Site icon Vistara News

Delhi Police: 22 ವರ್ಷಗಳ ಬಳಿಕ ಸೆರೆ ಸಿಕ್ಕ ಸಿಮಿ ಉಗ್ರ ಹನೀಫ್ ಶೇಖ್! ಅರೆಸ್ಟ್ ಆಗಿದ್ದು ಹೇಗೆ?

Delhi Police arrested SIMI terrorist after 22 years manhunt

ನವದೆಹಲಿ: ನಿಷೇಧಿತ ಸಿಮಿ (SIMI) ಉಗ್ರ ಸಂಘಟನೆಯ ಉಗ್ರ ಹನೀಫ್ ಶೇಖ್‌ನನ್ನು (Terrorist Hanif Shaikh arrested) ದಿಲ್ಲಿ ಪೊಲೀಸರು 22 ವರ್ಷಗಳ ಬಳಿಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ(Delhi Police). 2001ರಲ್ಲಿ ಶೇಖ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿಯಲ್ಲಿ ಪ್ರಕರಣಗಳು ದಾಖಲಾಗಿದ್ದವು ಮತ್ತು ಆತನ ವಿರುದ್ಧ ದೇಶದ್ರೋಹ ಆರೋಪ ಹೊರಿಸಲಾಗಿತ್ತು. ಅಂದಿನಿಂದಲೂ ಆತನ ಹುಡುಕಾಟವನ್ನು ದಿಲ್ಲಿ ಪೊಲೀಸರು ನಡೆಸಿದ್ದಾರೆ. ಅಂತಿಮವಾಗಿ 22 ವರ್ಷಗಳ ಬಳಿಕ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ.

ಶೇಖ್ ಸಿಮಿ ಸಂಘಟನೆಯ ‘ಇಸ್ಲಾಮಿಕ್ ಮೂವ್‌ಮೆಂಟ್’ ನಿಯತಕಾಲಿಕದ ಉರ್ದು ಆವೃತ್ತಿಯ ಸಂಪಾದಕನಾಗಿದ್ದ. ಕಳೆದ 25 ವರ್ಷಗಳಲ್ಲಿ ತನ್ನ ಬೋಧನೆಗಳ ಮೂಲಕ ಹಲವಾರು ಯುವ ಮುಸ್ಲಿಮರನ್ನು ಉಗ್ರಗಾಮಿಗಳನ್ನಾಗಿ ಪರಿವರ್ತಿಸುವಲ್ಲಿಯ ಯಶಸ್ವಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಶೇಖ್ ಹನೀಫ್ ಬಗ್ಗೆ ಪೊಲೀಸರ ಬಳಿ ಯಾವುದೇ ಮಾಹಿತಿ ಇರಲಿಲ್ಲ. ಇಸ್ಲಾಮಿಕ್ ಮೂವ್ ಮೆಂಟ್ ಎಂಬ ಪತ್ರಿಕೆಯಲ್ಲಿ ಪ್ರಕಟವಾದ “ಹನೀಫ್ ಹುದಾಯಿ” ಎಂಬ ಹೆಸರು ಮಾತ್ರ ಸುಳಿವಾಗಿ ಸಿಕ್ಕಿತ್ತು. ಇದರಿಂದ ಆತನನ್ನು ಗುರುತಿಸುವುದು ಅಷ್ಟು ಸಲುಭವಾಗಿರಲಿಲ್ಲ. ಸಿಮಿ ಸಂಘಟನೆಯ ಭಯಾನಕ ಉಗ್ರನಾಗಿದ್ದ ಶೇಖ್ ಮಹಾರಾಷ್ಟ್ರದ ಭುಸ್ವಾಲ್‌ನಲ್ಲಿ ವಾಸಿಸುತ್ತಿದ್ದ ಎಂದು ಸ್ಪೆಷಲ್ ಸೆಲ್‌ನ ಡೆಪ್ಯುಟಿ ಕಮಿಷನರ್ ಅಂಕಿತ್ ಸಿಂಗ್ ಅವರು ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ದೇಶವಿರೋಧಿ ಕೃತ್ಯ ನಡೆಸಿದ್ದಕ್ಕಾಗಿ ಯುಎಪಿಎ ಅಡಿಯಲ್ಲಿ ಈತನ ವಿರುದ್ಧ ಪ್ರಕರಣಗಳ ದಾಖಲಾಗಿವೆ.

