ನವದೆಹಲಿ: ಸಂಸತ್ತಿಗೆ ಮುತ್ತಿಗೆ ಹಾಕಲು (Delhi March) ರೈತರು ನಿರ್ಧರಿಸಿರುವುದರಿಂದ ನೋಯ್ಡಾ ಪೊಲೀಸರು ಗುರುವಾರ ದೆಹಲಿಯೊಂದಿಗಿನ ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಇದರಿಂದ ದೆಹಲಿ- ನೋಯ್ಡಾ (Delhi-Noida) ಗಡಿಗಳಲ್ಲಿ ಭಾರಿ ಟ್ರಾಫಿಕ್ ಜಾಮ್ ಪ್ರಾರಂಭವಾಗಿದೆ. ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಪೊಲೀಸರಲ್ಲದೆ, ಕ್ಷಿಪ್ರ ಕ್ರಿಯಾ ಪಡೆಯ ಸಿಬ್ಬಂದಿಯನ್ನು ಸಹ ಕರೆಸಲಾಗಿದೆ. ಗಲಭೆ ನಿಯಂತ್ರಣ ವಾಹನಗಳು ಸ್ಥಳದಲ್ಲಿವೆ ಮತ್ತು ಡ್ರೋನ್‌ಗಳನ್ನೂ ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ದೆಹಲಿಯ ಗಡಿಯಲ್ಲಿ 2020-21ರಂದು ನಡೆದ ಐತಿಹಾಸಿಕ ಪ್ರತಿಭಟನೆಯ ಮೂರು ವರ್ಷಗಳ ನಂತರ ರೈತರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಂದು ಸುತ್ತಿನ ಆಂದೋಲನಕ್ಕೆ ಸಜ್ಜಾಗುತ್ತಿದ್ದಾರೆ. ನೆರೆಯ ಹರಿಯಾಣ ಮತ್ತು ಉತ್ತರ ಪ್ರದೇಶದ ಪೊಲೀಸರು ಪ್ರತಿಭಟನಾ ನಿರತ ರೈತರ ಪ್ರತ್ಯೇಕ ಗುಂಪುಗಳನ್ನು ನಿಯಂತ್ರಿಸಲು ಸಜ್ಜಾಗಿದ್ದಾರೆ. ಸಿಮೆಂಟ್ ತಡೆಗೋಡೆಗಳು, ಮರಳು ಚೀಲಗಳು ಮತ್ತು ಮುಳ್ಳು ತಂತಿಗಳ ವ್ಯವಸ್ಥೆ ಮಾಡಲಾಗುತ್ತಿದ್ದು, ರೈತರು ದೆಹಲಿಗೆ ಪ್ರವೇಶಿಸದಂತೆ ತಡೆಯಲು ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಎರಡು ಪ್ರತ್ಯೇಕ ಪ್ರತಿಭಟನೆ
ಎರಡು ಪ್ರತ್ಯೇಕ ಪ್ರತಿಭಟನೆಗಳು ನಡೆಯಲಿವೆ. ಆ ಪೈಕಿ ಒಂದು ಇಂದು (ಫೆಬ್ರವರಿ 8) ಪ್ರಾರಂಭವಾಗುತ್ತದೆ. ಇದರಲ್ಲಿ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದ ರೈತರು ಪಾಲ್ಗೊಳ್ಳಲಿದ್ದಾರೆ. ಈ ರೈತರು ಸರ್ಕಾರ ವಶಪಡಿಸಿಕೊಂಡಿರುವ ತಮ್ಮ ಜಮೀನುಗಳಿಗೆ ಹೆಚ್ಚಿನ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿ ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ತಮ್ಮ ಬೇಡಿಕೆಗಳ ಬಗ್ಗೆ ಗಮನ ಸೆಳೆಯಲು ಅವರು ಸಂಸತ್ತಿಗೆ ಮೆರವಣಿಗೆ ನಡೆಸಲು ನಿರ್ಧರಿಸಿದ್ದಾರೆ.
