Site icon Vistara News

Delhi Mayoral Poll: ದಿಲ್ಲಿ ಮೇಯರ್‌ ಆಯ್ಕೆಗೆ ಕೊನೆಗೂ ಮುಹೂರ್ತ ಫಿಕ್ಸ್! ಬುಧವಾರ ನಡೆಯಲಿದೆ ಎಲೆಕ್ಷನ್

Delhi Mayoral Poll to be Held on February 22 after multiple postpones

ನವದೆಹಲಿ: ನಾಮನಿರ್ದೇಶನಗೊಂಡ ಸದಸ್ಯರಿಗೆ ಮತದಾನ ಹಕ್ಕು ಇಲ್ಲ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ಬೆನ್ನಲ್ಲೇ, ಫೆಬ್ರವರಿ 22, ಬುಧವಾರ ದಿಲ್ಲಿ ಮಹಾನಗರ ಪಾಲಿಕೆಯ(MCD) ಮೇಯರ್ ಎಲೆಕ್ಷನ್ (Delhi Mayoral Poll) ನಡೆಯಲಿದೆ. ಈ ಹಿಂದೆ ಮೂರು ಬಾರಿ ಮೇಯರ್ ಚುನಾವಣೆ ನಡೆಸಲು ಸಾಧ್ಯವಾಗಿರಲಿಲ್ಲ. ಬಹುಮತವನ್ನು ಹೊಂದಿರುವ ಆಮ್ ಆದ್ಮಿ ಪಾರ್ಟಿ(ಆಪ್) ನಾಮನಿರ್ದೇಶನಗೊಂಡ ಸದಸ್ಯರಿಗೆ ಮತದಾನ ಹಕ್ಕು ಇಲ್ಲ ಎಂದು ವಾದಿಸಿತ್ತು. ಆದರೆ, ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರು ನಾಮನಿರ್ದೇಶನಗೊಂಡ ಸದಸ್ಯರಿಗೂ ಮತದಾನಕ್ಕೆ ಅವಕಾಶ ಕಲ್ಪಿಸಿದ್ದರಿಂದ ಮೂರು ಬಾರಿಯೂ ಗದ್ದಲದಲ್ಲೇ ಸಭೆ ಮುಕ್ತಾಯವಾಗಿತ್ತು. ಅಂತಿಮವಾಗಿ ಆಮ್ ಆದ್ಮಿ ಪಾರ್ಟಿ ಈ ಸಂಬಂಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯವು, ನಾಮನಿರ್ದೇಶಿತ ಸದಸ್ಯರಿಗೆ ಮತದಾನ ಹಕ್ಕು ಇಲ್ಲ ಎಂದು ಫೆಬ್ರವರಿ 17ರಂದು ತೀರ್ಪು ನೀಡಿತ್ತು.

ಬುಧವಾರ ನಡೆಯುವ ಸಭೆಯಲ್ಲಿ ಮೇಯರ್ ಚುನಾವಣೆ ಜತೆಗೆ, ಉಪಮೇಯರ್ ಹಾಗೂ ಆರು ಸದಸ್ಯರ ಸ್ಥಾಯಿ ಸಮಿತಿಗಳಿಗೂ ಎಲೆಕ್ಷನ್ ನಡೆಯಲಿದೆ. ದಿಲ್ಲಿ ಗವರ್ನರ್ ವಿ ಕೆ ಸಕ್ಸೆನಾ ಅವರು ಸಭೆ ನಡೆಸಲು ಕಳೆದ ವಾರವೇ ಒಪ್ಪಿಗೆ ನೀಡಿದ್ದರು.

ಎಂಸಿಡಿ(ದಿಲ್ಲಿ ಮಹಾನಗರ ಪಾಲಿಕೆ)ಗೆ ಡಿಸೆಂಬರ್ 4ರಿಂದ ಚುನಾವಣೆ ನಡೆದು ಎರಡು ತಿಂಗಳಾಯಿತು. ಬಳಿಕ ಮೇಯರ್ ಎಲೆಕ್ಷನ್‌ಗಾಗಿ ಜನವರಿ 6ರಂದು ನಡೆದ ಮೊದಲ ಸಭೆಯಲ್ಲಿ ಆಪ್ ಮತ್ತು ಬಿಜೆಪಿ ನಡುವಿನ ಗದ್ದಲದಿಂದಾಗಿ ಸಭೆಯನ್ನು ಮುಂದೂಡಲಾಯಿತು. ಬಳಿಕ ಜನವರಿ 24 ಮತ್ತು ಫೆಬ್ರವರಿ 6ರಂದು ನಡೆದ ಸಭೆಗಳೂ ಉಭಯ ಪಕ್ಷಗಳ ನಡುವಿನ ಗದ್ದಲದಿಂದಾಗಿ ಮೇಯರ್ ಆಯ್ಕೆ ಮಾಡಲು ವಿಫಲವಾದವು. ಅಂತಿಮವಾಗಿ ಆಪ್ ಸುಪ್ರೀಂ ಕೋರ್ಟ್ ‌ಮೊರೆ ಹೋಯಿತು ಮತ್ತು ಕೋರ್ಟ್‌ ತೀರ್ಪಿನ ಬಳಿಕವಷ್ಟೇ ಸಮಸ್ಯೆ ಬಗೆಹರಿದಿದೆ.

ಇದನ್ನೂ ಓದಿ: Delhi Mayor Election: ಮೇಯರ್‌ ಆಯ್ಕೆ ಕಗ್ಗಂಟು; ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ ಎಂದ ಸುಪ್ರೀಂ

ಮೇಯರ್ ಇಲ್ಲದೇ ದೇಶದ ರಾಜಧಾನಿ ದಿಲ್ಲಿ ಸ್ಥಳೀಯ ಆಡಳಿತವು ಹದಗೆಟ್ಟಿದೆ. ನಾಗರಿಕ ಸಮಸ್ಯೆಗಳನ್ನು ಬಗೆಹರಿಸುವ ಕೆಲಸವಾಗುತ್ತಿಲ್ಲ ಎಂಬ ಆರೋಪಗಳಿವೆ. ಈ ಹಿಂದೆ ಆಡಳಿತ ನಡೆಸಿದ್ದ ಬಿಜೆಪಿ, ಚುನಾವಣೆಯಲ್ಲಿ ಸೋತು ತೀವ್ರ ಮುಖಭಂಗ ಎದುರಿಸಿತ್ತು. ಇದೀಗ ಆಪ್ ಬಹುಮತ ಪಡೆದುಕೊಂಡಿದೆ. ಯಾವುದೇ ಟ್ವಿಸ್ಟ್‌ಗಳು ಎದುರಾಗದೇ ಇದ್ದರೆ ಬಹುಶಃ ಬುಧವಾರ ಆಪ್‌ನ ಸದಸ್ಯರೊಬ್ಬರು ಮೇಯರ್ ಆಗಿ ಆಯ್ಕೆಯಾಗಲಿದ್ದಾರೆ.

Exit mobile version