Site icon Vistara News

Delhi Air Pollution: ದೆಹಲಿಯಲ್ಲಿ ಉಸಿರಾಡಲೂ ಕಷ್ಟ; ಸಮ-ಬೆಸ ನಿಯಮ ಮತ್ತೆ ಜಾರಿ

Air Pollution

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ಪ್ರಮಾಣವು (Delhi Air Pollution) ದಿನೇದಿನೆ ಜಾಸ್ತಿಯಾಗುತ್ತಿದ್ದು, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅದರಲ್ಲೂ, ಮಕ್ಕಳು, ಹಿರಿಯರು ಉಸಿರಾಡಲು ಕೂಡ ಪರದಾಡುವಂತಾಗಿದೆ. ಹಾಗಾಗಿ, ದೆಹಲಿ ಸರ್ಕಾರವು (Delhi Government) ನವೆಂಬರ್‌ 13ರಿಂದ 20ರವರೆಗೆ ಸಮ-ಬೆಸ ಸಂಖ್ಯೆಯ ವಾಹನಗಳ ಸಂಚಾರ ನಿಯಮ ಜಾರಿಗೆ ತರಲು ನಿರ್ಧರಿಸಿದೆ. ವಾಹನಗಳ ಓಡಾಟ ನಿಯಂತ್ರಣದ ಮೂಲಕ ವಾಯುಮಾಲಿನ್ಯ ತಗ್ಗಿಸುವುದು ಸರ್ಕಾರದ ಗುರಿಯಾಗಿದೆ.

ವಾಹನಗಳ ಲೈಸೆನ್ಸ್‌ ಪ್ಲೇಟ್‌ಗಳ ಮೇಲೆ ಬೆಸ ಸಂಖ್ಯೆಗಳು ಅಂದರೆ 1, 3, 5, 7 ಹಾಗೂ 9 ಇರುವ ವಾಹನಗಳು ಒಂದು ದಿನ ಹಾಗೂ ಸಮ ಸಂಖ್ಯೆಗಳು ಅಂದರೆ 0, 2, 4, 6 ಹಾಗೂ 8 ಇರುವ ವಾಹನಗಳು ಮತ್ತೊಂದು ದಿನ ಮಾತ್ರ ಓಡಾಡಲು ಅವಕಾಶ ಇರುತ್ತದೆ ಎಂದು ಪರಿಸರ ಸಚಿವ ಗೋಪಾಲ್‌ ರೈ ತಿಳಿಸಿದ್ದಾರೆ.

Air Pollution

ವಾಯುಮಾಲಿನ್ಯದ ಹಿನ್ನೆಲೆಯಲ್ಲಿ ನವೆಂಬರ್‌ 5ರವರೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಆದರೂ, ಮಾಲಿನ್ಯ ಪ್ರಮಾಣವು ಜಾಸ್ತಿಯೇ ಆಗುತ್ತಿರುವುದರಿಂದ ರಜೆಯನ್ನು ವಿಸ್ತರಿಸಲಾಗಿದೆ. ಪ್ರಾಥಮಿಕ ಶಾಲೆಗಳಿಗೆ ನವೆಂಬರ್‌ 10ರವರೆಗೆ ರಜೆ ಘೋಷಿಸಲಾಗಿದೆ. 6-12ನೇ ತರಗತಿ ಮಕ್ಕಳಿಗೆ ಆನ್‌ಲೈನ್‌ ಕ್ಲಾಸ್‌ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ: Delhi Air Pollution: ದೆಹಲಿ ವಾಯುಮಾಲಿನ್ಯ; ಶಾಲೆಗಳಿಗೆ ರಜೆ ಘೋಷಿಸಿದ ಸರ್ಕಾರ!

ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕವು 411 ಇದೆ. ಇದು ಅಪಾಯಕಾರಿ ಹಂತದಲ್ಲಿರುವುದರಿಂದ ಜನ ಆತಂಕದಲ್ಲಿಯೇ ಕಾಲ ಕಳೆಯುವಂತಾಗಿದೆ. ಮಕ್ಕಳು ಹಾಗೂ ಹಿರಿಯ ನಾಗರಿಕರಿಗೆ ಉಸಿರಾಟದ ಸಮಸ್ಯೆ, ಕಣ್ಣಿನ ಸಮಸ್ಯೆಗಳು ಉಲ್ಬಣಿಸುತ್ತಿವೆ ಎಂದು ವೈದ್ಯರು ತಿಳಿಸಿದ್ದಾರೆ.

ಮಾಲಿನ್ಯಕಾರಕ ಅಂಶಗಳನ್ನು ಗುರುತಿಸುವ ‘ಪಿಎಂ 2.5’ ಕಣಗಳ ಆಧಾರದ ಮೇಲೆ ವಾಯುಮಾಲಿನ್ಯವನ್ನು ಅಂದಾಜಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಒಂದು ಘನ ಮೀಟರ್‌ಗೆ ಪಿಎಂ 2.5 ಕಣಗಳ ಮಟ್ಟವು ಒಂದು ಘನ ಮೀಟರ್‌ಗೆ 5 ಮೈಕ್ರೋ ಗ್ರಾಂ ಇರಬೇಕು. ಆದರೆ, ದೆಹಲಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವುದಕ್ಕಿಂತ 80ರಿಂದ 100 ಪಟ್ಟು ಜಾಸ್ತಿಯಾಗಿದೆ. ಹಾಗಾಗಿ, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇನ್ನು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸುವುದರಿಂದ ವಾಯುಮಾಲಿನ್ಯ ಪ್ರಮಾಣವು ಮತ್ತಷ್ಟು ಜಾಸ್ತಿಯಾಗಲಿದೆ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version