ನವದೆಹಲಿ: ಮೂರು ವಿಫಲ ಪ್ರಯತ್ನಗಳ ಬಳಿಕ ಕೊನೆಗೂ ಬುಧವಾರ ದಿಲ್ಲಿ ಮೇಯರ್ ಎಲೆಕ್ಷನ್ (Delhi Mayoral Poll) ಯಶಸ್ವಿಯಾಗಿ ನಡೆದಿದೆ. ಆಮ್ ಆದ್ಮಿ ಪಾರ್ಟಿ(AAP)ಯ ಶೆಲ್ಲಿ ಒಬೆರಾಯ್ (Shelly Oberoi) ಅವರು 150 ಮತಗಳನ್ನು ಪಡೆದುಕೊಂಡು ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿಯ ಅಭ್ಯರ್ಥಿ ರೇಖಾ ಗುಪ್ತಾ ಅವರಿಗೆ ಕೇವಲ 34 ಮತಗಳು ದೊರೆತವು.
ನೂತನ್ ಮೇಯರ್ ಶೆಲ್ಲಿ ಒಬೆರಾಯ್ ಅವರಿಗೆ ಶುಭಾಶಯ ಕೋರಿದ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು, ಗೂಂಡಾಗಳಿಗೆ ಸೋಲಾಯಿತು. ಜನರು ಗೆದ್ದರು ಎಂದು ಹೇಳಿದ್ದಾರೆ. ಜಯದ ಬಳಿಕ ಮಾತನಾಡಿದ ಒಬೆರಾಯ್ ಅವರು, ಸಂವಿಧಾನಬದ್ಧವಾಗಿ ಸಭೆಯನ್ನು ನಡೆಸುವ ಭರವೆಯನ್ನು ನೀಡುತ್ತೇನೆ. ಸದನದ ಘನತೆಯನ್ನು ತಾವೆಲ್ಲರೂ ಕಾಪಾಡಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ:Delhi Mayor Polls: ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ ಎಂದ ಸುಪ್ರೀಂ, ಆಪ್‌ಗೆ ಭಾರಿ ಮುನ್ನಡೆ
274 ಸದಸ್ಯರ ದಿಲ್ಲಿ ಮಹಾನಗರ ಪಾಲಿಕೆಯಲ್ಲಿ ಆಪ್ 150 ಮತಗಳನ್ನು ಹೊಂದಿತ್ತು. ನಾಮನಿರ್ದೇಶಿತರಿಗೆ ಮತ ಚಲಾಯಿಸಲು ಅವಕಾಶ ನೀಡಿದರೆ, ಬಿಜೆಪಿಯ ಬಲವು 113 ರಿಂದ 123ಕ್ಕೆ ಏರಿಕೆಯಾಗುತ್ತಿತ್ತು. ಹಾಗಾಗಿ, ಬಿಜೆಪಿ ಬಹುಮತ 138ಕ್ಕೆ ಸಮೀಪಿಸುತ್ತಿತ್ತು. ಇದೇ ಕಾರಣಕ್ಕೆ ಕಳೆದ ಮೂರು ಬಾರಿಯ ಸಭೆಯಲ್ಲಿ ಆಪ್, ನಾಮನಿರ್ದೇಶಿತ ಸದಸ್ಯರಿಗೆ ಮತದಾನ ಹಕ್ಕಿಲ್ಲ ಎಂದು ವಾದಿಸುತ್ತಿತ್ತು. ಆದರೆ, ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ಅವರು ಮಾತ್ರ ನಾಮನಿರ್ದೇಸಿತ ಸದಸ್ಯರಿಗೂ ಮತದಾನ ಹಕ್ಕು ಕಲ್ಪಿಸಿದ್ದರು. ಅಂತಿಮವಾಗಿ ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿ, ನಾಮ ನಿರ್ದೇಶಿತ ಸದಸ್ಯರಿಗೆ ಮತದಾನ ಹಕ್ಕು ಇಲ್ಲ ಎಂದು ಹೇಳಿತ್ತು.