದ ಅಬಕಾರಿ ನೀತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕೇಂದ್ರ ತನಿಖಾ ದಳ ದಾಖಲಿಸಿದ ಎಫ್ಐಆರ್ ಆಧಾರದ ಮೇಲೆ ಇ.ಡಿ ಕೈಗೆತ್ತಿಕೊಂಡ ಪ್ರಕರಣ ಇದಾಗಿದೆ. ಸಗಟು ವ್ಯಾಪಾರಿಗಳಿಗೆ 12% ಲಾಭಾಂಶ ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಸುಮಾರು 185% ಲಾಭಾಂಶವನ್ನು ಖಚಿತ ಪಡಿಸಿಕೊಳ್ಳಲು ಆಮ್ ಆದ್ಮಿ ಪಕ್ಷವು ನೀತಿಯನ್ನು ಮಾರ್ಪಡಿಸಿದೆ ಎಂದು ಇ.ಡಿ ಆರೋಪಿಸಿವೆ.
ಇದನ್ನೂ ಓದಿ: Arvind Kejriwal: ಕೇಜ್ರಿವಾಲ್‌ಗೆ 7ನೇ ಸಮನ್ಸ್ ನೀಡಿದ ಇ.ಡಿ; ಅರೆಸ್ಟ್ ಮಾಡ್ತಾರಾ?
ಹಗರದಲ್ಲಿ ಆರೋಪಿಯಾಗಿರುವ ವಿಜಯ್ ನಾಯರ್‌ಗೆ ಕವಿತಾ, ಶರತ್ ರೆಡ್ಡಿ ಮತ್ತು ಮಾಗುಂಟ ಶ್ರೀನಿವಾಸುಲು ರೆಡ್ಡಿ ಮಾಲೀಕತ್ವದ ಸೌತ್ ಗ್ರೂಪ್‌ನಿಂದ 100 ಕೋಟಿ ರೂ. ಲಂಚ ನೀಡಲಾಗಿದೆ. ಆಮ್ ಆದ್ಮಿ ಪಕ್ಷದ ನಾಯಕರ ಪರವಾಗಿ ಈ ಹಣ ನೀಡಲಾಗಿದೆ ಎಂದು ಇ.ಡಿ ಹೇಳಿದೆ. ಹಗರಣದಿಂದ ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟವಾಗಿದೆ ಎಂದು ಸಿಬಿಐ ತಿಳಿಸಿದೆ. ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಹಲವು ಆರೋಪಿಗಳ ವಿರುದ್ಧ ಸಿಬಿಐ ಈವರೆಗೆ ಮೂರು ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದೆ. ಹಿಂದೆ ಈ ಬಗ್ಗೆ ಮಾತನಾಡಿದ್ದ ಕವಿತಾ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಹೊರಿಸಿದ್ದರು. ʼʼಈ ಹಗರಣಕ್ಕೂ ನನಗೂ ಸಂಬಂಧವಿಲ್ಲ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಾಜಕೀಯ ದುರುದ್ದೇಶದಿಂದ ನನ್ನನ್ನು ಬೇಟೆಯಾಡುತ್ತಿದೆʼʼ ಎಂದು ಹೇಳಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