ನವ ದೆಹಲಿ: ದಿಲ್ಲಿಯ ರೋಹಿಣಿ ಶಹಾಬಾದ್ ಡೇರಿ ಪ್ರದೇಶದಲ್ಲಿ 16 ವರ್ಷದ ಬಾಲಕಿಗೆ 21 ಬಾರಿ ಚಾಕು ಇರಿದು, ಆಕೆಯ ತಲೆಯನ್ನು ಜಜ್ಜಿ, ಕೊಲೆ ಮಾಡಿರುವ ಸಾಹಿಲ್, 3 ದಿನಗಳಿಂದಲೇ ಸಂಚು ನಡೆಸಿದ್ದ ಎಂಬ ಸಂಗತಿ ಪೊಲೀಸರ ತನಿಖೆಯಿಂದ (Delhi Murder) ಗೊತ್ತಾಗಿದೆ. ಆರಂಭದಲ್ಲಿ ಇದೊಂದು ಹಠಾತ್ ನಡೆಸಿದ ಕೊಲೆ ಎಂದು ಭಾವಿಸಲಾಗಿತ್ತು. ಆದರೆ ಇದೀಗ ಹತ್ಯೆ ಪೂರ್ವನಿಯೋಜಿತ ಎಂದು ತಿಳಿದುಬಂದಿದೆ.
ಪಶ್ಚಿಮ ದಿಲ್ಲಿಯ ರೋಹಿಣಿ ಶಹಾಬಾದ್ ಡೇರಿ ಪ್ರದೇಶದಲ್ಲಿ ಭಾನುವಾರ ನಡೆದ ಬರ್ಬರ ಹತ್ಯೆ ಇಡೀ ದೇಶವನ್ನು ಬೆಚ್ಚಿಬೀಳಿಸಿತ್ತು. ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಕೊಲೆಗೂ ಮುನ್ನ ಹಂತಕ ಸಾಹಿಲ್, ಬಾಲಕಿ ಜತೆ ಜಗಳ ಮಾಡಿದ್ದ. ಹತ್ಯೆಗೆ ಬಳಸಿದ ಚೂರಿಯನ್ನು ಪೊಲೀಸರು ವಶಪಡಿಸಿಕೊಳ್ಳಬೇಕಾಗಿದೆ. ಆದರೆ ಮೊಬೈಲ್ ಫೋನನ್ನು, ರಕ್ತಸಿಕ್ತ ಬಟ್ಟೆಬರೆಗಳನ್ನು ವಶಪಡಿಸಿದ್ದಾರೆ. ಬಾಲಕಿ ಮತ್ತು ಆತನ ನಡುವೆ ನಡೆದ ಫೋನ್ ಸಂಭಾಷಣೆಗಳ ದಾಖಲೆ ಪಡೆದುಕೊಂಡಿದ್ದಾರೆ. ಕೊಲೆ ನಡೆಯುತ್ತಿದ್ದುದನ್ನು ಕಂಡರೂ ದಾರಿಹೋಕರು ಬಾಲಕಿಯ ರಕ್ಷಣೆಗೆ ಮುಂದಾಗಿರಲಿಲ್ಲ. ನೋಡನೋಡುತ್ತಿದ್ದಂತೆ ಭೀಕರ ಹತ್ಯೆ ನಡೆದಿತ್ತು. ಸಾಹಿಲ್ ಹರಿದ್ವಾರದಿಂದ ಚೂರಿಯನ್ನು ತಂದಿದ್ದ. ಆದರೆ ಅದನ್ನು ಯಾವಾಗ, ಏಕೆ ಖರೀದಿಸಿದ್ದ ಎಂಬುದು ಗೊತ್ತಾಗಿಲ್ಲ.
ಬಾಲಕಿ ನನ್ನನ್ನು ಕಡೆಗಣಿಸಿ ಅವಮಾನಿಸಿದ್ದಳು, ಈ ಸೇಡು ತೀರಿಸಲು ಬಯಸಿದ್ದೆ ಎಂದು ಸಾಹಿಲ್ ಪೊಲೀಸರ ಬಳಿ ಹೇಳಿದ್ದಾನೆ ಎಂದು ಪೊಲೀಸ್ ಆಯುಕ್ತ ದೀಪೇಂದ್ರ ಪಾಠಕ್ ತಿಳಿಸಿದ್ದಾರೆ. ಇದು ಪೂರ್ವನಿಯೋಜಿತ ಕೊಲೆಯಾಗಿದ್ದು, ಆರೋಪಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು. ತನಿಖಾಧಿಕಾರಿಗಳು ಶೀಘ್ರ ಘಟನೆಯ ಮರು ಸೃಷ್ಟಿ ನಡೆಸಲಿದ್ದಾರೆ. ತನಿಖೆ ಮುಂದುವರಿಯಲಿದೆ ಎಂದು ಅವರು ವಿವರಿಸಿದ್ದಾರೆ.
