ನವದೆಹಲಿ: ದಿಲ್ಲಿಯ ಕುಖ್ಯಾತ ಗ್ಯಾಂಗ್‌ಸ್ಟರ್ ಹಾಗೂ ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದೀಪಕ್ ಬಾಕ್ಸರ್‌ನನ್ನು (Deepak Boxer) ಮೆಕ್ಸಿಕೋದಲ್ಲಿ (Mexico) ಸೆರೆ ಹಿಡಿಯಲಾಗಿದೆ. ಈ ವಾರದಲ್ಲಿ ಆತನನ್ನು ಭಾರತಕ್ಕೆ ಕರೆ ತರಲಾಗುತ್ತದೆ. ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್(FBI) ನೆರವಿನೊಂದಿಗೆ ದಿಲ್ಲಿಯ ವಿಶೇಷ ಪೊಲೀಸ್ (Delhi Police) ತಂಡವು ಮೆಕಿಕ್ಸಿಕೋದಲ್ಲಿ ಕಾರ್ಯಾಚರಣೆ ನಡೆಸಿ, ಗ್ಯಾಂಗ್‌ಸ್ಟರ್ ದೀಪಕ್ ಬಾಕ್ಸರ್‌ನನ್ನು ಬಂಧಿಸಿದೆ.
ಒಂದೆರಡು ದಿನಗಳಲ್ಲಿ ಬಂಧಿತ ಗ್ಯಾಂಗ್‌ಸ್ಟರ್ ಬಾಕ್ಸರ್‌ನನ್ನು ಭಾರತಕ್ಕೆ ಕರೆ ತರಲಾಗುವುದು. ದಿಲ್ಲಿ-ಎನ್‌ಸಿಆರ್‌ನ ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್‌ಗಳ ಪೈಕಿ ದೀಪಕ್ ಕೂಡ ಒಬ್ಬನಾಗಿದ್ದಾನೆ. ನಕಲಿ ಪಾಸ್‌ಪೋರ್ಟ್ ಬಳಸಿಕೊಂಡು ಆತ ದೇಶದಿಂದ ಪಲಾಯನ ಮಾಡಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದೇ ಮೊದಲ ಬಾರಿಗೆ ದಿಲ್ಲಿ ಪೊಲೀಸರು ಭಾರತದ ದೇಶದಿಂದ ಆಚೆಗೆ ಗ್ಯಾಂಗ್‌ಸ್ಟರ್‌ನನ್ನು ಅರೆಸ್ಟ್ ಮಾಡಿದ್ದಾರೆ.
2022ರ ಆಗಸ್ಟ್ ತಿಂಗಳಿನಿಂದ ದೀಪಕ್ ದೇಶವನ್ನು ತೊರೆದಿದ್ದಾನೆ. ಬಿಲ್ಡರ್ ಅಮಿತ್ ಗುಪ್ತಾ ಎಂಬುವವರನ್ನು ಈತ ಕೊಲೆ ಮಾಡಿದ್ದಾರೆ. ದಿಲ್ಲಿಯ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಬಿಲ್ಡರ್ ಗುಪ್ತಾನಿಗೆ ಅನೇಕ ಬಾರಿ ಗುಂಡು ಹಾರಿಸಿ ಕೊಲೆ ಮಾಡಿದ್ದ. ಬಳಿಕ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ ದೀಪಕ್, ಅಮಿತ್ ಗುಪ್ತಾನನ್ನು ನಾನೇ ಕೊಲೆ ಮಾಡಿದ್ದು, ಈ ಕೊಲೆಗೆ ಹಣ ವಸೂಲಿ ಕಾರಣವಲ್ಲ. ಬದಲಿಗೆ ದ್ವೇಷ ಸಾಧನೆ ಎಂದು ಹೇಳಿಕೊಂಡಿದ್ದ. ಗುಪ್ತಾ, ತನ್ನ ಎದುರಾಳಿ ಟಿಲ್ಲು ತಜ್ಪುರಿಯಾ ಗ್ಯಾಂಗ್‌ನೊಂದಿಗೆ ಸೇರಿಕೊಂಡಿದ್ದ. ಈ ಗ್ಯಾಂಗ್‌ಗೆ ಫೈನಾನ್ಶಿಯರ್ ರೀತಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ದೀಪಕ್ ಹೇಳಿಕೊಂಡಿದ್ದ. ಆ ಬಳಿಕ ಆತ ತಲೆಮರೆಸಿಕೊಂಡಿದ್ದ. ಅಲ್ಲದೇ ನಕಲಿ ಪಾಸ್‌ಪೋರ್ಟ್ ಬಳಸಿಕೊಂಡು ದೇಶವನ್ನು ತೊರೆದಿದ್ದ.