ಈತ ಮಹಾರಾಷ್ಟ್ರ, ಮಧ್ಯಪ್ರದೇಶ, ದೆಹಲಿ, ಕರ್ನಾಟಕ ಮತ್ತು ಕೇರಳದಲ್ಲಿ ಸಂಘಟಿಸಲಾಗುತ್ತಿದ್ದ ಸಿಮಿ ಸಭೆಗಳಲ್ಲಿ ಭಾಗವಹಿಸುತ್ತಿದ್ದ. 2002 ರಲ್ಲಿ ದೆಹಲಿ ನ್ಯಾಯಾಲಯವು ಈತನನ್ನು ತಲೆಮರೆಸಿಕೊಂಡಿರುವ ಅಪರಾಧಿ ಎಂದು ಘೋಷಿಸಿತ್ತು. ಕಳೆದ ನಾಲ್ಕು ವರ್ಷಗಳಿಂದ ಆತನನ್ನು ಹುಡುಕುತ್ತಿದ್ದ ಪೊಲೀಸರ ತಂಡಕ್ಕೆ ಶೇಖ್ ತನ್ನ ಗುರುತು ಬದಲಿಸಿಕೊಂಡು ಈಗ ಮೊಹಮ್ಮದ್ ಹನೀಫ್ ಆಗ ಬದಲಾಗಿದ್ದಾನೆ ಎಂದು ಮಾಹಿತಿ ದೊರೆತಿತ್ತು.

ಮಹಾರಾಷ್ಟ್ರದ ಭುಸವಾಲ್‌ನಲ್ಲಿ ಉರ್ದು ಮಾಧ್ಯಮ ಮುನ್ಸಿಪಲ್ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಈ ಮಾಹಿತಿ ಸಿಗುತ್ತಿದ್ದಂತೆ ದಿಲ್ಲಿ ಪೊಲೀಸರು ಬಲೆ ಹೆಣೆದು, ಫೆಬ್ರವರಿ 22ರಂದು ಮಹಾರಾಷ್ಟ್ರದ ಭುಸವಾಲ್‌ನಿಂದ ಆತನನ್ನು ಅರೆಸ್ಟ್ ಮಾಡಿದರು.

ಹನೀಫ್ ಶೇಖ್ 1997ರಲ್ಲಿ ಮರುಲ್ ಜಲಗಾಂವ್‌ನಿಂದ ಡಿಪ್ಲೋಮಾ ಪಡೆದಿದ್ದಾನೆ. ಅದೇ ವರ್ಷ ಆತ ಸಿಮಿ ಸಂಘಟನೆಗೆ ಅನ್ಸಾರ್(ಪೂರ್ಣಾವಧಿ) ಕಾರ್ಯಕರ್ತನಾಗಿ ಸೇರಿಕೊಂಡ. ಸಿಮಿ ಕಾರ್ಯಕರ್ತರೊಂದಿಗೆ ಸಂಪರ್ಕ ಬರುತ್ತಿದ್ದಂತೆ ಭಾರೀ ತೀವ್ರಗಾಮಿಯಾಗಿ ಬದಲಾದ. ಸಂಘಟನೆ ನಡೆಸುವ ಸಭೆಗಳಲ್ಲಿ ಭಾಗವಹಿಸ ತೊಡಗಿದ ಮತ್ತು ಮುಸ್ಲಿಮ್ ಯುವಕರನ್ನು ಉಗ್ರರಾಗಲು ಪ್ರೋಯಚಿಸುತ್ತಿದ್ದ ಮತ್ತು ಅವರನ್ನು ಸಂಘಟನೆಗೆ ಸೇರಿಸಿಕೊಳ್ಳುತ್ತಿದ್ದ. ಈತ ಉತ್ಸಾಹ ಹಾಗೂ ಕಾರ್ಯತತ್ಪರತೆ ಕಂಡು ಸಂಘಟನೆಯ ಮುಖ್ಯಸ್ಥನಾಗಿದ್ದ ಶಹೀದ್ ಬಾದರ್, ಇಸ್ಲಾಮಿಕ್ ಮೂವ್‌ಮೆಂಟ್‌ನ ಉರ್ದು ಆವೃತ್ತಿಗೆ ಸಂಪಾದಕನಾಗಿ 2001ರಲ್ಲಿ ನೇಮಕನಾಗಿದ್ದ.

ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಸಿಮಿ ನಿಷೇಧಿಸಿದರೆ ಸಾಲದು, ಇದರ ತಳಿಗಳನ್ನೂ ನಿಗ್ರಹಿಸಬೇಕು

Exit mobile version