ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಿಂದ (IGI Airport) ಪುಣೆಗೆ ಹೊರಡಬೇಕಿದ್ದ ವಿಸ್ತಾರ ಏರ್‌ಲೈನ್ಸ್ (Vistara Airlines) ವಿಮಾನಕ್ಕೆ ಬಾಂಬ್ ಬೆದರಿಕೆ (Bomb Threat) ಹಾಕಿದ್ದು, ಆತಂಕಗೊಂಡ ಪ್ರಯಾಣಿಕರು ಕೂಡಲೇ ವಿಮಾನದಿಂದ ಕೆಳಗಿಳಿದಿದ್ದಾರೆ ಎಂದು ತಿಳಿದುಬಂದಿದೆ. ಬಾಂಬ್ ಬೆದರಿಕೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ವಿಮಾನಯಾನ ಸಂಸ್ಥೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
“ಶುಕ್ರವಾರ ಬೆಳಗ್ಗೆ (ಆಗಸ್ಟ್ 18) ದೆಹಲಿಯಲ್ಲಿರವ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಸ್ತಾರ ಏರ್‌ಲೈನ್ಸ್ ವಿಮಾನವು ಹಾರಾಟ ಆರಂಭಿಸಬೇಕಿತ್ತು. ಇನ್ನೇನು ವಿಮಾನ ಟೇಕಾಫ್ ಆಗಬೇಕು ಎನ್ನುವಷ್ಟರಲ್ಲಿ 8.52ರ ಸುಮಾರಿಗೆ ವಿಮಾನ ನಿಲ್ದಾಣದಿಂದ ಕರೆ ಬಂತು. ವಿಮಾನದಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಬೆದರಿಕೆ ಇದೆ ಎಂಬ ಕುರಿತು ಮಾಹಿತಿ ನೀಡಲಾಯಿತು. ಕೂಡಲೇ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು” ಎಂದು ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ವಿಮಾನದಲ್ಲಿ ಬಾಂಬ್ ಇರುವ ಕುರಿತು ಮಾಹಿತಿ ಲಭ್ಯವಾಗುತ್ತಲೇ ಕೂಡಲೇ ಅಗ್ನಿಶಾಮಕ ವಾಹನ, ಸಿಬ್ಬಂದಿಯನ್ನು ವಿಮಾನದ ಬಳಿ ಕಳುಹಿಸಲಾಯಿತು. ಭದ್ರತಾ ತಪಾಸಣೆ ಸೇರಿ ಹಲವು ರೀತಿಯ ಪರಿಶೀಲನೆ ಮಾಡಲಾಯಿತು. ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ವಿಮಾನದಲ್ಲಿದ್ದ ಪ್ರಯಾಣಿಕರು ಕೂಡಲೇ ಕೆಳಗಿಳಿದರು ಎಂದು ಮೂಲಗಳಿಂದ ತಿಳಿದುಬಂದಿದೆ.
ಇದನ್ನೂ ಓದಿ: Heart Attack : ವಿಮಾನ ಟೇಕ್ಆಫ್ಗೆ ಮೊದಲು ಪೈಲೆಟ್ ಹೃದಯಾಘಾತದಿಂದ ಸಾವು
“ಆತಂಕದಲ್ಲಿದ್ದ ಪ್ರಯಾಣಿಕರಿಗೆ ತಿಂಡಿ, ನೀರು ವಿತರಿಸಲಾಯಿತು. ವಿಮಾನದಿಂದ ಕೆಳಗಿಳಿದ ಕೆಲ ಸಮಯದ ಬಳಿಕ ಪ್ರಯಾಣಿಕರು ಸುಧಾರಿಸಿಕೊಂಡರು. ಭದ್ರತಾ ಸಿಬ್ಬಂದಿ ಸೇರಿ ಎಲ್ಲ ಅಧಿಕಾರಿಗಳು ಯಾವುದೇ ಅಪಾಯವಿಲ್ಲ ಎಂಬ ಕುರಿತು ಮಾಹಿತಿ ನೀಡಿದ ಬಳಿಕವೇ ವಿಮಾನವು ದೆಹಲಿಯಿಂದ ಪುಣೆಗೆ ಹಾರಾಟ ಆರಂಭಿಸಲಾಯಿತು” ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.