Site icon Vistara News

Delhi Services Bill: ರಾಜ್ಯಸಭೆಯಲ್ಲೂ ದಿಲ್ಲಿ ಸರ್ವೀಸಸ್ ಬಿಲ್‌ಗೆ ಒಪ್ಪಿಗೆ, ಕೇಂದ್ರಕ್ಕೇ ಅಧಿಕಾರಿಗಳ ವರ್ಗಾವಣೆ ಅಧಿಕಾರ

Delhi Services bill passed rajya sabha too

ನವದೆಹಲಿ: ಲೋಕಸಭೆ (Lok Sabha) ಒಪ್ಪಿಗೆ ನೀಡಿದ್ದ 2023ರ ದಿಲ್ಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರ್ಕಾರ ತಿದ್ದುಪಡಿ(ದಿಲ್ಲಿ ಸರ್ವೀಸಸ್‌ ಬಿಲ್ – Delhi Services Bill ) ವಿಧೇಯಕಕ್ಕೆ ರಾಜ್ಯಸಭೆ (Rajya Sabha) ಕೂಡ ತನ್ನ ಅಂಗೀಕಾರ ನೀಡಿದೆ. ದಿಲ್ಲಿ ಸರ್ಕಾರದಲ್ಲಿನ ಹಿರಿಯ ಅಧಿಕಾರಿಗಳ ನಿಯೋಜನೆ ಮತ್ತು ವರ್ಗಾವಣೆ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ (Central Government) ನೀಡುವ ಸುಗ್ರೀವಾಜ್ಞೆ (Delhi ordinance) ಈಗ ಕಾಯ್ದೆಯಾಗಿ ಬದಲಾಗಿದೆ. ಈ ವಿಧೇಯಕದ ಪರವಾಗಿ ರಾಜ್ಯಸಭೆಯಲ್ಲಿ 131 ಮತಗಳು ದೊರತೆರೆ, ವಿರುದ್ಧವಾಗಿ 102 ಮತಗಳು ಬಿದ್ದವು.

ರಾಜ್ಯಸಭೆಯಲ್ಲಿ ವಿವಾದಾತ್ಮಕ ವಿಧೇಯಕದ ಮೇಲಿನ ಚರ್ಚೆಗೆ ಉತ್ತರಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿಧೇಯಕವು ಯಾವುದೇ ರೀತಿಯಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲಂಘಿಸುವುದಿಲ್ಲ ಎಂದು ಪ್ರತಿಪಾದಿಸಿದರು. ರಾಷ್ಟ್ರ ರಾಜಧಾನಿಯಲ್ಲಿ ಪರಿಣಾಮಕಾರಿ, ಭ್ರಷ್ಟಾಚಾರ ಮುಕ್ತ ಆಡಳಿತದ ಗುರಿಯನ್ನು ಈ ವಿಧೇಯಕವು ಹೊಂದಿದೆ ಎಂದು ಶಾ ಹೇಳಿದರು. ಕಾಂಗ್ರೆಸ್ ಆಡಳಿತದಿಂದಲೂ ಚಾಲ್ತಿಯಲ್ಲಿರುವ ವ್ಯವಸ್ಥೆಯ ಸ್ಥಿತಿಯನ್ನು ಬದಲಾಯಿಸುವ ಒಂದು ನಿಬಂಧನೆಯೂ ಇಲ್ಲ ಎಂದು ಅವರು ಸದನಕ್ಕೆ ಭರವಸೆ ನೀಡಿದರು.

ತನ್ನ ಹಗರಣಗಳನ್ನು ಮುಚ್ಚಿಕೊಳ್ಳುವುದಕ್ಕಾಗಿ ಆಪ್ ಸರ್ಕಾರ ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿದೆ. ಇದನ್ನು ತಡೆಯುವ ಉದ್ದೇಶವನ್ನು ಸುಗ್ರೀವಾಜ್ಞೆ ಹೊಂದಿತ್ತು ಎಂದು ತಮ್ಮ ವಿಧೇಯಕವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಮರ್ಥಿಸಿಕೊಂಡರು. ಅಬಕಾರಿ ನೀತಿ ಹಗರಣ ಮತ್ತು ಶೀಶ್-ಮಹಲ್‌ಗೆ ಸಂಬಂಧಿಸಿದ ಕಡತಗಳನ್ನು ಹೊಂದಿರುವ ಕಾರಣ ದಿಲ್ಲಿ ಸರ್ಕಾರವು ಕಣ್ಗಾವಲು ಇಲಾಖೆಗೆ ಸಂಬಂಧಿಸಿದಂತೆ ತುಂಬಾ ಆತುರವಾಗಿ ವರ್ತಿಸಿದೆ ಎಂದು ಅವರು ಆರೋಪಿಸಿದರು.

ಇದೇ ವೇಳೆ, ಕಾಂಗ್ರೆಸ್ ಪಕ್ಷವು ಆಪ್‌ಗೆ ನೀಡಿರುವ ಬೆಂಬಲವನ್ನು ಹೀಗಳೆದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಒಂದು ವೇಳೆ, ಕಾಂಗ್ರೆಸ್ ಪಕ್ಷವು ಆಪ್‌ಗೆ ಬೆಂಬಲ ನೀಡದೇ ಹೋದಿರೆ ಅರವಿಂದ್ ಕೇಜ್ರಿವಾಲ್ ಅವರು ಇಂಡಿಯಾ ಕೂಟವನ್ನು ತೊರೆಯಲಿದ್ದಾರೆ. ದಿಲ್ಲಿ ಸರ್ವೀಸ್ ಬಿಲ್ ಪಾಸಾ ಆದ ಮೇಲೆ ಆಪ್ ಕೂಟವನ್ನು ತೊರೆಯಲಿದ್ದಾರೆ. ಅಲ್ಲದೇ, ಈ ವಿಧೇಯಕವು ಯಾವುದೇ ತುರ್ತು ಪರಿಸ್ಥಿತಿಯನ್ನು ಹೇರಲು ಅಥವಾ ನಾಗರಿಕ ಹಕ್ಕುಗಳನ್ನು ಕಸಿದುಕೊಳ್ಳಲು ಅಲ್ಲ ಎಂದು ತಿವಿದರು.

