ನವದೆಹಲಿ: ಆಮ್ ಆದ್ಮಿ ಪಾರ್ಟಿ (AAP) ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಮತ್ತು ಜಾರಿ ನಿರ್ದೇಶನಾಲಯ (Enforcement Directorate) ನಡುವಿನ ಸಂಘರ್ಷ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ದೆಹಲಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ (Delhi Liquor Scam) ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 16ರ ಒಳಗೆ ವಿಚಾರಣೆಗೆ ಹಾಜರಾಗುವಂತೆ ದೆಹಲಿ ಕೋರ್ಟ್ ಕೇಜ್ರಿವಾಲ್ ಅವರಿಗೆ ಮತ್ತೊಂದು ಸಮನ್ಸ್ ಜಾರಿ ಮಾಡಿದೆ.
ಹಲವು ಬಾರಿ ಸಮನ್ಸ್ ನೀಡಿದ್ದರೂ ಕೇಜ್ರಿವಾಲ್ ಅವರು ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡಿದ್ದಾರೆ ಎಂದು ಇ.ಡಿ ದೆಹಲಿ ಕೋರ್ಟ್‌ಗೆ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಹೊಸದಾಗಿ ಕೋರ್ಟ್ ಸಮನ್ಸ್ ನೀಡಿದೆ. ಕೇಜ್ರಿವಾಲ್ ಅವರಿಗೆ ನೀಡಲಾದ ಸಮನ್ಸ್‌ಗಳಿಗೆ ಪ್ರತಿಕ್ರಿಯೆ ನೀಡದ ಕಾರಣಕ್ಕೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿ ಇ.ಡಿ ಈ ಹಿಂದೆಯೂ ಸ್ಥಳೀಯ ನ್ಯಾಯಾಲಯವನ್ನು ಸಂಪರ್ಕಿಸಿತ್ತು.
ಕೇಜ್ರಿವಾಲ್ ತಮಗೆ ಕಳುಹಿಸಿರುವ ಈ ಎಲ್ಲ ಎಂಟು ಇ.ಡಿ ಸಮನ್ಸ್‌ಗಳನ್ನು ʼಕಾನೂನುಬಾಹಿರʼ ಎಂದು ಕರೆದಿದ್ದಾರೆ ಮತ್ತು ಮಾರ್ಚ್ 12ರ ನಂತರ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣಗೆ ಹಾಜರಾಗುವುದಾಗಿ ತಿಳಿಸಿದ್ದರು. ಆದರೆ ಇದಕ್ಕೆ ಇ.ಡಿ ಒಪ್ಪಿಗೆ ಸೂಚಿಸಿಲ್ಲ. ನೇರವಾಗಿ ಹಾಜರಾಗುವಂತೆ ಕೇಜ್ರಿವಾಲ್ ಅವರಿಗೆ ಸೂಚಿಸಿದೆ. ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲು ಅವಕಾಶವಿಲ್ಲ ಎಂದು ಹೇಳಿದೆ.
ED और मोदी सरकार की ये सच्चाई है। कैसे लोगों को ED से परेशान करवा के बीजेपी में शामिल किया जाता है। ED की रेड करवा के पूछा जाता है – कहाँ जाओगे – बीजेपी या जेल? जो बीजेपी जाने से मना कर देते हैं, उन्हें जेल भेज देते हैं। आज अगर सत्येंद्र जैन, मनीष सिसोदिया और संजय सिंह अगर बीजेपी… https://t.co/Xe1frCexDs
— Arvind Kejriwal (@ArvindKejriwal) March 6, 2024
ಕಿಡಿ ಕಾರಿದ ಕೇಜ್ರಿವಾಲ್
ಈ ಮಧ್ಯೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿರುವ ಕೇಜ್ರಿವಾಲ್, ʼʼನಾನು ಬಿಜೆಪಿ ಸೇರುವ ತನಕ ಇ.ಡಿಯಿಂದ ಸಮನ್ಸ್ ಬರುತ್ತಲೇ ಇರುತ್ತದೆ. ಇ.ಡಿ ಅಧಿಕಾರಿಗಳು ಬಿಜೆಪಿ ಹೇಳಿದಂತೆ ಕೇಳುತ್ತಿದ್ದಾರೆʼʼ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ʼʼಬಿಜೆಪಿಗೆ ಸೇರಲು ಒಪ್ಪದವರನ್ನು ಜೈಲಿಗೆ ಕಳುಹಿಸಲಾಗುತ್ತಿದೆ. ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಯಾವುದೇ ಅಪರಾದ ಮಾಡಿಲ್ಲ. ಅವರು ಬಿಜೆಪಿ ಸೇರಲು ನಿರಾಕರಿಸಿದ್ದರಿಂದ ಅವರನ್ನು ಜೈಲಿಗೆ ಹಾಕಲಾಗಿದೆ. ಪ್ರಧಾನ ಮಂತ್ರಿಗಳೇ ದೇವರು ಎಲ್ಲವನ್ನೂ ನೋಡುತ್ತಾನೆ. ಅನ್ಯಾಯಕ್ಕೆ ತಕ್ಕ ಶಿಕ್ಷೆ ಒಂದಲ್ಲ ಒಂದು ದಿನ ಸಿಕ್ಕೇ ಸಿಗುತ್ತದೆʼʼ ಎಂದು ಹೇಳಿದ್ದಾರೆ.
ಏನಿದು ಪ್ರಕರಣ?
ದೆಹಲಿ ಸರ್ಕಾರವು 2021ರ ನವೆಂಬರ್ 17ರಂದು ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ಭ್ರಷ್ಟಾಚಾರದ ಆರೋಪದ ನಡುವೆ 2022ರ ಸೆಪ್ಟೆಂಬರ್ ಕೊನೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ತನಿಖಾ ಸಂಸ್ಥೆಗಳ ಪ್ರಕಾರ ಹೊಸ ನೀತಿಯ ಅಡಿಯಲ್ಲಿ ಸಗಟು ವ್ಯಾಪಾರಿಗಳ ಲಾಭಾಂಶವನ್ನು ಶೇ. 5ರಿಂದ 12ಕ್ಕೆ ಹೆಚ್ಚಿಸಲಾಗಿದೆ. ಅಲ್ಲದೆ ಕಾರ್ಟೆಲೈಸೇಶನ್‌ಗೆ ಅವಕಾಶ ಮಾಡಿಕೊಟ್ಟಿದೆ ಮತ್ತು ಅದಕ್ಕಾಗಿ ಲಂಚ ನೀಡಲಾಗಿದೆ ಎನ್ನುವ ಆರೋಪವಿದೆ. ಇದನ್ನು ಎಎಪಿ ಪದೇಪದೆ ನಿರಾಕರಿಸುತ್ತಲೇ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿ ಹಲವರನ್ನು ಬಂಧಿಸಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