ನವದೆಹಲಿ: ಡಿಸೆಂಬರ್ 13ರಂದು ಸಂಭವಿಸಿದ ಸಂಸತ್ ಭದ್ರತಾ ವೈಫಲ್ಯ ಪ್ರಕರಣಕ್ಕೆ (Parliament Security Breach) ಸಂಬಂಧಿಸಿದಂತೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ (MP Pratap Simha) ಅವರ ಹೇಳಿಕೆಯನ್ನು (Statement) ದಿಲ್ಲಿ ಪೊಲೀಸರು (Delhi Police) ದಾಖಲಿಸಿಕೊಂಡಿದ್ದಾರೆ. ಲೋಕಸಭೆಯಲ್ಲಿ ಹೊಗೆ ಬಾಂಬ್ ಸಿಡಿಸಿದ ಇಬ್ಬರು ಯುವಕರು ಸಂಸದ ಪ್ರತಾಪ್ ಅವರ ಮೂಲಕವೇ ಪಾಸ್ (Visitor Pass) ಪಡೆದುಕೊಂಡಿದ್ದರು. ಲೋಕಸಭೆಗೆ ನುಗ್ಗಿದ ಇಬ್ಬರು ಆರೋಪಿಗಳ ಪೈಕಿ ಡಿ ಮನೋರಂಜನ್ ಕೂಡ ಮೈಸೂರಿನವರೇ ಆಗಿದ್ದಾನೆ!
ಪ್ರತಾಪ್ ಸಿಂಹ ಹೇಳಿಕೆಯನ್ನು ದಾಖಲಿಸಿಕೊಂಡ ದಿಲ್ಲಿ ಪೊಲೀಸರು, ಮೈಸೂರಿನ ಆರೋಪಿ ಮನೋರಂಜನ್‌ಗೆ ಪಾಸ್ ನೀಡಿರುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಮನೋರಂಜನ್ ನಿಮಗೆ ಹೇಗೆ ಪರಿಚಯ, ಎಷ್ಟು ಬಾರಿ ಆತ ನಿಮ್ಮನ್ನ ಭೇಟಿ ಮಾಡಿದ್ದಾನೆ, ಮನೋರಂಜನ್‌ಗೆ ಎಷ್ಟು ಬಾರಿ ಪಾಸ್ ನೀಡಲಾಗಿದೆ ಎಂಬಿತ್ಯಾದಿ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಹಾಗೆಯೇ, ಮನೋರಂಜನ್ ತಂದೆ ಮತ್ತು ಕುಟುಂಬದ ಬಗ್ಗೆಯೂ ಪ್ರತಾಪ್ ಸಿಂಹ ಅವರಿಂದ ಮಾಹಿತಿಯನ್ನು ಪಡೆಯಲಾಗಿದೆ. ಪಾಸ್ ಪಡೆದುಕೊಳ್ಳಲು ನಿಮ್ಮನ್ನ ಭೇಟಿ ಮಾಡಿದ್ದು ಎಲ್ಲಿ, ನಿಮ್ಮ ಕಚೇರಿಗೆ ಎಷ್ಟು ಬಾರಿ ಬಂದು ಹೋಗಿದ್ದ ಮನೊರಂಜನ್ ಎಂಬಿತ್ಯಾದಿ ಪ್ರಶ್ನೆಗಳನ್ನು ಮಾಡಿದ್ದಾರೆಂದು ತಿಳಿದು ಬಂದಿದೆ. ಅಲ್ಲದೇ, ಜೊತೆಗೆ ಸಿಸಿ ಟಿವಿಯ ರೆಕಾರ್ಡ್‌ಗಳನ್ನು ಪೂರೈಸುವಂತೆ ದಿಲ್ಲಿ ಪೊಲೀಸರು ಸೂಚಿಸಿದ್ದಾರೆಂದು ತಿಳಿದು ಬಂದಿದೆ.
ಈ ಸುದ್ದಿಯನ್ನೂ ಓದಿ: Security breach in Lok Sabha: ಸಂಸತ್ ಭದ್ರತಾ ವೈಫಲ್ಯ ಕುರಿತು ತನಿಖೆಗೆ ಆದೇಶಿಸಿದ ಕೇಂದ್ರ ಸರ್ಕಾರ
ಮೂರು ದಿನಗಳ ಹಿಂದೆ ದಿಲ್ಲಿ ಪೊಲೀಸರು ಆರೋಪಿ, ಮನೋರಂಜನ್ ಅವರ ತಂದೆ, ತಾಯಿಯನ್ನು ತೀವ್ರ ವಿಚಾರಣೆಗೊಳಪಡಿಸಿದ್ದರು. ದೆಹಲಿ ಪೊಲೀಸರು ಮನೋರಂಜನ್ ಪೋಷಕರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಪೋಷಕರನ್ನು ಎರಡು ದಿನಗಳ ಕಾಲ ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆಗೆ ಪೋಷಕರಿಗೆ ಸಾಲು- ಸಾಲು ಪ್ರಶ್ನೆಗಳನ್ನು ಹಾಕಲಾಗಿದೆ.
ತಂದೆ- ತಾಯಿಯನ್ನು ಪ್ರತ್ಯೇಕವಾಗಿ ಕರೆದು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಸ್ಥಳೀಯ ಭಾಷಾಂತರಕಾರರಿಂದ ತಂದೆ- ತಾಯಿಗೆ ಪ್ರಶ್ನೆ ಹಾಕಿಸಲಾಗಿದ್ದು, ತಾವು ನೀಡಿದ ಹೇಳಿಕೆಗಳನ್ನು ವಿಡಿಯೋ ಮೂಲಕ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಮನೋರಂಜನ್ ಮನೆಯಿಂದ ಆತ ಓದುತ್ತಿದ್ದ ಪುಸ್ತಕಗಳು, ಶಾಲಾ- ಕಾಲೇಜು ದಾಖಲೆಗಳು ಇತ್ಯಾದಿ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಈ ಸುದ್ದಿ ಕುರಿತು ನಿಮ್ಮ ಅನಿಸಿಕೆ ಏನು, ಕಮೆಂಟ್ ಮಾಡಿ ತಿಳಿಸಿ.