ಈ ಹಿಂದೆ ದಿಲ್ಲಿಯ್ಲಲಿ ವರ್ಗಾವಣೆ, ನಿಯೋಜನೆಗೆ ಬಗ್ಗೆ ಯಾವುದೇ ಜಗಳಗಳಿರಲಿಲ್ಲ, ಯಾವುದೇ ಮುಖ್ಯಮಂತ್ರಿಗಳಿಗೆ ಯಾವುದೇ ಸಮಸ್ಯೆ ಇರಲಿಲ್ಲ. 2015 ರಲ್ಲಿ ‘ಆಂದೋಲನ’ ನಂತರ ಸರ್ಕಾರವೊಂದು ಬಂದಿತು … ಕೇಂದ್ರವು ಅಧಿಕಾರವನ್ನು ತನ್ನ ಕೈಗೆ ತೆಗೆದುಕೊಳ್ಳಲು ಬಯಸುತ್ತದೆ ಎಂದು ಕೆಲವರು ಹೇಳಿದರು. ಆದರೆ, ಕೇಂದ್ರಕ್ಕೆ ಹಾಗೆ ಮಾಡುವ ಯಾವುದೇ ಉದ್ದೇಶವಿಲ್ಲ. ಯಾಕೆಂದರೆ, ಭಾರತದ ಜನರು ನಮಗೆ ಅಧಿಕಾರ ಮತ್ತು ಹಕ್ಕನ್ನು ನೀಡಿರುವುದರಿಂದ ಹಾಗೆ ಮಾಡುವ ಅಗತ್ಯವಿಲ್ಲ ಎಂದು ಶಾ ಹೇಳಿದರು.

ಇದಕ್ಕೂ ಮೊದಲು ಮಾತನಾಡಿದ ಆಪ್ ಎಂಪಿ ರಾಘವ್ ಛಡ್ಡಾ ಅವರು, ಈ ವಿಧೇಯಕವು ರಾಜಕೀಯ ಮೋಸವಾಗಿದೆ. ಸಂವಿಧಾನಕ್ಕೆ ಶಾಪವಾಗಿದೆ. ಇದರಿಂದ ಆಡಳಿತಾತ್ಮಕ ಗೊಂದಲು ಏರ್ಪಡಲಿದೆ ಎಂದು ಹೇಳಿದರು. ಕಳೆದ 40 ವರ್ಷಗಳಿಂದಲೂ ಬಿಜೆಪಿ ದಿಲ್ಲಿ ರಾಜ್ಯಾಧಿಕಾರವನ್ನು ಬೇಡಿಕೆ ಇಡುತ್ತಲೇ ಬಂದಿದೆ. ಈ ಇದೇ ಭರವಸೆಯನ್ನು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿತ್ತು. ದಿಲ್ಲಿಗೆ ರಾಜ್ಯದ ಅಧಿಕಾರ ಒದಗಿಸುವ ತನ್ನ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಆಡ್ವಾಣಿ ಅವರ 40 ವರ್ಷಗಳ ಶ್ರಮವನ್ನು ಇಂದು ಅಳಿಸಿ ಹಾಕಿದೆ ಎಂದು ಕುಟುಕಿದರು.

ಈ ಸುದ್ದಿಯನ್ನೂ ಓದಿ: Lok Sabha: ಲೋಕಸಭೆಯಲ್ಲಿ ದಿಲ್ಲಿ ಸರ್ವೀಸ್ ಬಿಲ್ ಪಾಸ್! ಆಪ್‌ಗೆ ಭಾರೀ ಹಿನ್ನಡೆ, ಪ್ರತಿ ಪಕ್ಷಗಳು ವಾಕೌಟ್

ದಿಲ್ಲಿ ಸರ್ವೀಸ್‌ಗಳ ವಿಧೇಯಕವನ್ನು ಸಮರ್ಥಿಸಿಕೊಳ್ಳುವಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾರತದ ಪ್ರಥಮ ಪ್ರಧಾನಿ ಪಂಡಿತ ಜವಾಹರ್ ಲಾಲ್ ನೆಹರು ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದರು. ಈ ಕುರಿತು ವ್ಯಂಗ್ಯ ಮಾಡಿದ ಆಪ್ ಸಂಸದ ರಾಘವ್ ಛಡ್ಡಾ ಅವರು, ಬಿಜೆಪಿ ನಾಯಕರು ನೆಹರುವಾದಿಗಳು ಆಗುವುದರ ಬದಲಾಗಿ ಆಡ್ವಾಣಿವಾದಿಗಳಾಗಬೇಕು ಎಂದು ಹೇಳಿದರು. ಕಾಂಗ್ರೆಸ್‌ನ ನಾಯಕ ಅಭಿಷೇಕ್ ಮನು ಸಿಂಘ್ವಿ ಅವರು ಮಾತನಾಡಿ, ಇದೊಂದು ಸಂಪೂರ್ಣವಾಗಿ ಅಸಾಂವಿಧಾನಿಕ ವಿಧೇಯಕವಾಗಿದೆ ಎಂದು ಹೇಳಿದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version