Site icon Vistara News

Delhi Mayor Election: ಮೇಯರ್‌ ಆಯ್ಕೆ ಕಗ್ಗಂಟು; ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ ಎಂದ ಸುಪ್ರೀಂ

Delhi Mayor Election

ನವದೆಹಲಿ: ದೆಹಲಿ ಮಹಾನಗರ ಪಾಲಿಕೆಯ ಮೇಯರ್‌ ಆಯ್ಕೆಗೆ (Delhi Mayor Election) ಕಗ್ಗಂಟು ಸೃಷ್ಟಿಯಾಗಿದೆ. ಮೇಯರ್‌ ಆಯ್ಕೆಗೆ ಇದುವರೆಗೆ ಮೂರು ಬಾರಿ ಸಭೆ ಕರೆದಿದ್ದರೂ, ಮೂರು ಬಾರಿಯೂ ಬಿಜೆಪಿ ಹಾಗೂ ಆಪ್‌ ಕೌನ್ಸಿಲರ್‌ಗಳ ಮಧ್ಯೆ ಗಲಾಟೆ ನಡೆದ ಕಾರಣ ಸಭೆ ಮುಂದೂಡಲಾಗಿದೆ. ಇದರ ಮಧ್ಯೆಯೇ, ಮೇಯರ್‌ ಆಯ್ಕೆಯ ಮತದಾನಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಮಹತ್ವದ ಉಲ್ಲೇಖ ಮಾಡಿದ್ದು, ಇದರಿಂದ ಬಿಜೆಪಿಗೆ ಹಿನ್ನಡೆಯಾದಂತಾಗಿದೆ.

“ದೆಹಲಿ ಮೇಯರ್‌ ಆಯ್ಕೆಗೆ ಮಹಾನಗರ ಪಾಲಿಕೆಯ ನಾಮನಿರ್ದೇಶಿತ ಸದಸ್ಯರಿಗೆ ಮತದಾನ ಮಾಡುವ ಹಕ್ಕಿಲ್ಲ. ಕಾನೂನಿನಲ್ಲಿ ಸ್ಪಷ್ಟವಾಗಿ ಹಕ್ಕಿಲ್ಲ ಎಂಬುದಾಗಿ ಹೇಳಲಾಗಿದೆ” ಎಂದು ಸುಪ್ರೀಂ ಕೋರ್ಟ್‌ ಮಹತ್ವದ ಉಲ್ಲೇಖ ಮಾಡಿದೆ. ಇದುವರೆಗೆ, ಪಾಲಿಕೆಯ ಸಭೆಯಲ್ಲಿ ಬಿಜೆಪಿಯ ನಾಮನಿರ್ದೇಶಿತ ಸದಸ್ಯರಿಗೆ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ಅವರು ಮೊದಲು ಮತದಾನ ಮಾಡಲು ಅವಕಾಶ ನೀಡಿದ ಕಾರಣ ಆಪ್‌ ಆಕ್ರೋಶ ವ್ಯಕ್ತಪಡಿಸಿದೆ. ಪ್ರತಿ ಸಭೆಯಲ್ಲಿಯೂ ನಾಮನಿರ್ದೇಶಿತ ಸದಸ್ಯರಿಗೆ ಮೊದಲು ಮತದಾನದ ಅವಕಾಶ ನೀಡಿದ ಕಾರಣ ಬೇಸತ್ತ ಆಪ್‌ ಕೋರ್ಟ್‌ ಮೊರೆ ಹೋಗಿದೆ. ಈಗ ಕೋರ್ಟ್‌ ಮಹತ್ವದ ಹೇಳಿಕೆ ನೀಡಿದೆ.

ಸುಪ್ರೀಂ ಕೋರ್ಟ್‌ ಸುಪರ್ದಿಯಲ್ಲಿಯೇ ಮಹಾನಗರ ಪಾಲಿಕೆ ಚುನಾವಣೆ ನಡೆಸಬೇಕು ಎಂಬುದಾಗಿ ಆಪ್‌ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಲು ಸರ್ವೋಚ್ಚ ನ್ಯಾಯಾಲಯ ಒಪ್ಪಿಗೆ ಸೂಚಿಸಿದ್ದು, ಶುಕ್ರವಾರಕ್ಕೆ (ಫೆಬ್ರವರಿ ೧7) ವಿಚಾರಣೆ ಮುಂದೂಡಿದೆ. ಮೇಯರ್‌ ಆಯ್ಕೆಗೆ ಜನವರಿ ೬, ೨೪ ಹಾಗೂ ಫೆಬ್ರವರಿ ೬ರಂದು ಸಭೆ ನಡೆಸಲಾಗಿತ್ತು. ಆದರೆ, ಬಿಜೆಪಿ-ಆಪ್‌ ಗಲಾಟೆಯಿಂದಾಗಿ ಆಯ್ಕೆ ಸಾಧ್ಯವಾಗಿಲ್ಲ.

ಇದನ್ನೂ ಓದಿ: Delhi Mayor Polls: ದಿಲ್ಲಿ ಮಹಾನಗರ ಪಾಲಿಕೆ ಸಭೆ ಮುಂದೂಡಿಕೆ, ಮತ್ತೆ ಆಯ್ಕೆಯಾಗಲಿಲ್ಲ ಮೇಯರ್! ಆಪ್ ಕೋರ್ಟ್ ಮೊರೆ?

Exit mobile version