ಇದನ್ನೂ ಓದಿ: Delhi Murder: ಮಾಜಿ ಗೆಳತಿಗೆ 21 ಬಾರಿ ಚಾಕು ಇರಿದು ಕೊಂದಿದ್ದಕ್ಕೆ ಪಶ್ಚಾತ್ತಾಪ ಇಲ್ಲ ಎಂದ ಆರೋಪಿ ಸಾಹಿಲ್
ಬರ್ಬರ ಕೊಲೆ ನಡೆಸಿದ ಬಳಿಕ ಸಾಹಿಲ್ ರಿಥಾಲಾ ಮೆಟ್ರೊ ಸ್ಟೇಶನ್‌ಗೆ ಹೋಗಿದ್ದ. ಅಲ್ಲಿಯೇ ಚೂರಿಯನ್ನು ಬಿಸಾಡಿದ್ದ. ಬಳಿಕ ಆನಂದ್ ವಿಹಾರಕ್ಕೆ ಮೆಟ್ರೊ ರೈಲು ಹತ್ತಿದ್ದ. ಬಳಿಕ ಉತ್ತರಪ್ರದೇಶದ ಬುಲೆಂದ್‌ಶಹರ್‌ನಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದ. ಸೋಮವಾರ ಆತನನ್ನು ಬಂಧಿಸಲಾಯಿತು.
ಪೊಲೀಸ್ ವಿಚಾರಣೆ ವೇಳೆ, ತನ್ನ ಮಾಜಿ ಗೆಳತಿಯನ್ನು ಕೊಲೆ ಮಾಡಿದ್ದಕ್ಕೆ ಯಾವುದೇ ಪಶ್ಚಾತ್ತಾಪ ಇಲ್ಲ ಎಂದು ಆರೋಪಿ ಹೇಳಿದ್ದಾನೆ. ಈ ಮಧ್ಯೆ, ಕೊಲೆ ಮಾಡುವ 1 ನಿಮಿಷಕ್ಕೂ ಮೊದಲು ಆತ ತನ್ನ ಸ್ನೇಹಿತನೊಂದಿಗೆ ಮಾತನಾಡುತ್ತ ನಿಂತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸೋಮವಾರ ದಿಲ್ಲಿ ಕೋರ್ಟ್‌ನಲ್ಲಿ ಹಾಜರುಪಡಿಸಿದ ಬಳಿಕ ನ್ಯಾಯಾಲಯ ಎರಡು ದಿನಗಳ ಪೊಲೀಸ್ ಕಸ್ಟಡಿಗೆ ವಹಿಸಿದೆ.
16ವರ್ಷದ ಬಾಲಕಿ ಮತ್ತು 20ವರ್ಷದ ಯುವಕ ಮೊಹಮ್ಮದ್ ಸಾಹಿಲ್ ಪ್ರೀತಿಸುತ್ತಿದ್ದರು, ಇತ್ತೀಚೆಗೆ ಇವರಿಬ್ಬರ ಮಧ್ಯೆ ಜಗಳವಾಗಿತ್ತು ಎಂದು ಹೇಳಲಾಗಿದೆ. ಭಾನುವಾರ ರಾತ್ರಿ ಸುಮಾರು 8.45ರ ಹೊತ್ತಿಗೆ ಸಾಕ್ಷಿ ತನ್ನ ಸ್ನೇಹಿತೆಯ ಮಗನ ಹುಟ್ಟುಹಬ್ಬದ ಪಾರ್ಟಿಗೆಂದು ಆಕೆಯ ಮನೆಗೆ ಹೋಗುತ್ತಿದ್ದಳು. ಮಾರ್ಗ ಮಧ್ಯೆ ಅಡ್ಡಗಟ್ಟಿದ್ದ ಸಾಹಿಲ್ ಈ ಕೃತ್ಯ ನಡೆಸಿದ್ದಾನೆ. ಬಾಲಕಿಯನ್ನು ಕೊಂದ ಮೊಹಮ್ಮದ್ ಸಾಹಿಲ್ ತಕ್ಷಣವೇ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು, ಸ್ಥಳದಿಂದ ಪರಾರಿಯಾಗಿದ್ದ. ಹಲವರು ಇವರಿಬ್ಬರ ಜಗಳ ನೋಡಿಕೊಂಡು ಹೋಗಿದ್ದಾರೆ ಹೊರತು, ಯಾರೊಬ್ಬರೂ ಅಲ್ಲಿ ನಿಂತು, ಏನಾಯಿತು? ಎಂದು ಕೇಳಿಲ್ಲ. ಅವರಿಬ್ಬರ ಮಧ್ಯೆ ಆಗುತ್ತಿರುವ ಗಲಾಟೆಯನ್ನು ಬಿಡಿಸಲಿಲ್ಲ ಎಂದು ವರದಿಯಾಗಿದೆ. ಹಾಗೇ, ದೆಹಲಿ ಮಹಿಳಾ ಆಯೋಗ ಈ ಕೇಸ್ನ್ನು ಗಂಭೀರವಾಗಿ ಪರಿಗಣಿಸಿದ್ದು, ಪೊಲೀಸರಿಗೆ ನೋಟಿಸ್ ನೀಡಿದೆ.