ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳಿಂದ ಬಂಧನಕ್ಕೀಡಾಗಿರುವ ಮನೀಷ್ ಸಿಸೋಡಿಯಾ (Manish Sisodia Resigns) ಅವರು ತಮ್ಮ ಉಪ ಮುಖ್ಯಮಂತ್ರಿ ಹಾಗೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹಾಗೆಯೇ, ಅಕ್ರಮವಾಗಿ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಸತ್ಯೇಂದರ್ ಜೈನ್ ಅವರೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಬ್ಬರ ರಾಜೀನಾಮೆಯನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸ್ವೀಕರಿಸಿದ್ದಾರೆ.
ಸಿಬಿಐ ಅಧಿಕಾರಿಗಳು ಬಂಧಿಸಿರುವ ಕ್ರಮವನ್ನು ಪ್ರಶ್ನಿಸಿ ಮನೀಷ್ ಸಿಸೋಡಿಯಾ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಇದರಿಂದ ಸಿಸೋಡಿಯಾ ಅವರಿಗೆ ಮತ್ತಷ್ಟು ಹಿನ್ನಡೆಯಾಗಿತ್ತು. ಇದರ ಬೆನ್ನಲ್ಲೇ ಅವರು ರಾಜೀನಾಮೆ ನೀಡಿದ್ದಾರೆ. ಮಾರ್ಚ್ 4ರವರೆಗೆ ದೆಹಲಿ ಕೋರ್ಟ್ ಸಿಸೋಡಿಯಾ ಅವರಿಗೆ ಸಿಬಿಐ ಕಸ್ಟಡಿಗೆ ನೀಡಿದೆ.
ಅಷ್ಟೇ ಅಲ್ಲ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದ ಸತ್ಯೇಂದರ್ ಜೈನ್ ಅವರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಇ.ಡಿ ಅಧಿಕಾರಿಗಳು ಇವರನ್ನು ಬಂಧಿಸಿದ್ದು, ಸದ್ಯ ಜೈಲಿನಲ್ಲಿದ್ದಾರೆ. ಹಾಗಾಗಿ, ಅವರು ಕೂಡ ರಾಜೀನಾಮೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: Manish Sisodia: ಬಂಧನ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ್ದ ಮನೀಷ್ ಸಿಸೋಡಿಯಾಗೆ ಹಿನ್ನಡೆ, ಅರ್ಜಿ ತಿರಸ್ಕಾರ