Site icon Vistara News

ದೆಹಲಿ ವಿಧಾನಸಭೆಯಲ್ಲಿ ಗದ್ದಲ, ಇಂದು ಕೇಜ್ರಿವಾಲ್‌ ವಿಶ್ವಾಸಮತ

delhi

ನವ ದೆಹಲಿ: ಆಳುವ ಆಮ್‌ ಆದ್ಮಿ ಪಾರ್ಟಿ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ನಡೆದಿರುವ ತಿಕ್ಕಾಟ ಸೋಮವಾರ ರಾತ್ರಿ ವಿಧಾನಸಭೆಯಲ್ಲಿ ಗದ್ದಲದ ಸ್ವರೂಪ ಪಡೆಯಿತು. ಎರಡೂ ಪಕ್ಷಗಳು ಸದಸ್ಯರು ರಾತ್ರಿಯಿಡೀ ವಿಧಾನಸಭೆಯಲ್ಲಿ ಹಾಗೂ ಹೊರಗೆ ಧರಣಿ ಮುಷ್ಕರಗಳನ್ನು ನಡೆಸಿ ಹೈಡ್ರಾಮಾ ಸೃಷ್ಟಿಯಾಯಿತು.

ಇಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಸದನದ ಮುಂದೆ ಶಾಸಕರ ವಿಶ್ವಾಸಮತ ಯಾಚಿಸಲಿದ್ದಾರೆ. ಆಪ್‌ ಸರಕಾರದ ಸಚಿವರು ಹಾಗೂ ಶಾಸಕರನ್ನು ಬಹುಕೋಟಿ ಆಮಿಷವೊಡ್ಡಿ ಬಿಜೆಪಿಗೆ ಸೆಳೆದುಕೊಳ್ಳಲು ಯತ್ನಿಸಲಾಗುತ್ತಿದೆ ಎಂದು ಕೇಜ್ರಿವಾಲ್‌ ಹಾಗೂ ಸಚಿವ ಮನೀಶ್‌ ಸಿಸೋಡಿಯಾ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಕೇಜ್ರಿವಾಲ್‌ ತಮ್ಮ ಬಲ ಸಾಬೀತುಪಡಿಸಲು ವಿಶ್ವಾಸಮತ ಯಾಚಿಸಿದ್ದಾರೆ. ಸೋಮವಾರ ನಡೆದ ಕಲಾಪದಲ್ಲಿ, ವಿಶ್ವಾಸಮತವನ್ನು ಮಂಗಳವಾರಕ್ಕೆ ಮುಂದೂಡಲಾಗಿತ್ತು.

ದೆಹಲಿಯ ಸರ್ಕಾರದ ಆಡಳಿತಾತ್ಮಕ ವಿಚಾರಗಳಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ಮೂಗು ತೂರಿಸುತ್ತಿದ್ದಾರೆ, ಅವರು ರಾಜೀನಾಮೆ ನೀಡಬೇಕು ಎಂದು ಆಪ್‌ ಒತ್ತಾಯಿಸಿದೆ. ಸಚಿವ ಮನೀಶ್‌ ಸಿಸೋಡಿಯಾ ಅವರು ನೂತನ ಅಬಕಾರಿ ನೀತಿಯಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ ಎಸಗಿದ್ದು, ಅವರು ರಾಜೀನಾಮೆ ಸಲ್ಲಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ಇದನ್ನೂ ಓದಿ | ಹಲವು ಸರ್ಕಾರಗಳನ್ನು ಕೊಂದ ಸರಣಿ ಹಂತಕ ಬಿಜೆಪಿ ಎಂದ ಕೇಜ್ರಿವಾಲ್​; ವಿಶ್ವಾಸ ಮತ ಯಾಚನೆಗೆ ನಿರ್ಧಾರ !

ಸೋಮವಾರ ದೆಹಲಿಯ ವಿಧಾನಸಭೆಯಲ್ಲಿ ಇದಕ್ಕೆ ಸಂಬಂಧಿಸಿ ಗದ್ದಲ ಉಂಟಾಗಿತ್ತು. ಸದನದ ಬಾವಿಗೆ ನುಗ್ಗಲು ಯತ್ನಿಸಿದ ಬಿಜೆಪಿ ಶಾಸಕರನ್ನು ಮಾರ್ಷಲ್‌ಗಳ ಮೂಲಕ ಹೊರಹಾಕಲಾಗಿತ್ತು. ‌ತದನಂತರ ಕಲಾಪ ಮುಂದೂಡಲಾಗಿತ್ತು. ನಂತರ ಬಿಜೆಪಿ- ಆಪ್‌ ಸದಸ್ಯರು ಪ್ರತ್ಯೇಕವಾಗಿ ಧರಣಿ ಕೂತಿದ್ದು, ಅವುಗಳ ವಿಡಿಯೋಗಳನ್ನು ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದಾರೆ.

ಬಿಜೆಪಿ ನಮ್ಮ ಶಾಸಕರ ಕುದುರೆ ವ್ಯಾಪಾರಕ್ಕೆ ಮುಂದಾಗಿದೆ. ಆಪರೇಶನ್‌ ಕಮಲದ ಮೂಲಕ ಇದನ್ನು ಮಾಡಲು ಮುಂದಾಗಿದ್ದ ಬಿಜೆಪಿ ವಿಫಲವಾಗಿದೆ. ವಿಶ್ವಾಸಮತ ಯಾಕೆಂದು ನನ್ನನ್ನು ಪ್ರಶ್ನಿಸಲಾಗಿದೆ. ಇಂಥ ಪ್ರಯತ್ನಗಳ ನಡುವೆಯೂ ನಮ್ಮ ಸರ್ಕಾರ ದೃಢವಾಗಿದೆ ಎಂದು ತೋರಿಸಲು ಇದು ಅಗತ್ಯವಾಗಿತ್ತು- ಎಂದು ಅರವಿಂದ ಕೇಜ್ರಿವಾಲ್‌ ಸದನದಲ್ಲಿ ಹೇಳಿದ್ದರು.

Exit mobile version