ನವದೆಹಲಿ: ಮೇಯರ್ ಆಯ್ಕೆ ಹಿನ್ನೆಲೆಯಲ್ಲಿ ದಿಲ್ಲಿಯ ಮಹಾನಗರ ಪಾಲಿಕೆ(Municipal Corporation of Delhi- MCD)ಯಲ್ಲಿ ಶುಕ್ರವಾರ ಕೋಲಾಹಲ ಏರ್ಪಟ್ಟಿದೆ. ಆಮ್ ಆದ್ಮಿ ಪಾರ್ಟಿ(AAP) ಹಾಗೂ ಬಿಜೆಪಿ (BJP) ಸದಸ್ಯರು ಪರಸ್ಪರ ಘೋಷಣೆಗಳನ್ನು ಕೂಗುತ್ತಿದ್ದಾರೆ. ಪಾಲಿಕೆಯ ಕಲಾಪದ ನಡುವೆಯ ಪ್ರತಿಭಟನೆಗೆ ಮುಂದಾದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ ಎಂದು ತಿಳಿದು ಬಂದಿದೆ(Delhi Mayor Polls).
ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ತಾತ್ಕಾಲಿಕವಾಗಿ ಬಿಜೆಪಿಯ ಸತ್ಯಾ ಶರ್ಮಾ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡುತ್ತಿದ್ದಂತೆ ಸಭೆಯಲ್ಲಿ ಸಂಘರ್ಷ ಶುರುವಾಯಿತು. ಶರ್ಮಾ ಅವರು ಮೊದಲಿಗೆ, ನಾಮನಿರ್ದೇಶನಗೊಂಡ ಸದಸ್ಯರಿಗೆ ಪ್ರಮಾಣವಚನ ಬೋಧಿಸಲು ಮುಂದಾದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಪ್ ಸದಸ್ಯರು, ನಾಮನಿರ್ದೇಶನಗೊಂಡ ಸದಸ್ಯರಿಗಿಂತ ಮೊದಲು, ಚುನಾಯಿತ ಸದಸ್ಯರಿಗೆ ಪ್ರಮಾಣವಚನ ಬೋಧಿಸಬೇಕು ಎಂದು ಪಟ್ಟು ಹಿಡಿದರು. ಆಗ ಬಿಜೆಪಿ ಮತ್ತು ಆಪ್ ಸದಸ್ಯರ ಮಧ್ಯೆ ಜಟಾಪಟಿ ಶುರುವಾಯಿತು.
ಹೊಸದಾಗಿ ಚುನಾಯಿತವಾದ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್‌ಗೆ 10 ಸದಸ್ಯರನ್ನು ನಾಮನಿರ್ದೇಶನ ಮಾಡಲಾಗಿದೆ. ಸಕ್ಸೇನಾ ಅವರು ಶುಕ್ರವಾರ ಮೇಯರ್ ಚುನಾವಣೆಯ ಅಧ್ಯಕ್ಷತೆ ವಹಿಸಲು ಬಿಜೆಪಿ ಕೌನ್ಸಿಲರ್ ಸತ್ಯ ಶರ್ಮಾ ಅವರನ್ನು ತಾತ್ಕಾಲಿಕ ಸ್ಪೀಕರ್ ಎಂದು ಘೋಷಿಸಿದರು. ಮೇಯರ್ ಆಯ್ಕೆಯ ಹಿನ್ನೆಲೆಯು ಆಪ್ ಮತ್ತು ಬಿಜೆಪಿ ಸದಸ್ಯರ ಮಧ್ಯೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ.
ಇದನ್ನೂ ಓದಿ | Delhi MCD Election | ದೆಹಲಿಯಲ್ಲಿ ಬಿಜೆಪಿ ಲೋಕಲ್ ಕೋಟೆ ಭೇದಿಸಿದ ಆಪ್, ಗೆಲುವಿಗೆ ಪ್ರಮುಖ ಕಾರಣಗಳೇನು?