ರೈತರು ದೆಹಲಿ ಗಡಿಯಲ್ಲಿ ಒಟ್ಟುಗೂಡುವುದನ್ನು ಮತ್ತು ದೆಹಲಿಗೆ ಪ್ರವೇಶಿಸುವುದನ್ನು ತಡೆಯಲು ನೋಯ್ಡಾ ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಜತೆಗೆ ವಾಹನ ಸವಾರರಿಗೆ ಸಂಚಾರ ಸಲಹೆಯನ್ನು ಸಹ ನೀಡಿದ್ದಾರೆ. ಭಾರತೀಯ ಕಿಸಾನ್ ಪರಿಷತ್ (BKP) ನೇತೃತ್ವದ ರೈತರು ಗುರುವಾರ ಮಧ್ಯಾಹ್ನ 12.30ಕ್ಕೆ ನೋಯ್ಡಾದ ಮಹಾಮಾಯಾ ಫ್ಲೈ ಓವರ್‌ನಲ್ಲಿ ಒಟ್ಟುಗೂಡುವುದಾಗಿ ಹೇಳಿದ್ದರು. “ಮಹಾಮಾಯಾ ಫ್ಲೈ ಓವರ್‌ನಿಂದ, ರೈತರು ನಮ್ಮ ದೀರ್ಘಕಾಲದ ಬೇಡಿಕೆಗಳನ್ನು ಒತ್ತಾಯಿಸಲು ದೆಹಲಿಯ ಸಂಸತ್ತಿನತ್ತ ಮೆರವಣಿಗೆ ನಡೆಸಲಿದ್ದಾರೆ” ಎಂದು ಬಿಕೆಪಿ ನಾಯಕ ಸುಖ್ಬೀರ್ ಯಾದವ್ ‘ಖಲೀಫಾ’ ಈ ಹಿಂದೆ ತಿಳಿಸಿದ್ದರು. ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಲ್ಲಿ ರೈತರ ಪ್ರತಿಭಟನೆಗೆ ಮುಂಚಿತವಾಗಿ ಗೌತಮ್ ಬುದ್ಧ ನಗರ ಪೊಲೀಸರು ಈಗಾಗಲೇ ಬುಧವಾರ ಮತ್ತು ಗುರುವಾರ ಸಿಆರ್‌ಪಿ ಸೆಕ್ಷನ್ 144 ಅನ್ನು ವಿಧಿಸಿದ್ದಾರೆ.
ಅಧಿಕಾರಿ ಹೇಳಿದ್ದೇನು?
ಹಿರಿಯ ಅಧಿಕಾರಿ ಶಿವಹರಿ ಮೀನಾ ಅವರು ಮಾತನಾಡಿ, ʼʼನೋಯ್ಡಾ-ದೆಹಲಿ ಗಡಿಗಳಲ್ಲಿ ಭಾರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಎಲ್ಲ ಗಡಿಗಳನ್ನು 24 ಗಂಟೆಗಳ ಕಾಲ ಮುಚ್ಚಲಾಗಿದೆ. ದೆಹಲಿ ಕಡೆಗೆ ಹೋಗುವ ಎಲ್ಲ ವಾಹನಗಳನ್ನು ಪರಿಶೀಲಿಸಲಾಗುತ್ತಿದೆ. ಸಾಮಾನ್ಯ ಜನರಿಗೆ ಯಾವುದೇ ತೊಂದರೆಯಾಗದಂತೆ ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ನಾವು ರೈತರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ. ಹರಿಯಾಣ ಪೊಲೀಸರು ರೈತರಿಗೆ ನೋಟಿಸ್ ನೀಡಿದ್ದು, ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಕೇಳಿಕೊಂಡಿದ್ದಾರೆ.
ಇದನ್ನೂ ಓದಿ: ದೇಶಕ್ಕೆ ಮನಮೋಹನ್ ಸಿಂಗ್ ಕೊಡುಗೆ ಅಪಾರ; ರಾಜ್ಯಸಭೆಯಲ್ಲಿ ಮೋದಿ ಬಣ್ಣನೆ
ಫೆಬ್ರವರಿ 13ರಂದು ಟ್ರ್ಯಾಕ್ಟರ್ ಮೆರವಣಿಗೆಯನ್ನು ಆಯೋಜಿಸಿರುವ ಹರಿಯಾಣ ಮತ್ತು ಪಂಜಾಬ್ ರೈತರು, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ಖಾತರಿಪಡಿಸುವ ಕಾನೂನು, ರೈತರಿಗೆ ಪಿಂಚಣಿ, ಬೆಳೆ ವಿಮೆ ಮತ್ತು 2020ರ ಪ್ರತಿಭಟನೆಯ ಸಮಯದಲ್ಲಿ ರೈತರ ವಿರುದ್ಧ ದಾಖಲಾದ ಎಫ್ಐಆರ್‌ಗಳನ್ನು ರದ್ದುಗೊಳಿಸುವಂತೆ ಬೇಡಿಕೆ ಮಂಡಿಸಲಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