ಗೋಗಿ ಗ್ಯಾಂಗ್ ಲೀಡರ್ ದೀಪಕ್ ಬಾಕ್ಸರ್
ಮೆಕ್ಸಿಕೋದಲ್ಲಿ ಬಂಧಿತನಾಗಿರುವ ಗ್ಯಾಂಗ್‌ಸ್ಟರ್ ದೀಪಕ್ ಬಾಕ್ಸರ್, ಗೋಗಿ ಎಂಬ ಗ್ಯಾಂಗ್‌ನ ಲೀಡರ್ ಆಗಿದ್ದ. 2021ರಲ್ಲಿ ಜೀತೇಂದ್ರ ಗೋಗಿ ಕೊಲೆಯಾದ ಬಳಿಕ, ಆತನ ಸ್ಥಾನವನ್ನು ಆಕ್ರಮಿಸಿಕೊಂಡಿದ್ದ. ಟಿಲ್ಲು ಗ್ಯಾಂಗ್‌ನ ಗ್ಯಾಂಗ್‌ಸ್ಟರ್‌ಗಳು ಜೀತೇಂದ್ರ ಗೋಗಿಯನ್ನು ಹೊಡೆದುರುಳಿಸಿದ್ದರು. ನ್ಯಾಯವಾದಿಯ ವೇಷದಲ್ಲಿ ನ್ಯಾಯಾಲಯವನ್ನು ಪ್ರವೇಶಿಸುವಾಗ ಈ ಗ್ಯಾಂಗ್‌ಸ್ಟರ್‌ಗಳು ಗೋಗಿಯನ್ನು ಕೊಂದು ಹಾಕಿದ್ದರು.
ಇದನ್ನೂ ಓದಿ: 2006ರ ಅಪಹರಣ ಪ್ರಕರಣ: ಗ್ಯಾಂಗ್‌ಸ್ಟರ್, ರಾಜಕಾರಣಿ ಅತೀಕ್ ಅಹ್ಮದ್ಗೆ ಜೀವಾವಧಿ ಶಿಕ್ಷೆ, ಸಹೋದರನ ಖುಲಾಸೆ
ದೀಪಕ್ ಬಾಕ್ಸರ್ ಜನವರಿ 29 ರಂದು ಕೋಲ್ಕೊತಾದಿಂದ ರವಿ ಆಂಟಿಲ್ ಎಂಬ ಹೆಸರಿನಿಂದ ಮೆಕ್ಸಿಕೋಗೆ ವಿಮಾನ ಮೂಲಕ ಪ್ರಯಾಣ ಮಾಡಿದ್ದ. ಇದಕ್ಕಾಗಿ ಆತ ಫೇಕ್ ಪಾಸ್‌ಪೋರ್ಟ್ ಬಳಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈತ ಹುಡುಕಿಕೊಟ್ಟವರಿಗೆ 3 ಲಕ್ಷ ರೂ. ಬಹುಮಾನವನ್ನು ದಿಲ್ಲಿ ಪೊಲೀಸರು ಘೋಷಿಸಿದ್ದರು.